ಸಾರಾಂಶ
ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸೋಮವಾರ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸೋಮವಾರ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಕಲ ಜೀವರಾಶಿಗೆ ಒಳಿತಾಗುವಂತೆ ದೇವರಲ್ಲಿ ಮೊರೆಯಿಟ್ಟರು.
ಹಬ್ಬದ ಅಂಗವಾಗಿ ಶ್ವೇತವಸ್ತ್ರ ಧರಿಸಿದ ಮುಸ್ಲಿಮರು, ರಂಗು ರಂಗಿನ ಟೋಪಿ ತೊಟ್ಟು ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ಆಗಮಿಸಿದರು. ನೂರಾರು ಜನರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಧರ್ಮಗುರು ಮೌಲ್ವಿ ಖಾತೀಬ್ ಡಾ. ಮುಜಫರ್ ಅಲಿಖಾನ್ ಅವರು ಧರ್ಮ ಉಪದೇಶ ನೀಡುತ್ತಾ, ಜೀವನದಲ್ಲಿ ಮರೆಯಾಗುತ್ತಿರುವ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸಿ, ಬದುಕಿಗೆ ಸ್ಪೂರ್ತಿ ಮತ್ತು ನವ ಚೈತನ್ಯವನ್ನು ತುಂಬುವುದೇ ಹಬ್ಬಗಳ ಗುರಿ ಎಂದರು.
ಪ್ರವಾದಿ ಇಬ್ರಾಹಿಂ ಅವರು ದೈವಾಜ್ಞೆಯಂತೆ ನಿರ್ವಹಿಸಿದ ಅಪೂರ್ವ ತ್ಯಾಗದ ಸ್ಮರಣಾರ್ಥ ಆಚರಿಸಲ್ಪಡುವ ಹಬ್ಬವೇ ಬಕ್ರೀದ್ ಹಬ್ಬ, ತ್ಯಾಗ, ತನ್ನ ಸುಂದರ ಅರ್ಥವ್ಯಾಪ್ತಿಯೊಂದಿಗೆ ಬದಕನ್ನು ತುಂಬಿದಾಗಲೇ ಜೀವನದಲ್ಲಿ ಸುಭಿಕ್ಷೆಯೂ ನೆಮ್ಮದಿಯೂ ಸಾಧ್ಯವಾಗುತ್ತದೆ ಎಂದರು.ಸದರ್ ಇಸ್ಮಾಯಿಲ್ ಪಾಶಾಪ್ಯಾರೆ, ಮೊಹಿಜುದ್ದೀನ್‌ಖಾನ್ ಮುಬಾರಕ, ಖಾಜಾಮೈನೋದ್ದೀನ್, ಅಕ್ಬರ್, ಫಯಾಜ್ ಅಹ್ಮದ್, ಸಮಿ ಮೌಲ್ ಸಾಬಾ, ಅನ್ವರ್ ಅಹ್ಮದ್, ಕಾಶಿಂ ಅಲಿಸಾಬ್, ಶಬ್ಬೀರ್ ಅಹ್ಮದ್, ಸೈಯದ್ ಬಾಬಾ, ಸಿರಾಜ್, ನವಾಜ್ ಖಾನ್, ಜಹಿರ್ ಸೇರಿದಂತೆ ಇತರರಿದ್ದರು.