ಸಾರಾಂಶ
ಮುರುಗೇಶ ನಿರಾಣಿ ಕರ್ನಾಟಕದ ಚಿರಪರಿಚಿತ ಹೆಸರು. ಉದ್ಯಮ, ರಾಜಕಾರಣ, ಸಮಾಜಸೇವೆ ಎಲ್ಲದರಲ್ಲೂ ಅದ್ಭುತ ಕ್ರಾಂತಿ ಮಾಡಿದ ಸದಾ ಹೊಸತನವನ್ನು ಬಯಸುವ ದೂರದೃಷ್ಟಿಯ ನಾಯಕ.
ಅವರ ಬದುಕು ಬೆಳವಣಿಗೆ ಸಾಧನೆಯ ಮೇಲೊಮ್ಮೆ ಕಣ್ಣಾಡಿಸಿದಾಗ ಉತ್ತರಕರ್ನಾಟಕದ ಬಸವ ಹಂಚಿನಾಳದ ಕೃಷ್ಣಾ ನದಿ ತೀರದ ಅಪ್ಪಟ ದೇಸಿ ಪ್ರತಿಭೆಯೊಂದು ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸಾಹಸದ ಕಥೆ ಅನಾವರಣಗೊಳ್ಳುತ್ತದೆ. ಈ ದಿವ್ಯ ಸಾಹಸಿಯ ಬದುಕಿಗೆ ಈಗ 60ರ ಸಂಭ್ರಮ. ತನ್ಮಿನಿತ್ತ ಈ ಲೇಖನ.ಅಪ್ಪಟ ದೇಸಿ ಪ್ರತಿಭೆ: ಸಾವಿರ ಸಂಕಷ್ಟದ ನಡುವೆ ಮೂಡಿ ಬಂದ ಬೆಳಕು
ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನಬಸವ ಹಂಚಿನಾಳ ಗ್ರಾಮ. ತಂದೆ ರುದ್ರಪ್ಪ, ತಾಯಿ ಸುಶೀಲಾತಾಯಿ. ಐವರು ಸಹೋದರರು, ಇಬ್ಬರು ಸಹೋದರಿಯರು ಇರುವ ಅವಿಭಕ್ತಕುಟುಂಬ. ಪ್ರಾಥಮಿಕ ಶಾಲೆಯನ್ನು ಬಸವ ಹಂಚಿನಾಳದಲ್ಲಿ ಮುಗಿಸಿ ಪ್ರೌಢ ವ್ಯಾಸಂಗವನ್ನು ಮುಧೋಳದ ಆರ್.ಎಂ.ಜಿ ಕಾಲೇಜು ಅಲ್ಲಿಂದ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿಸಿನೆಸ್ ಮ್ಯಾನೆಜಮೆಂಟ್ ಪದವಿ ಪಡೆದಿದ್ದಾರೆ.ಎಂ.ಆರ್.ಎನ್ ಟ್ರ್ಯಾಕ್ಟರ್ ಟ್ರೈಲರ್ ತಯಾರಿಸುವ ಅಟೋಮೊಬೈಲ್ ವರ್ಕ್‌ಶಾಪ್ ಮೂಲಕ ಪ್ರಾರಂಭವಾದ ಉದ್ಯಮದ ಬುದುಕು ಕೃಷಿಯ ಬಗೆಗಿನ ಅಂತಃಕರಣ, ಅಂದಿನ ಕಾಲದ ಕಬ್ಬು ಬೆಳೆಗಾರನ ಕಷ್ಟದ ದಿನಗಳು ಸ್ವಂತ ಸಕ್ಕರೆ ಕಾರ್ಖಾನೆ ಪ್ರಾರಂಭದ ಕಡೆಗೆ ಮುಖ ಮಾಡಿ ನಿಲ್ಲಿಸಿದವು. ಒಂದೆಡೆ ಬಿಸಿಲಲ್ಲಿ ನಿಂತ ರೈತನ ಬದುಕು, ಮತ್ತೊಂದೆಡೆ ಮನೆಯವರ ವಿರೋಧ ಈ ಸಂದಿಗ್ಧತೆಯ ನಡುವೆ ತೆಗೆದುಕೊಂಡ ಒಂದು ಐತಿಹಾಸಿಕ ನಿರ್ಧಾರ ಉತ್ತರ ಕರ್ನಾಟಕ ಕೃಷಿ ಉದ್ಯಮರಂಗಕ್ಕೆ ಹೊಸ ಭಾಷ್ಯ ಬರೆಯಿತು. ಅಂದು 500 ಟಿಸಿಡಿ ಸಕ್ಕರೆ ಕಾರ್ಖಾನೆಯಿಂದ ಪ್ರಾರಂಭವಾದ ನಿರಾಣಿಯವರ ಸಕ್ಕರೆಯ ಮಾಹಾಯಾನ ಇಂದು ಭಾರತದ 3ನೇ ಅತಿದೊಡ್ಡ ಸಕ್ಕರೆ ಉತ್ಪಾದನೆ ಹಾಗೂ ದೇಶದ ಅಗ್ರಗಣ್ಯ ಎಥೆನಾಲ್ ಉತ್ಪಾದಕ ಸಮೂಹವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ.
