ಗ್ರಾಮದಲ್ಲಿ ಸರ್ವ ಸಮುದಾಯಗಳ ನಡುವೆ ಸಾಮರಸ್ಯ, ಸೇವಾ ಮನೋಭಾವ ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಬಳ್ಳಾರಿ: ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ನ. 1ರಂದು ಸಂಜೆ 4 ಗಂಟೆಗೆ ಗ್ರಾಮದ ಜನರಲ್ಲಿ ಸೇವಾ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾಧಕರ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಮುಖಂಡರಾದ ಸಂಗನಕಲ್ಲು ಹಿಮಂತರಾಜ್, ಎಸ್‌.ವೈ.ಕಟ್ಟೆಗೌಡ ಹಾಗೂ ನಿವೃತ್ತ ಕಾರ್ಯಪಾಲಕ ಅಭಿಯಂತರ ಡಿ.ವೆಂಕಟರಮಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಗುವುದು.ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರೈಸಿಂಗ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಿರಿಯ ನಾಗರಿಕರಿಗೆ ಶತಮಾನಂ ಭವತಿ ಪ್ರಶಸ್ತಿ, 200 ಮಂದಿ ಉದ್ಯೋಗಿಗಳು, ಶಿಕ್ಷಕರು, ಎಂಜಿನಿಯರ್‌ಗಳು, ವಕೀಲರು, ವೈದ್ಯರು ಹಾಗೂ ಪದವೀಧರರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ನಿವೃತ್ತ ನೌಕರರಿಗೆ ಫ್ಯಾಮಿಲಿ ಹೀರೋ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಒಂದೇ ವೇದಿಕೆಯಲ್ಲಿ 800 ಜನ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಈ ಬೃಹತ್ ಕಾರ್ಯಕ್ರಮವು ಸಂಗನಕಲ್ಲು ಗ್ರಾಮದ ಇತಿಹಾಸದಲ್ಲಿ ಮೈಲಿಗಲ್ಲಾಗಲಿದೆ ಎಂದರು.

ಗ್ರಾಮದಲ್ಲಿ ಸರ್ವ ಸಮುದಾಯಗಳ ನಡುವೆ ಸಾಮರಸ್ಯ, ಸೇವಾ ಮನೋಭಾವ ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಪ್ರತಿ ವರ್ಷವೂ ಈ ಕಾರ್ಯಕ್ರಮ ಮುಂದುವರಿಸಲು ನಿರ್ಧರಿಸಲಾಗಿದೆ.

ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರನ್ನು ಗುರುತಿಸಿ ಗೌರವಿಸುವುದರ ಜತೆಗೆ ಯುವಜನರಲ್ಲಿ ಸಾಧನೆಯ ಪ್ರೇರಣೆ ಮೂಡಿಸುವ ಉದ್ದೇಶ ಹೊಂದಲಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ಮೂಲಕ ಅವರ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸಲಾಗುವುದು ಎಂದು ವಿವರಿಸಿದರು.

ವಕೀಲ ದಾಸರಿ ಗೋವಿಂದ, ಪ್ರಸಾದ್, ಮೇಟಿ ಬಸವರಾಜಗೌಡ, ಪ್ರಸಾದ್, ಯುಧಿಷ್ಠಿರ, ರೈತ ಸಂಘದ ಕೃಷ್ಣಮೂರ್ತಿ, ವಿ.ಗಣೇಶ್, ಟಿ.ನಾಗರಾಜ್, ಆಪ್ತಮಿತ್ರ ಬಾಷಾ, ಕರಡಿಹಳ್ಳಿ ಮಲ್ಲಿಕಾರ್ಜುನ, ಚಂದ್ರಪ್ಪ ಹಂದ್ರಾಳು, ಜಡೆಪ್ಪ, ಜಿ.ಜಡೇಗೌಡ, ಬಿ.ಮೂಕಯ್ಯ, ನಾಗನಗೌಡ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.