ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರೊಂದಿಗೆ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಆಚರಿಸುವ ಮೂಲಕ ಅರೇಹಳ್ಳಿ ಹೋಬಳಿಯ ಕಾನಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಕಾಫಿ ದಿನಾಚರಣೆಲ್ಲಿ ತೀರ್ಥಮಲ್ಲೇಶ್ ಮಾತನಾಡಿ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 4.75 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಪ್ರಪಂಚದ ಕಾಫಿ ಬೆಳೆಯುವ ಸುಮಾರು 70 ದೇಶಗಳ ಪೈಕಿ ಭಾರತ 7ನೇ ಸ್ಥಾನದಲ್ಲಿದೆ. ದೇಶದಲ್ಲಿ ಕಾಫಿ ಉತ್ಪಾದನೆಗೆ ಹೋಲಿಸಿದರೆ ದೇಶೀಯ ಬಳಕೆ ಕಡಿಮೆಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಕಾಫಿ ಉದ್ಯಮದ ಬೆಳವಣಿಗೆಗೆ ತೋಟಗಳಲ್ಲಿ ದುಡಿಯುವ ಕಾರ್ಮಿಕರ ಪಾತ್ರ ಮಹತ್ವವಾಗಿದ್ದು, ಅವರ ಪರಿಶ್ರಮದಿಂದಲೇ ಕಾಫಿ ಉತ್ಪಾದನೆ ಸಾಧ್ಯವಾಗುತ್ತಿದ್ದು, ಕಾರ್ಮಿಕರ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಈ ಬಾರಿ ಕಾಫಿ ದಿನಾಚರಣೆಯನ್ನು ಅವರೊಂದಿಗೆ ಆಚರಿಸಲಾಗುತ್ತಿದೆ ಎಂದು ಕಾನಳ್ಳಿ ಎಸ್ಟೇಟ್ ಮಾಲೀಕ ಹಾಗೂ ಕೆಜಿಎಫ್ ಮಾಜಿ ಅಧ್ಯಕ್ಷ ಹಾಗೂ 7 ಬೀನ್ ಟೀಮ್‌ನ ಉಪಾಧ್ಯಕ್ಷ ತೀರ್ಥ ಮಲ್ಲೇಶ್‌ ಹೇಳಿದರು.

ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರೊಂದಿಗೆ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಆಚರಿಸುವ ಮೂಲಕ ಅರೇಹಳ್ಳಿ ಹೋಬಳಿಯ ಕಾನಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಕಾಫಿ ದಿನಾಚರಣೆಲ್ಲಿ ತೀರ್ಥಮಲ್ಲೇಶ್ ಮಾತನಾಡಿ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 4.75 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಪ್ರಪಂಚದ ಕಾಫಿ ಬೆಳೆಯುವ ಸುಮಾರು 70 ದೇಶಗಳ ಪೈಕಿ ಭಾರತ 7ನೇ ಸ್ಥಾನದಲ್ಲಿದೆ. ದೇಶದಲ್ಲಿ ಕಾಫಿ ಉತ್ಪಾದನೆಗೆ ಹೋಲಿಸಿದರೆ ದೇಶೀಯ ಬಳಕೆ ಕಡಿಮೆಯಾಗಿದೆ ಎಂದರು. ಭಾರತದಲ್ಲಿ ಪ್ರತಿ ಗಂಟೆಗೆ ಸುಮಾರು 30 ಲಕ್ಷ ಕಪ್‌ಗಳಷ್ಟು ಕಾಫಿ ಸೇವನೆಯಾಗುತ್ತಿದ್ದರೂ, ವಾರ್ಷಿಕ ಸರಾಸರಿ ಕಾಫಿ ಬಳಕೆ ಪ್ರತಿ ವ್ಯಕ್ತಿಗೆ ಸುಮಾರು 10 ಗ್ರಾಂನಷ್ಟಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ದೇಶೀಯವಾಗಿ ಬಳಕೆ ಮಾಡಿದರೆ ಭಾರತದಲ್ಲಿಯೇ ಬೃಹತ್ ಕಾಫಿ ಮಾರುಕಟ್ಟೆಯನ್ನು ನಿರ್ಮಿಸಿ ಕಾಫಿಯ ಮೌಲ್ಯವರ್ಧನೆ ಸಾಧ್ಯವಾಗುತ್ತದೆ ಎಂದರು. ಪೂರ್ಣಿಮಾ ತೀರ್ಥಮಲ್ಲೇಶ್ ಮಾತನಾಡಿ, ಮುಂಬೈನಂತಹ ಮಹಾನಗರಗಳಲ್ಲಿ ನಡೆಯುವ ರೇವ್ ಪಾರ್ಟಿಗಳಲ್ಲಿಯೂ ಕಾಫಿ ಸೇವನೆ ವ್ಯಾಪಕವಾಗುತ್ತಿರುವುದು ಗಮನಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಕಾಫಿಗೆ ಭಾರತದಲ್ಲಿಯೇ ಉತ್ತಮ ಮಾರುಕಟ್ಟೆ ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ದೇಶೀಯವಾಗಿ ಕಾಫಿ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾಫಿ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಬಹುದು ಎಂದರು.ಕಾರ್ಮಿಕ ಮೊಹಮ್ಮದ್ ನೌಷಾದ್ ಆಲಿ, ಮಾತನಾಡಿ “ನಮ್ಮ ಕಷ್ಟಗಳಿಗೆ ಸ್ಪಂದಿಸುವ ಮಾಲೀಕರಿಗೆ ಒಳ್ಳೆಯದಾಗಲಿ. ಇನ್ನು ಮುಂದೆ ಟೀ ಬದಲಿಗೆ ಕಾಫಿ ಕುಡಿಯಲು ಆರಂಭಿಸುತ್ತೇವೆ” ಎಂದು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಕಾರ್ಮಿಕರು ನೃತ್ಯ ಮಾಡಿ ಸಂಭ್ರಮಿಸಿದರು. ಬಳಿಕ ಕಾರ್ಮಿಕರಿಗೆ ಗುಣಮಟ್ಟದ ಕಾಫಿ ಪುಡಿಯಿಂದ ತಯಾರಿಸಿದ ಕಾಫಿಯನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ತೀರ್ಥ ಮಲ್ಲೇಶ್ ಅವರು ಕಾರ್ಮಿಕರಿಗೆ ಉಡುಗೊರೆಗಳನ್ನು ನೀಡಿ ಅವರ ಪರಿಶ್ರಮವನ್ನು ಗೌರವಿಸಿದರು.