ಶಾಂತಿ ಸಹಬಾಳ್ವೆಯಿಂದ ಹಬ್ಬ ಆಚರಣೆ ಮಾಡಿ

| Published : Mar 18 2025, 12:32 AM IST

ಸಾರಾಂಶ

ಹನೂರು ಪೊಲೀಸ್ ಠಾಣೆಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ, ರಂಜಾನ್, ಯುಗಾದಿ ಹಬ್ಬದ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದಲ್ಲಿ ಮುಂದಿನವಾರ ನಡೆಯಲಿರುವ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದಲ್ಲಿ ಸರ್ವಧರ್ಮದವರು ಶಾಂತಿ ಸಹ ಬಾಳ್ವೆಯಿಂದ ಹಬ್ಬ ಆಚರಣೆ ಮಾಡಬೇಕು. ಯಾವುದೇ ಕೋಮು ಗಲಭೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ, ರಂಜಾನ್ ಯುಗಾದಿ ಹಬ್ಬದ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಹನೂರು ತಾಲೂಕು ವ್ಯಾಪ್ತಿ ಎಲ್ಲ ಸಮುದಾಯದವರು ಅಣ್ಣ ತಮ್ಮಂದಿರಂತೆ ಪ್ರತಿಯೊಂದು ಹಬ್ಬಗಳಲ್ಲಿ ಭಾಗವಹಿಸುವ ಮೂಲಕ ಶಾಂತಿಯ ಸಂದೇಶ ಸಾರುತ್ತಿದ್ದಾರೆ. ಹನೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿ ಯಾವುದೇ ಕೋಮುಗಲಭೆಗೆ ಅವಕಾಶ ಕೊಡದೆ ಎಲ್ಲರೂ ಅನೂನ್ಯವಾಗಿರುವುದನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಇನ್ಸ್‌ಪೆಕ್ಟರ್ ಆನಂದ್ ಮೂರ್ತಿ ಮಾತನಾಡಿ, ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವು ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತದೆ. ಅದರಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಯಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಎಲ್ಲಾ ಸಮಾಜದವರು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಹಬ್ಬ ಆಚರಣೆ ಮಾಡಬೇಕು. ಕಾನೂನು ಮೀರಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮವಹಿಸಲಾಗುವುದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆ ದೇವಸ್ಥಾನದ ವತಿಯಿಂದ ಸಿಸಿ ಕ್ಯಾಮೆರಾ ಅಳವಡಿಸಬೇಕು, ತಾವು ಸಹ ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಬೇಕು, ಜನಸಂದಣಿ ಇರುವ ಕಡೆ ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗುವುದು, ದೇವಸ್ಥಾನದ ಆವರಣದಲ್ಲಿ ಮಹಿಳಾ ಪೇದೆಗಳನ್ನು ನಿಯೋಜನೆ ಮಾಡಲಾಗುವುದು, ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ದೇವಸ್ಥಾನದ ಆವರಣಕ್ಕೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ ಮಾಡಲಾಗುವುದು ಜಾತ್ರಾ ಮಹೋತ್ಸವದ ಯಶಸ್ವಿಗೆ ಪ್ರತಿಯೊಬ್ಬರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದರು.

ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಕಾರ್ಯದರ್ಶಿ ಲಿಂಗರಾಜುಗೌಡ ಮಾತನಾಡಿ, ಹನೂರಿನಲ್ಲಿ 4 ದಿನ ಜಾತ್ರಾ ಮಹೋತ್ಸವ ನಡೆಯಲಿದ್ದು ಸೋಮವಾರ ದಿಂದ ಗುರುವಾರದವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಮಂಗಳವಾರ ಹಾಗೂ ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿ ಕೊಡಬೇಕು, ಕೆಲವು ಕಿಡಿಗೇಡಿಗಳು ಕಾನೂನು ವ್ಯವಸ್ಥೆಗೆ ದಕ್ಕೆ ಮಾಡುವ ನಿಟ್ಟಿನಲ್ಲಿ ಸಂಚುರೂಪಿಸುತ್ತಾರೆ ಇಂಥವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದರು.

