ನಿರ್ಬಂಧಗಳಿಂದಾಗಿ ಮಧ್ಯರಾತ್ರಿಗೆ ಮೊದಲೇ ಸಂಭ್ರಮಾಚರಣೆ

| Published : Jan 01 2024, 01:15 AM IST

ಸಾರಾಂಶ

ವಿವಿ ನಗರಿ ಮಣಿಪಾಲದಲ್ಲಿ ವಿದ್ಯಾರ್ಥಿಗಳ ಸಂಭ್ರಮ ಹೆಚ್ಚಿದ್ದು, ಪೊಲೀಸ್ ಸರ್ಪಗಾಲು ಹಾಕಲಾಗಿದೆ. ಡ್ರಗ್ಸ್ ಬಳಕೆಯ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಹೊಸವರ್ಷಾಚರಣೆ ಸಂಭ್ರಮ ಮುಗಿಲುಮುಟ್ಟಿತ್ತು. ಈ ಬಾರಿ ರಾತ್ರಿ ಹೊತ್ತು ಆಚರಣೆಗೆ ನಿರ್ಬಂಧಗಳಿರುವುದರಿಂದ ಸಂಜೆಯಾಗುತ್ತಲೇ ಜನರು ಕುಟುಂಬಸಮೇತ ಮನೆಯಿಂದ ಹೊರಗೆ ಬಂದು ಆಚರಣೆಯಲ್ಲಿ ತೊಡಗಿದ್ದು ಕಂಡುಬಂತು.

ಮಲ್ಪೆ, ಕಾಪು ಬೀಚುಗಳಲ್ಲಿ ಪ್ರತೀ ಭಾನುವಾರ ಸಂಜೆ ಜನರ ದಟ್ಟಣೆ ಹೆಚ್ಚಿರುತ್ತದೆ, ಆದರೆ ಈ ಭಾನುವಾರವಂತೂ ಹೊಸವರ್ಷಾಚರಣೆ ನೆಪದಲ್ಲಿ ಜನಸಾಗರವೇ ನೆರೆದಿತ್ತು. ಇನ್ನು ರಾತ್ರಿಯಾಗುತ್ತಲೇ ಹೊಟೇಲು, ಬಾರು, ರೆಸ್ಟೋರೆಂಟುಗಳಲ್ಲಿಯೂ ಜನರ ಸಂಖ್ಯೆ ಹೆಚ್ಚಿತ್ತು.

ಪೊಲೀಸ್ ಇಲಾಖೆ ಸಾರ್ವಜನಿಕವಾಗಿ ರಾತ್ರಿ 10.30ರ ವರೆಗೆ ಮಾತ್ರ ಧ್ವನಿವರ್ಧಕಗಳ ಬಳಕೆ ಅವಕಾಶ, ರಾತ್ರಿ 2.30ರ ವರೆಗೆ ಮಾತ್ರ ಹೊಸವರ್ಷಾಚರಣೆಗೆ ಅನುಮತಿ ನೀಡಿದೆ. ಬೀಚ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದೆ.

ಮುಖ್ಯವಾಗಿ ವಿವಿ ನಗರಿ ಮಣಿಪಾಲದಲ್ಲಿ ವಿದ್ಯಾರ್ಥಿಗಳ ಸಂಭ್ರಮ ಹೆಚ್ಚಿದ್ದು, ಪೊಲೀಸ್ ಸರ್ಪಗಾಲು ಹಾಕಲಾಗಿದೆ. ಡ್ರಗ್ಸ್ ಬಳಕೆಯ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ.