ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಾದ್ಯಂತ ಶನಿವಾರ ಪುತ್ತರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.ಧಾನ್ಯಲಕ್ಷ್ಮಿಯನ್ನು ಬತ್ತದ ಗದ್ದೆಯಿಂದ ಮನೆಗಳಿಗೆ ತಂದು ತುಂಬಿಸಿಕೊಳ್ಳುವುದೇ ಈ ಹಬ್ಬದ ವಿಶೇಷವಾಗಿದ್ದು, ಶನಿವಾರ ರಾತ್ರಿ ಕದಿರು ಕೊಯ್ದು ಕೊಡಗಿನ ಜನರು ಹುತ್ತರಿ ಹಬ್ಬವನ್ನು ಆಚರಿಸಿದರು.
ಕೊಡಗಿನಲ್ಲಿ ಈ ಬಾರಿ ಎಂದಿನಂತೆ ಶ್ರದ್ಧಾ ಭಕ್ತಿಯಿಂದ ಪುತ್ತರಿ ಹಬ್ಬವನ್ನು ನಾಡಿನ ಜನತೆ ಆಚರಿಸಿಕೊಂಡಿದ್ದಾರೆ. ಹಬ್ಬದ ದಿನ ಕೊಡಗಿನ ಇಗ್ಗುತ್ತಪ್ಪ ದೇವಾಲದಲ್ಲಿ ಮೊದಲು ಆಚರಣೆ ನಡೆಸಲಾಗುತ್ತದೆ. ನಂತರ ಜಿಲ್ಲೆಯ ವಿವಿಧ ಭಾಗದಲ್ಲಿ ಸಂಭ್ರಮಾಚರಣೆ ಇರುತ್ತೆ. ಹುತ್ತರಿ ಹಬ್ಬದಂದು ಮೊದಲಿಗೆ ನೆರೆ ಕಟ್ಟಿ ಕದಿರನ್ನು ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದ ನಂತರ ದೊಡ್ಡಮನೆಗೆ ತಂದು ಪೂಜೆ ನೆರವೇರಿಸಲಾಗುತ್ತದೆ. ಗದ್ದೆಯಿಂದ ತಂದ ಹೊಸ ಅಕ್ಕಿಯನ್ನು ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ನಂತರ ತಮ್ಮ ತಮ್ಮ ಮನೆಗಳಿಗೆ ಕದಿರು ತೆಗೆದುಕೊಂಡು ಹೋಗುವ ಸಂಪ್ರದಾಯವಿದೆ.ಕೊಡಗಿನ ಮಳೆ ದೇವರಾದ ಇಗ್ಗುತ್ತಪ್ಪ ದೇವಾಲಯದಲ್ಲಿ ರಾತ್ರಿ 8.30 ಕ್ಕೆ ಕದಿರು ತೆಗೆದರೆ ಉಳಿದಡೆ ರಾತ್ರಿ 8:50ಕ್ಕೆ ಕದಿರುತೆಗೆಯಲು ಸಮಯ ನಿಗದಿಪಡಿಸಲಾಗಿತ್ತು. ಇನ್ನೂ ಕೊಡಗಿನ ನಾನಾ ಕಡೆಗಳಲ್ಲೂ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಕೊಡಗಿನ ಕೊಡವ ಸಮಾಜ, ಗೌಡ ಸಮಾಜಗಳಲ್ಲೂ ಕೂಡ ಅದ್ಧೂರಿಯಾಗಿ ಹಬ್ಬ ಜರುಗಿತು. ಕೈಲ್ ಮುಹೂರ್ತ ಹಬ್ಬವನ್ನು ಬಿಟ್ಟರೆ ಕೊಡಗಿನಲ್ಲಿ ಈ ಹುತ್ತರಿ ಹಬ್ಬವನ್ನು ವೈಭವಯುತವಾಗಿ ಕೊಡಗಿನ ಜನತೆ ಆಚರಿಸುತ್ತಾರೆ.
ಶನಿವಾರ ಬೆಳಗ್ಗೆ ಬಾಡಗರಕೇರಿಯ ಪ್ರಸಿದ್ಧ ಮೃತ್ಯುಂಜಯ ದೇವಾಲಯದಲ್ಲಿ ಊರಿನವರು ಕದಿರು ತೆಗೆದು ದೇವಾಲಯದಲ್ಲಿ ಪೂಜೆ ನೆರವೇರಿಸಿ ನಂತರ ತಮ್ಮ ಮನೆಗೆ ಧಾನ್ಯ ಲಕ್ಷ್ಮಿಯನ್ನು ಬರಮಾಡಿಕೊಂಡರು. ದೇವಾಲಯದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಊರಿನ ತಕ್ಕ ಮುಖ್ಯಸ್ಥರು ಮತ್ತು ಊರಿನವರು ಒಟ್ಟಿಗೆ ಸೇರಿ ಹುತ್ತರಿ( ಪುತ್ತರಿ ) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಂಡರು.ಸಿಎನ್ ಸಿ ಸಂಘಟನೆಯಿಂದ ಪುತ್ತರಿ ಆಚರಣೆ
ಮಡಿಕೇರಿ : ಪುತ್ತರಿ ಹಬ್ಬವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದಕ್ಷಿಣ ಕೊಡಗಿನ ಪತ್ ಕಟ್ ನಾಡ್ ನ ಬಾಳೆಲೆ ಬಳಿಯ ಬಿಳೂರು ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಬಿಳೂರು ಗ್ರಾಮದ ಕಾಂಡೇರ ಸುರೇಶ್ ಅವರ ಬತ್ತದ ಗದ್ದೆಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಾಂಪ್ರದಾಯಿಕವಾಗಿ ನವ ಧಾನ್ಯ ಬತ್ತದ ಕದಿರು ಕೊಯ್ಯುವ ಮೂಲಕ 31ನೇ ವರ್ಷದ ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.ದುಡಿಕೊಟ್ಸ್-ಪಾಟ್ ಮೂಲಕ ಗದ್ದೆಗೆ ಮೆರವಣಿಗೆಯಲ್ಲಿ ತೆರಳಿ ತೆನೆ ತುಂಬಿದ ಕದಿರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಪ್ರಕೃತಿ ದೇವಿಗೆ ನಮಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿ ಪುತ್ತರಿಯ ಆಚಾರ, ವಿಚಾರಗಳನ್ನು ಆರಂಭಿಸಿದರು. ಕೊಯ್ದ ಕದಿರನ್ನು ‘ಪೊಲಿಯೇ ಬಾ, ಪೊಲಿ ಪೊಲಿಯೇ ಬಾ’ ಎಂದು ಧಾನ್ಯಲಕ್ಷ್ಮಿಯನ್ನು ಘೋಷವಾಕ್ಯದ ಮೂಲಕ ಆಹ್ವಾನಿಸುತ್ತಾ ಮನೆ ತುಂಬಿಕೊಂಡರು. ನಂತರ ನವ ಧಾನ್ಯವನ್ನು ಪೂಜ್ಯಸ್ಥಾನದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿದರು.