ಸುವರ್ಣ ಶಿಕ್ಷಣ ಮೇಳಕ್ಕೆ ಸಂಭ್ರಮದ ತೆರೆ

| Published : Jan 27 2025, 12:45 AM IST

ಸಾರಾಂಶ

ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಸಾವಿರಾರು ವಿದ್ಯಾರ್ಥಿಗಳು, ಪಾಲಕರಿಗೆ ಶೈಕ್ಷಣಿಕ ಭವಿಷ್ಯದ ಬಗ್ಗೆ ಸುವರ್ಣ ಶಿಕ್ಷಣ ಮೆಗಾ ಎಜುಕೇಶನ್‌ ಮೇಳದಲ್ಲಿ ಸ್ಪಷ್ಟ ಚಿತ್ರಣ ನೀಡಿದ್ದು ವಿಶೇಷ.

ಧಾರವಾಡ: ಬರೀ ಸುದ್ದಿಗಳನ್ನು ಹೆಕ್ಕಿ ತೆಗೆಯುವುದು ಮಾತ್ರವಲ್ಲದೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಪೂರಕವಾಗಿ ಇಲ್ಲಿಯ ಮಗದುಮ್ಮ ಕಲ್ಯಾಣ ಮಂಟಪದಲ್ಲಿ ಕಳೆದ ಶನಿವಾರ, ಭಾನುವಾರ ಎರಡು ದಿನಗಳಿಂದ ಆಯೋಜಿಸಿದ್ದ ಸುವರ್ಣ ಶಿಕ್ಷಣ ಮೆಗಾ ಎಜುಕೇಶನ್‌ ಮೇಳ ಅರ್ಥಪೂರ್ಣವಾಗಿ ಸಮಾರೋಪಗೊಂಡಿತು.

ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಸಾವಿರಾರು ವಿದ್ಯಾರ್ಥಿಗಳು, ಪಾಲಕರಿಗೆ ಶೈಕ್ಷಣಿಕ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದು ವಿಶೇಷ.

ಪ್ರತಿಯೊಬ್ಬರ ಶೈಕ್ಷಣಿಕ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರಮುಖ ಪಾತ್ರ ವಹಿಸಲಿದ್ದು, ಯಾವ ಶಿಕ್ಷಣದಿಂದ ಭವಿಷ್ಯ ಉಜ್ವಲಗೊಳ್ಳಲಿದೆ ಎಂಬುದರ ಮಾರ್ಗದರ್ಶನ ಜೊತೆಗೆ ಔದ್ಯೋಗಿಕ ಜೀವನಕ್ಕೆ ಪಾದಾರ್ಪಣೆ ಮಾಡಲು ಏನೆಲ್ಲಾ ಶೈಕ್ಷಣಿಕ ಮಾರ್ಗದರ್ಶನ ಬೇಕು ಎಂಬುದನ್ನು ಈ ಸಂಸ್ಥೆಗಳು ತಿಳಿಸಿಕೊಟ್ಟವು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಕರ್ನಾಟಕ ಕಾಲೇಜಿನಿಂದ ಹಿಡಿದು ತಪೋವನ ವರೆಗೆ ಹತ್ತಾರು ಶಿಕ್ಷಣ ಸಂಸ್ಥೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿದ್ದು ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ಶಿಕ್ಷಣಕ್ಕೆ ಪೂರಕವಾಗಿ ಏಷ್ಯಾನೆಟ್‌ ಸಂಸ್ಥೆಯ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಈ ಮೇಳ ಆಯೋಜಿಸಿದ್ದು ಶ್ಲಾಘನೀಯ. ಬರೀ ಸುತ್ತಲಿನ ಶೈಕ್ಷಣಿಕ ವಾತಾವರಣಕ್ಕಿಂತ ಬೇರೆ ಬೇರೆ ಏನೆಲ್ಲಾ ಅವಕಾಶಗಳಿವೆ ಎಂಬುದು ಈ ಮೇಳದಲ್ಲಿ ವಿದ್ಯಾರ್ಥಿ, ಶಿಕ್ಷಕರಿಗೆ ದೊರೆತಿದೆ. ಪಾಲಕರ ಕಾರ್ಯವನ್ನು ಈ ಮೇಳವು ಆದಷ್ಟು ಸರಳಗೊಳಿಸಿದೆ ಎಂದರು.

ಈ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಸಂಸ್ಥೆಗಳ ಪ್ರತಿನಿಧಿಗಳಿಗೆ ಶಾಸಕ ಅರವಿಂದ ಬೆಲ್ಲದ, ಸುವರ್ಣ ನ್ಯೂಸ್‌ ರಾಜಕೀಯ ವಿಶ್ಲೇಷಕ ಪ್ರಶಾಂತ ನಾತು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಚಂದ್ರಕಲಾ ಕೊಟಬಾಗಿ, ನೆನಪಿನ ಕಾಣಿಕೆಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಯುವ ಡ್ಯಾನ್ಸ್‌ ಅಕಾಡೆಮಿ ವತಿಯಿಂದ ಭಾರತಾಂಬೆ ಕುರಿತಾಗಿ ಅದ್ಭುತ ನೃತ್ಯ ಪ್ರದರ್ಶನ ನಡೆಯಿತು.

ಸಕಲ ಸೌಲಭ್ಯ

ಕುಂದಾಪುರದ ಮೂಡಲಕಟ್ಟೆ ಐಎಂಜೆ ಇನ್ಸ್ಟಿಟ್ಯೂಶನ್ ಕಳೆದ 20 ವರ್ಷದಿಂದ ಪ್ರಾರಂಭವಾಗಿದ್ದು, ಸಂಸ್ಥೆಯಲ್ಲಿ 6 ಕಾಲೇಜುಗಳಿದ್ದು 20 ಕೋರ್ಸ್‌ಗಳಿವೆ. ಈ ಸಂಸ್ಥೆಯಲ್ಲಿ ಓದ ಬಯಸುವ ಮಕ್ಕಳಿಗೆ ಸರ್ಕಾರ ನೀಡುವ ಎಲ್ಲ ಬಗೆಯ ಸ್ಕಾಲರ್‌ಶಿಫ್‌ ದೊರೆಯುವುದು. ಸಾಂಸ್ಕೃತಿಕ, ಕ್ರೀಡೆ ಮತ್ತು ಪ್ಲೇಸ್ಮೆಂಟಗಳಿಗೆ ಸಂಸ್ಥೆ ಹೆಚ್ಚು ಆದ್ಯತೆ ನೀಡುತ್ತದೆ.

ಡಾ. ರಾಮಕೃಷ್ಣ ಹೆಗಡೆ, ನಿರ್ದೇಶಕರು, ಬ್ರ್ಯಾಂಡ್ ಬಿಲ್ಡಿಂಗ್ ವಿಭಾಗ, ಐಎಂಜೆ.