ಸಾರಾಂಶ
ಹಾವೇರಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಜಿಲ್ಲಾದ್ಯಂತ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನ, ಅರಳಿಕಟ್ಟೆ, ಬನ್ನಿಮರ, ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗೆ ಹಾಲು ಎರೆದು ಭಕ್ತಿಭಾವ ಸಮರ್ಪಿಸಿದರು. ನಾಗರ ಪಂಚಮಿ ನಿಮಿತ್ತ ದೇವರಿಗೆ ತಂಬಿಟ್ಟಿನ ಉಂಡಿ, ಕಡಲೆ ಉಂಡಿ, ಶೇಂಗಾ ಉಂಡಿ, ಅಂಟಿನ ಉಂಡಿ, ಎಳ್ಳು ಉಂಡಿ, ಜೋಳದ ಅರಳು, ನೆನೆಸಿದ ಕಡಲೆ ಮೊದಲಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿದರು.ಜಿಲ್ಲೆಯ ಬಹುತೇಕ ಮನೆಗಳಲ್ಲಿ ಮಣ್ಣಿನ ಇಲ್ಲವೇ ಬೆಳ್ಳಿ- ಬಂಗಾರದ ನಾಗ ಮೂರ್ತಿ ಇಟ್ಟು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು. ಮಕ್ಕಳು ಕೊಬ್ಬರಿ ಬಟ್ಟಲು ತಿರುಗಿಸುವ ಆಟ ಹಾಗೂ ಜೋಕಾಲಿ ಆಟವಾಡಿ ಸಂಭ್ರಮಿಸಿದರು. ಹೆಣ್ಣುಮಕ್ಕಳ ಹಬ್ಬ ಎಂದು ಕರೆಸಿಕೊಳ್ಳುವ ಈ ಹಬ್ಬದಲ್ಲಿ ಹೊಸಬಟ್ಟೆಯುಟ್ಟ ಹೆಣ್ಣುಮಕ್ಕಳ ಸಂಭ್ರಮ ಓಡಾಟ, ಜೋಕಾಲಿಯ ಜೀಕಾಟ ಎಲ್ಲೆಡೆ ಕಂಡುಬಂದಿತು. ಗ್ರಾಮೀಣ ಭಾಗ ಸೇರಿದಂತೆ ಪಟ್ಟಣ, ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ಜೋಕಾಲಿಗಳನ್ನು ಕಟ್ಟಿ ಜೀಕಿ ಸಂಭ್ರಮಿಸಿದರು. ಗ್ರಾಮದ ದೊಡ್ಡ ಮರಗಳಿಗೆ ಬೃಹತ್ ಗಾತ್ರದ ಜೋಕಾಲಿ ಕಟ್ಟಿ, ಜೋಕಾಲಿ ಜೀಕುವುದರ ಜತೆಗೆ ಕೆಲ ಕಸರತ್ತಿನ ಆಟಗಳನ್ನು ಸಹ ಆಡಲಾಯಿತು. ಹಬ್ಬದ ನಿಮಿತ್ತ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು, ಮಹಿಳೆಯರು ತಮ್ಮದೇ ಆದ ಗ್ರಾಮೀಣ ಕ್ರೀಡೆಗಳನ್ನು ಆಡಿ ಹಬ್ಬಕ್ಕೆ ಕ್ರೀಡಾ ಮೆರುಗು ನೀಡಿದರು. ವಿವಿಧ ಬಗೆಯ ಶಕ್ತಿ ಮತ್ತು ಯುಕ್ತಿ ಪ್ರದರ್ಶನದಂತಹ ಅಪ್ಪಟ ಗ್ರಾಮೀಣ ಆಟಗಳನ್ನು ಆಡುವ ಮೂಲಕ ಸಂಭ್ರಮಿಸಿದರು. ಗ್ರಾಮೀಣ ಭಾಗದಲ್ಲಿ ಬಯಲು ಪ್ರದೇಶ, ಆಟದ ಮೈದಾನ, ದೇವಸ್ಥಾನ ಎದುರು ಯುವಕರು ನಿಂಬೆ ಹಣ್ಣು ಎಸೆತ, ಗೋಲಿ ಎಸೆತ, ಕಣ್ಣಿಗೆ ಬಟ್ಟೆ ಕಟ್ಟಿ ಮನೆ ಅಥವಾ ಪ್ರದೇಶ ಗುರುತಿಸುವಂತಹ ಮೋಜಿನ ಕ್ರೀಡೆಗಳೊಂದಿಗೆ ಸಾಹಸ ಕ್ರೀಡೆಗಳನ್ನು ಆಡುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ಹಬ್ಬಕ್ಕೆ ಮಹಿಳೆಯರು ಗಂಡನ ಮನೆಯಿಂದ ತವರಿಗೆ ಬಂದು ಹೊಸ ಸೀರೆ ಉಟ್ಟು ಸಡಗರದಿಂದ ಪಂಚಮಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಬಹುತೇಕ ಕಡೆ ಸೋಮವಾರ ಹಬ್ಬ ಆಚರಿಸಿದರೆ, ಕೆಲ ಭಾಗದಲ್ಲಿ ಮಂಗಳವಾರ ಹಬ್ಬವನ್ನು ಆಚರಿಸಲಾಗುತ್ತದೆ.
ತರಹೇವಾರಿ ಉಂಡೆಗಳು...ನಾಗರ ಪಂಚಮಿ ಹಬ್ಬದಲ್ಲಿ ಮಕ್ಕಳು ಒಣ ಕೊಬ್ಬರಿ ಬಟ್ಟಲು ಆಟ ಆಡುತ್ತಲೇ ಜೋಕಾಲಿ ಆಡಿ ಸಂಭ್ರಮಿಸಿದರು. ಗುಳಗಿ ಉಂಡಿ, ಶೇಂಗಾ ಉಂಡಿ, ಬೇಸನ್ ಉಂಡಿ, ಅಂಟಿನ ಉಂಡೆ, ಮಂಡಕ್ಕಿ ಉಂಡಿ, ತಂಬಿಟ್ಟಿನ ಉಂಡಿ, ಹಿಟ್ಟಿನ ಉಂಡಿ, ಎಳ್ಳಿನ ಉಂಡಿ, ಕೊಬ್ಬರಿ ಉಂಡಿ ಹೀಗೆ ವಿವಿಧ ಬಗೆಯ ಉಂಡಿಗಳನ್ನು ಮಕ್ಕಳು ಕೈಯಲ್ಲಿ ಹಿಡಿದು ತಿನ್ನುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ಹೀಗಾಗಿ ಮಕ್ಕಳು ಈ ಹಬ್ಬವನ್ನು ಉಂಡಿ ಹಬ್ಬ ಎಂತಲೇ ಕರೆಯುವ ವಾಡಿಕೆಯಿದೆ.