ಟ್ರ್ಯೂಆಲ್ಟ್ ಬಯೋ ಎನರ್ಜಿ: ಭಾರತ ಹಸಿರು ಇಂಧನ ಕ್ಷೇತ್ರದ ಹೊಸ ಭರವೆಸೆ ಟ್ರ್ಯೂಆಲ್ಟ್ ಬಯೋಎನರ್ಜಿ ಭಾರತ ಹಸಿರು ಇಂಧನಕ್ಷೇತ್ರ ಹೊಸ ಭರವಸೆಯಾಗಿ ಹೊಮ್ಮಿದೆ. ಇಥೇನಾಲ್ ಹಾಗೂ ಬಯೋ ಸಿ.ಎನ್.ಜಿ ಕ್ಷೇತ್ರದ ಹೊಸ ಅವಿಷ್ಕಾರಗಳು ರೈತನನ್ನು ಭಾರತದ ಇಂಧನ ಕ್ಷೇತ್ರದ ಉತ್ಪಾದಕಕನ್ನಾಗಿಸುವ ಜೊತೆಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೆಕ್‌ಇನ್‌ಇಂಡಿಯಾ, ಇಥೇನಾಲ್ ಬ್ಲೆಂಡಿಂಗ್ ಪೆಟ್ರೋಲ್ ಕಾರ್ಯಕ್ರಮ ಹಾಗೂ ಭಾರತದ ಪೆಟ್ರೋಲಿಯಂ ಖರೀದಿಯನ್ನು ತಗ್ಗಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತು ಕೆಲಸ ಮಾಡುತ್ತಿದೆ. ಶೆಲ್, ನಯರಾ, ಜಿಯೋ ಬಿಪಿ ನಂತರ ಟ್ರ್ಯೂಆಲ್ಟ್‌ಕಂಪನಿಯು ಭಾರತೀಯ ತೈಲ ಮಾರುಕಟ್ಟೆಗೆ ಮಾನ್ಯತೆ ಪಡೆಯುವ ಮೂಲಕ ದೇಶದ ಚಿಲ್ಲರೆ ಇಂಧನ ಮಾರಾಟ ಜಾಲವನ್ನು ಪ್ರವೇಶಿಸಿದ 4ನೇ ಖಾಸಗಿ ವಲಯದ ಕಂಪನಿಯಾಗಿರುವುದು ಕನ್ನಡಿಗರ ಹೆಮ್ಮೆಯಾಗಿದೆ.ಸಕ್ಕರೆ, ಸಿಮೆಂಟ್, ಎಥೇನಾಲ್, ಸಹವಿದ್ಯುತ್, ಸಿಒ2, ಬಯೋ ಫರ್ಟಿಲೈಜರ್ಸ್, ಬ್ಯಾಂಕಿಂಗ್, ಶಿಕ್ಷಣ, ಸಮಾಜಸೇವೆ, ಅಗ್ರಿಮಾರ್ಟ್ ಹಾಗೂ ಸೂಪರ್ ಮಾರ್ಕೆಟ್ ಹೀಗೆ ಹಲವು ಕ್ಷೇತ್ರಗಳ ಮೂಲಕ ಲಕ್ಷಾಂತರ ರೈತ ಕುಂಟುಂಬಗಳು, ಕಾರ್ಖಾನೆ ಸಿಬ್ಬಂದಿ ಮತ್ತು ಕಾರ್ಮಿಕರ ವರ್ಗ ಹಾಗೂ ಕೃಷಿ ಕಾರ್ಮಿಕರಿಗೆ ನಿರಾಣಿ ಪರಿವಾರ ವರವಾಗಿ ಬೆಳೆದಿದೆ.
