ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು 1999ರಲ್ಲಿ ಸ್ಥಾಪನೆಗೊಂಡು ಸುಮಾರು 2000 ಸದಸ್ಯರನ್ನು ಹೊಂದಿರುವ ಬೃಹತ್ ಸಂಘಟನೆಯಾಗಿದೆ. ಪ್ರಸ್ತುತ 25 ವರ್ಷಗಳನ್ನು ಪೂರೈಸುತ್ತಿದ್ದು ಇದರ ಅಂಗವಾಗಿ ಸಂಘದ ಬೆಳ್ಳಿ ಬೆಡಗು ಸಂಭ್ರಮಾಚರಣೆ ಮಾಡಲಾಗುತ್ತದೆ ಎಂದು ಜಂಟಿ ಕ್ರಿಯಾಸಮಿತಿ ಅಧ್ಯಕ್ಷ ದುಂಡಮಾದಪ್ಪ ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಪ್ರಣಿತ ತತ್ವವನ್ನು ಅನುಸರಿಸುತ್ತಾ ಜಾತ್ಯತೀತ ಮನೋಭಾವದಿಂದ ಸಕಲರಿಗೂ ಲೇಸನ್ನು ಬಯಸುವ ಶರಣರ ಜೀವನ ಆದರ್ಶ ಮತ್ತು ಮೌಲ್ಯಗಳನ್ನು ಜನತೆಗೆ ಉಣಬಡಿಸುತ್ತಿರುವ ಶರಣ ಚಿಂತನ ಸಿಂಚನ ಉಪನ್ಯಾಸ ಮಾಲಿಕೆಯನ್ನು ಕಳೆದ ೨೫ ವರ್ಷಗಳಿಂದ ಎಡೆಬಿಡದೆ ನಡೆಸುತ್ತಾ ಮನೆ ಮಾತಾಗಿದೆ. ಜನಸಾಮಾನ್ಯರಿಗೆ ಇದು ದಾರಿದೀಪವಾಗಿದೆ ಎಂದರು.ಈ ಸಂಘದ ಅಡಿಯಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಮೂರು ಸಂಘಗಳು ಒಂದಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿವೆ ಎಂದರು. ಸಮಸ್ತ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, 5 ರು.ಗಳಲ್ಲಿ ೨೦ ಲೀ. ನೀಡುತ್ತಾ ಜನಪರ ಆರೋಗ್ಯದ ಬಗ್ಗೆ ಕಾಳಜಿ ತೋರಿದೆ ಎಂದರು.ಚಾಮರಾಜನಗರದ ಪಟ್ಟಣ ಮತ್ತು ಸಂತೇಮರಳ್ಳಿಯಲ್ಲಿ ಜನರ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ಈ -ಸ್ಟಾಂಪಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಗಿಂದಾಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ನೇತ್ರ ತಪಾಸಣಾ ಶಿಬಿರ, ಆಧಾರ್ ಕ್ಯಾಂಪ್, ಕೋವಿಡ್ ಲಸಿಕೆ ಶಿಬಿರ, ಕೋವಿಡ್ ಸಂದರ್ಭದಲ್ಲಿ ಕಲಾವಿದರಿಗೆ ಆಹಾರ ಕಿಟ್ ವಿತರಣೆ, ಪಿಪಿಇ ಕಿಟ್ ಹಾಗೂ ಮಾಸ್ಕ್ ವಿತರಣೆ. ಜೊತೆಗೆ ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸಲು ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು. ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿಯ ಅನಿಕೇತನ ವೇದಿಕೆ ಸಹಯೋಗದೊಡನೆ ಚಾಮರಾಜನಗರ ತಾಲೂಕಿನ ೮೭ ಸರ್ಕಾರಿ ಶಾಲೆಗಳಿಗೆ ಆಲ್ ಇನ್ ಒನ್ ಪ್ರೊಜೆಕ್ಟರ್ ವಿತರಿಸಲಾಗಿದೆ. ಇದನ್ನು ೧೦೦ ಶಾಲೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು. ಉದ್ಯೋಗಕಾಂಕ್ಷಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಮತ್ತು ಪರೀಕ್ಷ ಸಿದ್ಧತಾ ಬೋಧನಾ ವ್ಯವಸ್ಥೆ ಕಲ್ಪಿಸಿದೆ. ಅರ್ಹ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅಗತ್ಯ ಧನ ಸಹಾಯ ಮತ್ತು ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಿದೆ ಎಂದರು.
೨೮ರಂದು ಉದ್ಘಾಟನೆ:ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ಧಮಲ್ಲಪ್ಪ ಮಾತನಾಡಿ, ರಜತ ಮಹೋತ್ಸವದ ಉದ್ಘಾಟನಾ ಸಮಾರಂಭವು ಜು.೨೮ರಂದು ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಅನುಭವ ಮಂಟಪದಲ್ಲಿ ನಡೆಯಲಿದೆ. ಮರಿಯಾಲದ ಮುರುಘರಾಜೇಂದ್ರ ಸ್ವಾಮೀಜಿ, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ಧಮಲ್ಲಪ್ಪ ವಹಿಸಲಿದ್ದು, ಬಸವೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎಂ, ಗೌರಿಶಂಕರ್, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್. ಮುದ್ದುಬಸವಣ್ಣ ಉಪಸ್ಥಿತರಿರುವರು ಎಂದರು. ರಜತ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಲಾಗಿದ್ದು, ಮುಂದಿನ ವರ್ಷ ಜು.೨೮ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್ . ಮಹದೇವಸ್ವಾಮಿ, ಬಸವೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎಂ, ಗೌರಿಶಂಕರ್, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಸುಂದರ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಎಸ್. ಮಹದೇವಸ್ವಾಮಿ ಇದ್ದರು.