ಸಾರಾಂಶ
ಸಂಸ್ಥೆಯ ಶಿಕ್ಷಕ ವೃಂದದವರು ನೃತ್ಯ ಗಾಯನ, ಪ್ರಹಸನ, ಗೊಂಬೆ ಕುಣಿತದ ಮೂಲಕ ಮಕ್ಕಳನ್ನು ರಂಜಿಸಿದರು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಸಂಭ್ರಮದಿಂದ ಚಿಣ್ಣರ ಹಬ್ಬ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಶಿಶು ವೈದ್ಯಕೀಯ ವಿಭಾಗದ ಪ್ರೊಫೆಸರ್ ಡಾ. ಸುನೀಲ್ ಸಿ. ಮುಂಡ್ಕೂರ್ ಆಗಮಿಸಿ, ಮಕ್ಕಳಿಗೆ ಶುಭ ಹಾರೈಸಿದರು.ಜೀವನದಲ್ಲಿ ಸಂತೋಷವಾಗಿರಬೇಕಾದರೆ ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಾದಕ ವಸ್ತು, ಜಂಕ್ ಫುಡ್‌ನಿಂದ ದೂರವಿದ್ದು, ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಏಕಾಂಗಿಯಾಗಿದ್ದರೂ ಸಾಧಿಸುವ ಛಲ ಹೊಂದಿರಬೇಕು ಎಂದವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಇಂದಿನ ದಿನಗಳಲ್ಲಿ ಹಿರಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೊಂದು ದುರಂತ. ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಮಕ್ಕಳು ಮೌಲ್ಯ ನೀತಿ ಪಾಠವಿರುವ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕು ಎಂದರು.ಶಾಲೆಯ ಪ್ರಾಂಶುಪಾಲ ಜಾರ್ಜ್ ಕುರಿಯನ್ ಮಾತನಾಡಿ, ನಮಗೆ ಪ್ರತಿದಿನವೂ ವಿಶೇಷವಾಗಿದ್ದು, ನಮ್ಮ ಗುರಿಯತ್ತ ನಿತ್ಯವೂ ಗಮನವನ್ನು ಕೇಂದ್ರೀಕರಿಸಬೇಕು. ಸುಖ ದುಃಖಗಳು ಎದುರಾದಾಗ ಭಾವನೆಗಳ ಅಭಿವ್ಯಕ್ತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದರು.ಸಂಸ್ಥೆಯ ಶಿಕ್ಷಕ ವೃಂದದವರು ನೃತ್ಯ ಗಾಯನ, ಪ್ರಹಸನ, ಗೊಂಬೆ ಕುಣಿತದ ಮೂಲಕ ಮಕ್ಕಳನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶ್ರೀಮಾ ಪ್ರಣವ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ. ಅನುಷಾ ಸುಬ್ರಹ್ಮಣ್ಯಂ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.