ಧಾನ್ಯಗಳಿಂದ ಇಥೇನಾಲ್ ಉತ್ಪಾದನೆ ರೈತನಿಗೆ ಮತ್ತಷ್ಟು ಆರ್ಥಿಕಬಲ!ಮೆಕ್ಕೆಜೋಳ ಸೇರಿದಂತೆ ಹಲವು ಸಿಹಿ ಧಾನ್ಯಗಳಿಂದ (ಗ್ರೇನ್) ಇಥೇನಾಲ್ ಉತ್ಪಾದಿಸುವ ಮೂಲಕ ಜಿಲ್ಲೆಯ ರೈತನ ಮೆಕ್ಕೆಜೋಳ ಬೆಳೆಯುವ ರೈತನ ಆರ್ಥಿಕ ಪ್ರಗತಿಗೆ ನಿರಾಣಿ ಸಮೂಹ ಜೊತೆಯಾಗಿ ನಿಲ್ಲಲಿದೆ. ಆ.16 ರಂದು ಟ್ರ್ಯೂಆಲ್ಟ್ ಬಯೋಎನರ್ಜಿ ವತಿಯಿಂದ ಮುಧೋಳದಲ್ಲಿ 550 ಕೆ.ಎಲ್.ಪಿ.ಡಿ ಹಾಗೂ ಕೆರಕಲಮಟ್ಟಿಯಲ್ಲಿ 300 ಕೆ.ಎಲ್.ಪಿ.ಡಿ ಗ್ರೇನ್‌ಎಥೇನಾಲ್ ಘಟಕಗಳು ಲೋಕಾರ್ಪಣೆಗೊಳ್ಳಲಿವೆ. ಬಾದಾಮಿಯ 300 ಕೆ.ಎಲ್.ಪಿ.ಡಿ ಗ್ರೇನ್‌ಇಥೇನಾಲ್ ಘಟಕಕ್ಕೆ ಭೂಮಿಪೂಜೆ ನೆರವೇರಲಿದೆ. ಬಯೋ ಸಿ.ಎನ್.ಜಿ ಉತ್ಪಾದನೆಯಲ್ಲಿ ಕ್ರಾಂತಿ ಮಾಡಿರುವ ನಿರಾಣಿ ಸಮೂಹದಿಂದ ಕೆರಕಲಮಟ್ಟಿ ಹಾಗೂ ಬಾದಾಮಿಗಳಲ್ಲಿ 20 ಟಿಪಿಡಿ ಸಾಮರ್ಥ್ಯದ ಬಯೋ ಸಿಎನ್‌ಜಿ ಘಟಕಕ್ಕೆ ಭೂಮಿಪೂಜೆ ನೆರವೇರಲಿದೆ.
ಹುಟ್ಟುಹಬ್ಬದ ನಿಮಿತ್ತ ಹಲವು ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆ!ಮುರುಗೇಶ ನಿರಾಣಿಯವರ ಹುಟ್ಟುಹಬ್ಬವೆಂದರೆ ಅಲ್ಲಿ ಸದಾ ವಿಭಿನ್ನತೆಯ ಹೊಸನೋಟವಿರುತ್ತದೆ. ಸಾಮಾಜಿಕ ಕಳಕಳಿ ಇರುತ್ತದೆ. ಹೀಗಾಗಿ ಹುಟ್ಟುಹಬ್ಬದ ನಿಮಿತ್ತ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆ.16 ರಿಂದ ಆ.30ರವರೆಗೆ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ನದಿ ತೀರದಲ್ಲಿ ಭವ್ಯ ಕೃಷ್ಣಾ ಆರತಿ, 501 ದೇವಸ್ಥಾನಗಳಲ್ಲಿ ಮಹಾಪೂಜೆ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ್ಣು-ಹಂಪಲು ವಿತರಣೆ, ಅನಾಥಾಶ್ರಮ, ವೃದ್ದಾಶ್ರಮ ಹಾಗೂ ವಿಕಲಚೇತನ ಕೇಂದ್ರಗಳಲ್ಲಿ ಸಿಹಿ ವಿತರಣೆ. ಗೋಶಾಲೆಗಳಲ್ಲಿ ಗೋಪೂಜೆ ಹಾಗೂ ನಿರಾಣಿ ಸಮೂಹದ ಕಾರ್ಖಾನೆಗಳಲ್ಲಿ ಮಹಾವೃಕ್ಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿಯ ಎಂ.ಎಂ.ಜೋಶಿ ಆಸ್ಪತ್ರೆ ಸಹಯೋಗದೊಂದಿಗೆ ನೇತ್ರತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ಬೆಳಗಾವಿಯ ಕೆ.ಎಲ್.ಇ ಆಸತ್ರೆ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಆಯೋಜಿಸಲಾಗಿದೆ. ಅಲ್ಲದೇ ಜಿಲ್ಲೆಯ ಹಲವು ಕಡೆ ಪಶು ಚಿಕಿತ್ಸಾ ಶಿಬಿರ ಮತ್ತು ಕೃಷಿ ವಿಚಾರ ಸಂಕೀರಣ ಹಾಗೂ ಕಬ್ಬುಅಭಿವೃದ್ಧಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ.
