ಸಾರಾಂಶ
ಸಂಗೊಳ್ಳಿ ರಾಯಣ್ಣ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿ, ಮುಂಬರುವ ವರ್ಷಗಳಲ್ಲಿ ಜ.12 ಹಾಗೂ 13 ರಂದೇ ನಿಯಮಿತವಾಗಿ ಸಂಗೊಳ್ಳಿ ಉತ್ಸವವನ್ನು ಆಚರಿಸಬೇಕು ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿದಂತೆ ಎಲ್ಲರೂ ಜಾತ್ಯಾತೀತವಾಗಿ ಗುರುತಿಸಲ್ಪಡುವಂತವರು. ಬರುವ ವರ್ಷಗಳಲ್ಲಿ ಜ.12 ಹಾಗೂ 13 ರಂದೇ ನಿಯಮಿತವಾಗಿ ಸಂಗೊಳ್ಳಿ ಉತ್ಸವವನ್ನು ಆಚರಿಸಬೇಕು ಎಂದು ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಂಗೊಳ್ಳಿ ರಾಯಣ್ಣ ಸ್ಮಾರಕ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸಂಗೊಳ್ಳಿ ರಾಯಣ್ಣ ಉತ್ಸವದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈ ಬಾರಿ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವುದು ಸಂತಸದ ಸಂಗತಿ. ವಿಚಾರ ಸಂಕಿರಣದಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಶಾಸಕ ಮಹಾಂತೇಶ ಕೌಜಲಗಿ ಅವರ ಪ್ರಯತ್ನದ ಫಲವಾಗಿ ₹1 ಕೋಟಿ ಅನುದಾನ ಲಭಿಸಿದೆ. ವಿನೂತನ ಕಾರ್ಯಕ್ರಮ ಜರುಗಲಿವೆ. ಉತ್ಸವದ ಯಶಸ್ಸಿಗಾಗಿ ಒಟ್ಟಾರೇ 13 ಉಪ ಸಮಿತಿಗಳನ್ನು ರಚಿಸಲಾಗುವುದು. ಗ್ರಾಮಸ್ಥರು ಸಹಕಾರ ಮಾಡಬೇಕು ಎಂದು ತಿಳಿಸಿದರು.ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಜ.17, 18 ರಂದು ನಡೆಯಲಿರುವ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಉತ್ಸವಕ್ಕೆ ಸರ್ಕಾರದ ₹1 ಕೋಟಿ ಬಿಡುಗಡೆ ಮಾಡಿದೆ. ಉತ್ಸವದ ಸಂದರ್ಭದಲ್ಲಿ ರಾಕ್ ಗಾರ್ಡನ್, ಬೇವಿನಕೊಪ್ಪ-ಸಂಗೊಳ್ಳಿ ಮಧ್ಯದ ರಸ್ತೆ ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಿಎಂ ಉದ್ಘಾಟಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಗೊಳ್ಳಿ ಸೈನಿಕ ಶಾಲೆ, ರಾಕ್ ಗಾರ್ಡನ್ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿರುತ್ತಾರೆ. ಉತ್ಸವದಲ್ಲಿ ಅವರು ಭಾಗವಹಿಸಲಿರುವುದರಿಂದ ಉತ್ಸವಕ್ಕೆ ಮೆರುಗು ಬರಲಿದೆ ಎಂದು ತಿಳಿಸಿದರು.