ಸಾರಾಂಶ
ಕನಕಗಿರಿ:
ಪಕ್ಷಬೇಧ ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕನಕಗಿರಿ ಉತ್ಸವವನ್ನು ಸಚಿವ ಶಿವರಾಜ ತಂಗಡಗಿ ಅವರು ಘೋಷಿಸಿದ ದಿನದಂದು(ಮಾ. 20, 21) ಆಚರಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಜಾತ್ರಾ ಪೂರ್ವಭಾವಿ ಸಭೆಯ ಮುಕ್ತಾಯದ ನಂತರ ಉತ್ಸವ ಆಚರಣೆ ಕುರಿತಂತೆ ಅಭಿಪ್ರಾಯ ಪಡೆಯಲು ಸಾಮೂಹಿಕ ಚರ್ಚೆಗೆ ಅವಕಾಶ ನೀಡಿದ್ದರು. ಮೊದಲು ಸಚಿವರು ಜಾತ್ರೆಯ ದಿನವೇ ಉತ್ಸವ ಆಚರಿಸಿದರೆ ಒಳ್ಳೆಯದು. ಇದರಿಂದ ಜನಸಂಖ್ಯೆ ಹೆಚ್ಚಾಗುವುದಲ್ಲದೇ ನಾಡಿನಾದ್ಯಂತ ಕನಕಗಿರಿ ಉತ್ಸವ ಮುನ್ನೆಲೆಗೆ ಬರಲಿದೆ ಎಂಬ ಅಭಿಪ್ರಾಯ ಮಂಡಿಸಿದ್ದರು. ಸಚಿವರ ಅಭಿಪ್ರಾಯಕ್ಕೆ ಹಲವರು ಒಪ್ಪಿಗೆ ಸೂಚಿಸಿದ್ದರಿಂದ ಜಾತ್ರೆ ದಿನವೇ ಉತ್ಸವ ನಡೆಸಲು ತಿರ್ಮಾನಿಸಲಾಗಿದೆ. ಆದರೆ, ಸಚಿವರು ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಅಂತೆ-ಕಂತೆಗಳಿಗೆ ಜನರು ಕಿವಿಗೊಡಬಾರದು. ಈಗಾಗಲೇ ಘೋಷಣೆ ಮಾಡಿದಂತೆ ಉತ್ಸವ ಆಚರಿಸಲಾಗುವುದು. ಕನಕಗಿರಿಯ ಹಿತದೃಷ್ಟಿಯಿಂದ ಪಕ್ಷಬೇಧ ಮರೆತು ಅದ್ಧೂರಿ ಉತ್ಸವ ಆಚರಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಯುವ ಮುಖಂಡ ಶಾಂತಪ್ಪ ಬಸರಿಗಿಡದ ಮಾತನಾಡಿ, ಈ ಹಿಂದೆ ತೇರಿನ ಮನೆ ಭೂಮಿಪೂಜೆ ಮಾಡುವ ಸಮಯದಲ್ಲಿ ಜಾತ್ರೆ ಜತೆಗೆ ಉತ್ಸವ ಮಾಡುವ ಕುರಿತು ಸಚಿವರು ಅಭಿಪ್ರಾಯ ತಿಳಿಸಿದ್ದರು. ಉತ್ಸವ ಆಚರಣೆಯಿಂದ ಕನಕಗಿರಿಯು ನಾಡಿನಾದ್ಯಂತ ಬೆಳಕಾಗುತ್ತದೆ. ರಾಜ್ಯದ ಹಲವು ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿರುವ ಕನಕಗಿರಿ ಬೆಳೆಯಲಿದೆ. ಈ ಉತ್ಸವವನ್ನು ಜನೋತ್ಸವವಾಗಿಸಲು ಆಚರಿಸೋಣ ಎಂದರು.ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ರಾಜಸಾಬ್ ನಂದಾಪೂರ, ಅನಿಲ ಬಿಜ್ಜಳ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಪ್ರಮುಖರಾದ ಶರಣಪ್ಪ ಭತ್ತದ, ರವಿ ಪಾಟೀಲ, ಖಾಜಸಾಬ್ ಗುರಿಕಾರ, ಮಂಜುನಾಥ ಯಾದವ, ವಿರೂಪಾಕ್ಷ ಆಂದ್ರ, ನೀಲಕಂಠ ಬಡಿಗೇರ, ಮುಕ್ತಂಸಾಬ್ ಚಳ್ಳಮರದ ಇತರರಿದ್ದರು.