ಕುಂಭಮೇಳ ಮಾದರಿಯಲ್ಲಿ ಪುಣ್ಯಸ್ನಾನ:ಕರ್ನಾಟಕದ ಮಟ್ಟಿಗೆ ಕಾವೇರಿ ದಕ್ಷಿಣದ ಗಂಗೆಯಾದರೇ, ಕೃಷ್ಣೆ ಉತ್ತರದ ಗಂಗೆಯಾಗಿದ್ದಾಳೆ. ಹೀಗಾಗಿ ಕೃಷ್ಣೆ-ಕಾವೇರಿ ಇಬ್ಬರಿಗೂ ಸಮಾನ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಸರ್ಕಾರದ ಕಾವೇರಿ ಆರತಿಯಂತಹ ಹೊಸತನದ ಪ್ರಯತ್ನಕ್ಕೊಂದು ಅರ್ಥ ಬರುತ್ತದೆ. ಆ ಕಾರಣಕ್ಕಾಗಿ ಕಾವೇರಿಯಂತೆ ಕೃಷ್ಣೆಗೂ ಆರತಿ ನಡೆಯಲಿ ಎಂಬ ಆಶಯ ಹೊತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮುರುಗೇಶ ನಿರಾಣಿಯವರ 60ನೇ ಹುಟ್ಟುಹಬ್ಬ ನಿಮಿತ್ತ 2ನೇ ಬಾರಿಗೆ ಕೃಷ್ಣಾ ಆರತಿಯನ್ನು ಆ.16 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಕೃಷ್ಣಾ ನದಿ ತೀರದಲ್ಲಿ ಹಮ್ಮಿಕೊಳ್ಳಲಾಗಿದೆ. 250 ದೇವರ ಪಲ್ಲಕ್ಕಿಗಳು, ಸುಮಂಗಲೆಯರ ಪೂರ್ಣಕುಂಭದೊಂದಿಗೆ ಭವ್ಯ ಶೋಭಾಯಾತ್ರೆ ಹಾಗೂ ಹಿಮಾಲಯದ ನಾಗಾ ಸಾಧುಗಳನ್ನು ಕರೆಸಿ ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯಸ್ನಾನವನ್ನು ಆಯೋಜಿಸುತ್ತಿರುವುದು ಈ ಬಾರಿಯ ವೈಶಿಷ್ಟ್ಯ.
ಸಾಕ್ಷಾತ್ ಭಗವಾನ್ ವಿಷ್ಣುವಿನ ದೇಹದಿಂದ ಸೃಷ್ಟಿಯಾದ ಕೃಷ್ಣೆಯು ನಮ್ಮೆಲ್ಲರ ಕಲ್ಪವೃಕ್ಷ ಮತ್ತು ಕಾಮಧೇನು ನಂತರ ಸ್ವರ್ಗದ ಇಷ್ಟಾರ್ಥಗಳನ್ನು ಪೂರೈಸುವ ಮತ್ತು ಮೋಕ್ಷ ಸೇರಿದಂತೆ ಎಲ್ಲವನ್ನು ನೀಡುವ ನದಿಯ ರೂಪವಾಗಿ ಭೂ ಲೋಕದಲ್ಲಿ ಅವತರಿಸಿದ್ದಾನೆ. ಆ ಮಹಾತಾಯಿಯ ಮಡಿಲಿನಲ್ಲಿ ಹಸಿರಿನ ಸಮೃದ್ಧಿ ಪಡೆದು ಅತ್ಯುತ್ತಮ ಜೀವನ ಕಟ್ಟಿಕೊಂಡ ನಾವೆಲ್ಲರೂ ಸೇರಿ ಒಂದು ಬಾರಿ ನದಿ ಪೂಜೆ ಮಾಡಿ, ಬಾಗೀಣ ಕೊಟ್ಟು ಅದ್ಧೂರಿಯಾಗಿ ವಾರಣಾಸಿಯಲ್ಲಿ ಗಂಗೆಗೆ ಗಂಗಾರತಿ ಮಾಡುವಂತೆ ನಾವು ಕೃಷ್ಣೆ ಆರತಿ ಮಾಡಿದರೆ ಇಡೀ ಬದುಕಿಗೆ ಸಾರ್ಥಕ್ಯ ಲಭಿಸುತ್ತದೆ.