ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ಮಂಗಳವಾರ 63ನೇ ಜನ್ಮದಿನದ ಸಂಭ್ರಮ. ಶ್ರೀಗಳ ಜನ್ಮವರ್ಧಂತಿ ಹಿನ್ನೆಲೆಯಲ್ಲಿ ಮಠದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ್ದು, ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಯವರು ಸಿದ್ದಲಿಂಗ ಶ್ರೀಗಳ ಪಾದಪೂಜೆ ನೆರವೇರಿಸಿ, ಭಕ್ತಿ ಸಮರ್ಪಿಸಿದರು.ಎಂದಿನಂತೆ ಶ್ರೀಗಳು ಮುಂಜಾನೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದರು. ನಂತರ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬೆಳಗ್ಗೆ 6 ಗಂಟೆಗೆ ಹಳೆಯ ಮಠದಲ್ಲಿ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಯವರು ಶ್ರೀಗಳ ಪಾದಪೂಜೆ ನೆರವೇರಿಸಿ, ಆಶೀರ್ವಾದ ಪಡೆದರು.ಶ್ರೀಗಳ ಜನ್ಮವರ್ಧಂತಿ ಹಿನ್ನೆಲೆಯಲ್ಲಿ ಅರಗಿರಿ ಮಠ, ಕಲ್ಲುಮಠ, ಕಣ್ಣೂರು ಮಠ ಸೇರಿದಂತೆ ವಿವಿಧ ಮಠಗಳ ಪೀಠಾಧ್ಯಕ್ಷರೂ ಸಹ ಆಗಮಿಸಿದ್ದು, ಶ್ರೀಗಳ ಪಾದಪೂಜೆ ನೆರವೇರಿಸಿ, ಪುಷ್ಪವೃಷ್ಠಿ ಸುರಿಸಿ, ಆಶೀರ್ವಾದ ಪಡೆದು, ಭಕ್ತಿ ಸಮರ್ಪಿಸಿದರು.ವರ್ಧಂತಿ ಅಂಗವಾಗಿ ಮಠದಲ್ಲಿ ಯಾವುದೇ ರೀತಿಯ ಆಡಂಬರದ ಆಚರಣೆ ನಡೆಸದೆ ಧಾರ್ಮಿಕ ವಿಧಿ ವಿಧಾನಗಳಿಂದಷ್ಟೇ ಶ್ರೀಗಳ ಜನ್ಮವರ್ಧಂತಿಯನ್ನು ಆಚರಿಸಿದ್ದು ವಿಶೇಷವಾಗಿತ್ತು. ಶ್ರೀಗಳ 63ನೇ ಜನ್ಮವರ್ಧಂತಿ ಪ್ರಯುಕ್ತ ಮಠಕ್ಕೆ ಬರುವ ಭಕ್ತರು ಮತ್ತು ಮಕ್ಕಳಿಗಾಗಿ ಜಿಲೇಬಿ, ಪಾಯಸ, ಚಿತ್ರಾನ್ನ ಸೇರಿದಂತೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಠದ ಮಕ್ಕಳು ಶ್ರೀಗಳಿಗೆ ಹುಟ್ಟುಹಬ್ಬದ ಶುಭಕೋರಿ ಆಶೀರ್ವಾದ ಪಡೆದರು.