ಪಪಂ ಸದಸ್ಯ ಗಿರೀಶ್ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ಸಂಚಾರ ದಟ್ಟಣೆಯಾಗಲಿದೆ. ಸಂಚಾರ ನಿಯಂತ್ರಿಸಲು ಮುಖ್ಯ ರಸ್ತೆಗಳಲ್ಲಿ ಹೆಚ್ಚು ಸಿಬ್ಬಂದಿ ನೇಮಕ ಮಾಡಬೇಕು ದ್ವಿಚಕ್ರ ವಾಹನಗಳನ್ನು ದೇವಸ್ಥಾನದ ಆವರಣಕ್ಕೆ ಬಿಡಬಾರದು ಎಂದರು. ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜು ಮಾತನಾಡಿ, ಜಾತ್ರೆ ಸುಗಮವಾಗಿ ನಡೆಯಲು ಅಂಗಡಿ ಮಳಿಗೆಗಳನ್ನು ಹಿಂದಕ್ಕೆ ಹಾಕಿಕೊಳ್ಳುವಂತೆ ಮೊದಲೇ ಸೂಚನೆ ನೀಡಬೇಕು, ಜಾತ್ರೆಯಲ್ಲಿ ಯಾವುದೇ ಸಮುದಾಯದವರು ಗಲಾಟೆ ಮಾಡಿದರೂ ಅವರಿಗೆ ತಕ್ಕ ಶಿಕ್ಷೆ ಆಗಲಿ ಇದಕ್ಕೆ ಯಾರೊಬ್ಬರು ಅವರ ಸಹಾಯಕ್ಕೆ ಬರುವುದಿಲ್ಲ ಎಂದರು.

ಬಂಡಳ್ಳಿ ಗ್ರಾಮದ ಜಸ್ಸಿಮ್ ಪಾಷಾ ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿ ಸರ್ವಧರ್ಮದವರು ಯಾವುದೇ ಹಬ್ಬಗಳಲ್ಲಿ ಇದುವರೆಗೂ ಗಲಾಟೆ ಮಾಡಿಕೊಂಡಿಲ್ಲ, ಮಾಡುವುದು ಇಲ್ಲ, ಇದೇ ತಿಂಗಳು ರಂಜಾನ್ ಹಬ್ಬವು ಜರುಗಲಿದ್ದು ಹಬ್ಬದ ದಿನ ಸಂಪ್ರದಾಯದಂತೆ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದೇವೆ. ಈ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು ನಮ್ಮ ಯುವಕರ ತಂಡ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಅಲ್ಲಿಯೇ ಬಗೆಹರಿಸಿಕೊಳ್ಳಲಿದ್ದೇವೆ ಎಂದರು.

ಸಭೆಯಲ್ಲಿ ಪಪಂ ಅಧ್ಯಕ್ಷ ಮಮ್ತಾಜ್ ಬಾನು, ಸದಸ್ಯರಾದ ಗಿರೀಶ್, ಮಹಾದೇಶ್, ಸಂಪತ್, ಸೋಮಶೇಖರ್ ,ಮಹೇಶ್ ನಾಯಕ ಮಾಜಿ ಉಪಾಧ್ಯಕ್ಷ ಮಾದೇಶ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಮುಖಂಡರುಗಳಾದ ತಿಮ್ಮೇಗೌಡ, ರವಿ,ಮಾದೇಶ್, ಚಿಕ್ಕಣ್ಣ,ಮಾದೇಶ್,ಮಹಾದೇವಸಿದ್ದರಾಜು, ವಿಜಯಕುಮಾರ್, ಪ್ರಸನ್ನ,ಲಿಂಗರಾಜು, ಅಮೀನ್, ಸಮಿವುಲ್ಲಾ, ಶಬ್ಬೀರ್, ಇಸ್ಮಾಯಿಲ್, ಫೈರೋಜ್, ರಾಹಿಲ್, ತಾಲೂಕು ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್ ಹಾಜರಿದ್ದರು.