ಕೃಷ್ಣೆಯ ಬಗೆಗಿನ ಧಾರ್ಮಿಕ ಶ್ರದ್ಧೆ ನಮ್ಮಅಭಿಮಾನದ ಮತ್ತು ಅಸ್ಮಿತೆಯ ಸಂಕೇತ. ಈ ಭಕ್ತಿ-ಭಾವ, ಸಾಂಸ್ಕೃತಿಕ ವೈಭವ ನಮ್ಮ ಜನಗಳನ್ನು ನಮ್ಮ ನೀರಿನ ಹಕ್ಕು, ನೀರಾವರಿ ಯೋಜನೆಗಳನ್ನು ಪಡೆದುಕೊಳ್ಳಲು ಶಕ್ತಿ ತುಂಬುತ್ತದೆ. ಕಾವೇರಿಯ ಹನಿ ನೀರಿಗೂಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ. ನಮ್ಮ 130 ಟಿಎಂಸಿ ಆಂಧ್ರ-ತೆಲಂಗಾಣಕ್ಕೆ ಹರಿದು ಹೋದರೂ ನಮಗೆ ಪರಿವೇ ಇಲ್ಲ. ನಮ್ಮ ಈ ಅಂಧಕಾರವನ್ನು ಕೃಷ್ಣಾ ಆರತಿ ದೂರ ಮಾಡಲಿ. ಕೃಷ್ಣಾ ಮೇಲ್ದಂಡೆಯೋಜನೆ ಸೇರಿದಂತೆ ಕೃಷ್ಣಾ ಕೊಳ್ಳದ ಎಲ್ಲ ನೀರಾವರಿ ಯೋಜನೆಗಳು ಶೀಘ್ರ ಪೂರ್ಣಗೊಳ್ಳಲಿ, ಕೃಷ್ಣಾ ಆರತಿ ಕಾರ್ಯಕ್ರಮ ಪರಂಪರೆಯಾಗಿ ಶತ-ಶತಮಾನಗಳವರೆಗೂ ನಿರಂತರವಾಗಿ ನಡೆಯುತಿರಲಿ ಎಂಬುವುದು ನಮ್ಮ ಹಾರೈಕೆ.
ಕೃಷ್ಣೆ ನಮ್ಮ ಪಾಲಿನ ಭಾವ ಗಂಗೆ.ಆಕೆಯ ಆರಾಧನೆ ನಮಗೆ ಕೋಟಿ ಜನ್ಮದ ಪುಣ್ಯದ ಫಲ ನೀಡುತ್ತದೆ. ಆಕೆಯ ಮಕ್ಕಳಾದ ನಮಗೆಲ್ಲ ತಾಯಿಗೊಂದು ಚಂದದ ಆರತಿ ಮಾಡುವುದು ಬದುಕಿಗೆ ಧನ್ಯತೆ ತಂದು ಕೊಡುತ್ತದೆ. ನದಿ ಸಂಸ್ಕೃತಿಯ ಅರಿವು ಜಾಗೃತಿ ನಮ್ಮ ನೀರಿನ ಹಕ್ಕುಗಳನ್ನು ಹಾಗೂ ನೀರಾವರಿ ಯೋಜನೆಗಳನ್ನು ಪಡೆದುಕೊಳ್ಳಲು ಬಲ ತುಂಬುತ್ತದೆ. ಈ ನಿಟ್ಟಿನಲ್ಲಿ ಸಂಭ್ರಮದ ಕೃಷ್ಣಾ ಆರತಿಗೆ ನಿರಾಣಿ ಪರಿವಾರ ಹಾಗೂ ಕೃಷ್ಣಾ ತೀರರೈತರು ಸಿದ್ಧರಾಗಿದ್ದಾರೆ. ಈ ಬಾರಿಯ ಆರತಿ ವೀಕ್ಷಣೆಗೆ ಲಕ್ಷಾಂತರ ಜನ ಬರುತ್ತಾರೆ. ಇನ್ನು ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿ ಹಾಗೂ ಸಹೋದರ ಮುರುಗೇಶ ನಿರಾಣಿಯವರ ಹುಟ್ಟಹಬ್ಬದಂದು ಇದು ಪರಂಪರೆಯಾಗಿ, ಉತ್ತರಕರ್ನಾಟಕದ ಉತ್ಸವವಾಗಿ ಪ್ರತಿವರ್ಷ ನಡೆಯಲಿದೆ.-ಸಂಗಮೇಶ ಆರ್.ನಿರಾಣಿ
ಕಾರ್ಯನಿರ್ವಾಹಕ ನಿರ್ದೇಶಕರು, ಎಂ.ಆರ್.ಎನ್ (ನಿರಾಣಿ) ಉದ್ಯಮ ಪರಿವಾರ