ಸಾರಾಂಶ
ಕೊಡಗು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬಕ್ರಿದ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಸುಂಟಿಕೊಪ್ಪ, ಸಿದ್ದಾಪುರ, ಕೊಂಡಂಗೇರಿ, ಕಂಡಕೆರೆ ಸೇರಿದಂತೆ ಜಿಲ್ಲೆಯ ವಿವಿಧ ನಗರ, ಪಟ್ಟಣ ಹಾಗೂ ಹೋಬಳಿಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ನಿಗದಿ ಮಾಡಿಕೊಂಡು ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಳಿಕ, ಅಪ್ಪುಗೆಯಿಂದ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಹಿರಿಯರು ಸಾಂಪ್ರದಾಯಿಕ ಹೊಸ ಬಟ್ಟೆ ಧರಿಸಿ ಬಂದಿದ್ದರು. ತಲೆ ಮೇಲೆ ವಿವಿಧ ವಿನ್ಯಾಸಗಳ ಟೊಪ್ಪಿ ಧರಿಸಿ ಗಮನ ಸೆಳೆದರು. ಬಹುತೇಕರು ಅತ್ತರ್ ಸಿಂಪಡಿಸಿಕೊಂಡು ಸುಗಂಧ ಹರಡಿಸಿದರು. ಮಸೀದಿಗಳಲ್ಲಿದ್ದ ಧರ್ಮಗುರುಗಳು ಹಾಗೂ ಮೌಲ್ವಿಗಳ ಧಾರ್ಮಿಕ ಪ್ರವಚನ ಬಳಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಗೆ ಬಂದವರಿಗೆ ತಂಪು ಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪ್ರಾರ್ಥನಾ ಸ್ಥಳಗಳಲ್ಲಿ ಬಡ ಮುಸ್ಲಿಮರಿಗೆ ಉಳ್ಳವರು ದಾನ ಮಾಡುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ ದೃಶ್ಯ ಸಾಮಾನ್ಯವಾಗಿತ್ತು.ನಂತರ ತ್ಯಾಗ ಬಲಿದಾನದ ಸಂಕೇತವಾಗಿ ಕುರ್ಬಾನಿ ಸೇವೆ ನಡೆಯಿತು. ಬಕ್ರೀದ್ ಸಾಮೂಹಿಕ ಪ್ರಾರ್ಥನೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಮಸೀದಿಗಳು, ಪ್ರಾರ್ಥನ ಮಂದಿರಗಳಿಗೆ ಭಾನುವಾರ ರಾತ್ರಿಯಿಂದಲೇ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.