ಭಕ್ತಿ-ಭಾವದಿಂದ ವರಮಹಾಲಕ್ಷ್ಮಿ ಆಚರಣೆ

| Published : Aug 09 2025, 12:00 AM IST

ಸಾರಾಂಶ

ಸಾಮಾನ್ಯವಾಗಿ ಪ್ರತಿ ಶ್ರಾವಣದ 2ನೇ ಶುಕ್ರವಾರ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಶ್ರಾವಣ ತಿಂಗಳಲ್ಲಿ ಐದು ಶುಕ್ರವಾರಗಳು ಬಂದ ಹಿನ್ನೆಲೆಯಲ್ಲಿ 3ನೇ ಶುಕ್ರವಾರ ಸಂಭ್ರಮದಿಂದ ಮಹಿಳೆಯರು ಕುಟುಂಬ ಸಮೇತ ವರ ಮಹಾಲಕ್ಷ್ಮಿ ಪೂಜೆ ಕೈಗೊಂಡರು.

ಧಾರವಾಡ: ಶ್ರಾವಣ ಮಾಸದ ಶುಕ್ಲ ಪಕ್ಷದ ಪೌರ್ಣಿಮಯ ಮುನ್ನಾದಿನ ಶುಕ್ರವಾರ ಆಚರಣೆಗೊಂಡ ವರ ಮಹಾಲಕ್ಷಿ ಹಬ್ಬ ಧಾರವಾಡದಲ್ಲಿ ಅರ್ಥಪೂರ್ಣವಾಗಿ ಆಚರಣೆಗೊಂಡಿತು.

ಸಾಮಾನ್ಯವಾಗಿ ಪ್ರತಿ ಶ್ರಾವಣದ 2ನೇ ಶುಕ್ರವಾರ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಶ್ರಾವಣ ತಿಂಗಳಲ್ಲಿ ಐದು ಶುಕ್ರವಾರಗಳು ಬಂದ ಹಿನ್ನೆಲೆಯಲ್ಲಿ 3ನೇ ಶುಕ್ರವಾರ ಸಂಭ್ರಮದಿಂದ ಮಹಿಳೆಯರು ಕುಟುಂಬ ಸಮೇತ ವರ ಮಹಾಲಕ್ಷ್ಮಿ ಪೂಜೆ ಕೈಗೊಂಡರು.

ಸೌಭಾಗ್ಯ ಕೊಡುವ ವ್ರತ ಇದಾಗಿದ್ದು, ಸುಮಂಗಲಿಯರು ಮಹಾಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸಿದರು. ಲಕ್ಷ್ಮಿದೇವಿ ಎಂದಾಕ್ಷಣ ಹಣ, ಸಂಪತ್ತು ಮಾತ್ರವಲ್ಲದೇ ಜ್ಞಾನ, ಭಕ್ತಿ, ವೈರಾಗ್ಯ, ಸಮಾಧಾನ ಹಾಗೂ ಸಂಪತ್ತು ಸಹ ಕೊಡುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಹೀಗಾಗಿ ಶುಕ್ರವಾರ ನಸುಕಿನಲ್ಲಿ ಎದ್ದ ಮಹಿಳೆಯರು ಕಲಶ ಅಥವಾ ಬಿಂದಿಗೆ ಇಟ್ಟು ಅದಕ್ಕೆ ಲಕ್ಷ್ಮಿಯ ಲಕ್ಷಣವುಳ್ಳ ಬೆಳ್ಳಿಯ ಮುಖ ಹಾಕಿ, ಸೀರೆ ಉಡಿಸಿ ವಿವಿಧ ಅಲಂಕಾರ ಮಾಡಿ ಅಷ್ಟಲಕ್ಷ್ಮಿಯ ಸ್ವರೂಪದಲ್ಲಿ ಪೂಜೆ ಮಾಡಿದರು. ಲಕ್ಷ್ಮಿ ಬಂಗಾರ, ಹೂವಿನ ಅಲಂಕಾರವೂ ಇರುತ್ತದೆ.

ಪೂಜೆ ಸಲ್ಲಿಸಿ ಐವರು ಸುಮಂಗಲಿಯರಿಗೆ ಉಡಿ ತುಂಬುವ ಪದ್ಧತಿ ಸಹ ಇದ್ದು, ಸಂಬಂಧಿಕರು, ಸ್ನೇಹಿತರನ್ನು ಮನೆಗೆ ಕರೆಯಿಸಿ ಉಡಿ ತುಂಬಿ ಪ್ರಸಾದ ಹಂಚಲಾಗುತ್ತದೆ. ಈ ಹಬ್ಬದಲ್ಲಿ ಮನೆಗೆ ಮಾವಿನ ತಳಿರು- ತೋರಣ ಕಟ್ಟಿ ಹಬ್ಬದಂತೆ ಆಚರಿಸಲಾಗುತ್ತದೆ. ಹಬ್ಬದ ನಿಮಿತ್ತ ಧಾರವಾಡದ ಮಾರುಕಟ್ಟೆ ಹಣ್ಣು- ಹಂಪಲು, ಬಾಳೆ ದಿಂಡು, ತಳಿರು- ತೋರಣ ಮಾರಾಟ ಜೋರಾಗಿತ್ತು. ಬಹುತೇಕರ ಮಹಿಳೆಯರು ತಮ್ಮ ತಮ್ಮ ಮನೆಯಲ್ಲಿ ಈ ವರ ಮಹಾಲಕ್ಷ್ಮಿ ಪೂಜೆ ಸಲ್ಲಿಸಿದ್ದು, ಹಬ್ಬದ ನಿಮಿತ್ತ ಹೋಳಿಗೆ, ವಡೆ ಸೇರಿ ಹಬ್ಬದ ಆಡುಗೆ ಮಾಡಿ ದೇವಿಗೆ ಎಡೆ ಮಾಡಲಾಯಿತು.

ಜೆಎಸ್ಸೆಸ್‌ನಲ್ಲಿ ಆಚರಣೆ: ವಿದ್ಯಾಗಿರಿಯ ಜೆ.ಎಸ್.ಎಸ್. ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಶಾಲಾ ಪ್ರಾಚಾರ್ಯರಾದ ಸಾಧನಾ ಎಸ್. ಪೂಜೆಯನ್ನು ನೆರವೇರಿಸಿದರು. ವರ ಮಹಾಲಕ್ಷ್ಮಿ ಎಲ್ಲರ ಇಚ್ಛೆಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸಿದರು. ಹಾಡುಗಳು ಭಕ್ತಿಯ ವಾತಾವರಣ ತುಂಬುವಲ್ಲಿ ಸಹಕಾರಿಯಾದವು. ಎಲ್ಲರ ಸುಖ, ಸೌಖ್ಯ, ಆರೋಗ್ಯ ಹಾಗೂ ಶ್ರೆಯಸ್ಸಿಗಾಗಿ ಪೂಜೆಯನ್ನು ಸಲ್ಲಿಸಲಾಯಿತು.