ಶ್ರೀಗುರುಸಿದ್ದರಾಮೇಶ್ವರ ಸ್ವಾಮಿ 852ನೇ ಜಯಂತಿ ಆಚರಣೆ

| Published : Jan 03 2025, 12:34 AM IST

ಶ್ರೀಗುರುಸಿದ್ದರಾಮೇಶ್ವರ ಸ್ವಾಮಿ 852ನೇ ಜಯಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಆವರಣದಲ್ಲಿ ಜ.14ಮತ್ತು15ರಂದು ನಡೆಯಲಿರುವ ಶ್ರೀಗುರುಸಿದ್ದರಾಮೇಶ್ವರ ಸ್ವಾಮಿ 852 ನೇ ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೊಳಂಬ ಲಿಂಗಾಯತ ಕೇಂದ್ರ ಸಮಿತಿ ಗೌರವ ಕಾರ್ಯದರ್ಶಿ ಕಾಮನಕೆರೆ ಶಶಿಧರ್ ಹೇಳಿದರು. ಪ್ರಸಕ್ತ ವರ್ಷ ಬೆಂಗಳೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಪ್ರವಾಸ ಮಾಡಿ ಸಂಘಟನೆ ಮೂಲಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಆವರಣದಲ್ಲಿ ಜ.14ಮತ್ತು15ರಂದು ನಡೆಯಲಿರುವ ಶ್ರೀಗುರುಸಿದ್ದರಾಮೇಶ್ವರ ಸ್ವಾಮಿ 852 ನೇ ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೊಳಂಬ ಲಿಂಗಾಯತ ಕೇಂದ್ರ ಸಮಿತಿ ಗೌರವ ಕಾರ್ಯದರ್ಶಿ ಕಾಮನಕೆರೆ ಶಶಿಧರ್ ಹೇಳಿದರು.

ನಗರದ ಗುರುಸಿದ್ದರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ಬ್ಯಾನರ್‌, ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಹನ್ನೆರಡನೆಯ ಶತಮಾನದ ಶರಣ ಸಿದ್ದರಾಮೇಶ್ವರರ ಮಹಿಮೆಯನ್ನು ನಾಡಿನ ಜನರಿಗೆ ಪರಿಚಯಿಸುವ ನಿಮಿತ್ತ ರಾಜ್ಯದ ಉದ್ದಗಲಕ್ಕೂ ಪ್ರತಿ ವರ್ಷ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷ ಬೆಂಗಳೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಪ್ರವಾಸ ಮಾಡಿ ಸಂಘಟನೆ ಮೂಲಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಬೆಟ್ಟದಳ್ಳಿ ರೇಣುಕಾರಾಧ್ಯ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾರಂಭವನ್ನು ಜ.14ರಂದು ಉದ್ಘಾಟಿಸಲಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಾಹಿತ್ಯ ಗೋಷ್ಠಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹರಗುರು ಚರಮೂರ್ತಿಗಳು, ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸುವರು. ಜ.15ರಂದು ಬುಧವಾರ ಬೆಳಗ್ಗೆ 10.30ಕ್ಕೆ ಮಹಿಳಾ ಮತ್ತು ಕೃಷಿ ಗೋಷ್ಠಿ ನಡೆಯಲಿದ್ದು ಕೇಂದ್ರ ಸಚಿವರಾದ ಎಚ್. ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಒಳಗೊಂಡಂತೆ ವಿವಿಧ ಮಠಾಧೀಶರು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ್, ಭೈರತಿ ಸುರೇಶ್ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ತಿಪಟೂರು ಶಾಸಕ ಷಡಾಕ್ಷರಿ ಸೇರಿದಂತೆ ನಾಡಿನ ಪ್ರಮುಖ ಮಠಗಳ ಮಠಾಧೀಶರು ಸಾನಿಧ್ಯ ವಹಿಸುವರು ಎಂದು ವಿವರ ನೀಡಿದರು.

ಉಪಾಧ್ಯಕ್ಷ ಸಿರಿ ಸಿದ್ದರಾಮೇಗೌಡ, ಜಂಟಿ ಕಾರ್ಯದರ್ಶಿ ಕುಭೇರಪ್ಪ, ತುಮಕೂರಿನ ಬಳಗದ ಅಧ್ಯಕ್ಷ ಮೋಹನ್ ಕುಮಾರ್, ಉಪ ಸಮಿತಿ ಕಾರ್ಯದರ್ಶಿ ಶಿವಕುಮಾರ್, ನಿರ್ದೇಶಕ ಸಂಕೋಡನಹಳ್ಳಿ ಶೇಖರ್, ವ್ಯವಸ್ಥಾಪಕ ಸುಮಂತ್ ಸೇರಿದಂತೆ ಇದ್ದರು.