ಸಾರಾಂಶ
ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಎರಡು ಒಂದೇ ದಿನಕ್ಕೆ ಬಂದಿರುವುದು ಸಂಭ್ರಮ ಇಮ್ಮಡಿಗೊಳಿಸಿತ್ತು. ಹುಬ್ಬಳ್ಳಿ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆದರೆ, ಹುಲಿಗೆಮ್ಮ ದೇವಿ, ದಾನಮ್ಮ ದೇವಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದೀಪಾವಳಿ ಹಬ್ಬದಂದು ಕನ್ನಡ ಭುವನೇಶ್ವರಿಯಂತೆ ಅಲಂಕರಿಸಿ ಪೂಜಿಸಲಾಯಿತು.
ಹುಬ್ಬಳ್ಳಿ:
ಬೆಳಕಿನ ಹಬ್ಬ ದೀಪಾವಳಿಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಎರಡು ಒಂದೇ ದಿನಕ್ಕೆ ಬಂದಿರುವುದು ಸಂಭ್ರಮ ಇಮ್ಮಡಿಗೊಳಿಸಿತ್ತು. ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆದರೆ, ಹುಲಿಗೆಮ್ಮ ದೇವಿ, ದಾನಮ್ಮ ದೇವಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದೀಪಾವಳಿ ಹಬ್ಬದಂದು ಕನ್ನಡ ಭುವನೇಶ್ವರಿಯಂತೆ ಅಲಂಕರಿಸಿ ಪೂಜಿಸಲಾಯಿತು.
ಮನೆ-ಮನೆಗಳಲ್ಲಿ ಸಂಭ್ರಮ, ಸಂತಸ ಮನೆ ಮಾಡಿತ್ತು. ಪ್ರತಿ ಮನೆ ಎದುರಿಗೆ ವಾಹನ ತೊಳೆದು ಅಮಾವಾಸ್ಯೆ ಪೂಜೆಯನ್ನು ವಿಶೇಷವಾಗಿ ಮಾಡಲಾಗಿತ್ತು. ಬಟ್ಟೆ, ಪೂಜಾ ವಸ್ತುಗಳ ಹಾಗೂ ಇನ್ನಿತರ ಮಳಿಗೆಗಳಲ್ಲಿ ಹಬ್ಬದ ಪೂಜೆ ಶುಕ್ರವಾರವೇ ನಡೆಯಿತು. ನರಕ ಚತುದರ್ಶಿ, ಸಂಜೆ ಅಂಗಡಿ, ಮುಂಗಟ್ಟು ಹಾಗೂ ಮನೆ-ಮನಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಮಾರುಕಟ್ಟೆಗಳಲ್ಲಿ ತರಹೇವಾರಿ ಆಕಾಶ ಪುಟ್ಟಿ, ಪ್ಲಾಸ್ಟಿಕ್, ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿವೆ. ಹೊಸ ಮಾದರಿಗಳ ಬಟ್ಟೆಗಳ ಖರೀದಿಗೆ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. ಚಿಕ್ಕಮಕ್ಕಳು ಪಟಾಕಿಗಳ ಖರೀದಿ ಮಾಡಲು ಪಾಲಕರ, ಪೋಷಕರ ದುಂಬಾಲು ಬಿದ್ದಿದ್ದರು. ಅಲ್ಲದೆ ವ್ಯಾಪಕ ಪ್ರಮಾಣದಲ್ಲಿ ಕಬ್ಬು, ಬಾಳೆ ದಿಂಡು, ಚಂಡು ಹೂ, ಬೂದ ಕುಂಬಳಕಾಯಿ ಖರೀದಿ ನಡೆಯಿತು. ಗೃಹ ಉಪಯೋಗಿ ವಸ್ತುಗಳ ವ್ಯಾಪಾರದ ಭರಾಟೆ ನಡೆಯಿತು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಹೊಸ ಬಟ್ಟೆಗಳ ಧರಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು.ಇನ್ನು ಹಿಂಗಾರಿನಲ್ಲಿ ಕೊಂಚ ಹೆಚ್ಚು ಮಳೆ ಸುರಿದರೂ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿರುವುದು ರೈತಾಪಿ ವರ್ಗದಲ್ಲಿ ಖುಷಿಯನ್ನುಂಟು ಮಾಡಿತ್ತು. ಇನ್ಮೇಲಾದರೂ ಬಿತ್ತನೆ ಶುರು ಮಾಡಬಹುದು ಎಂದುಕೊಂಡು ದೀಪಾವಳಿ ಹಬ್ಬದಂದೇ ಕೃಷಿ ಚಟುವಟಿಕೆಗಳಿಗೂ ಕೆಲವೆಡೆ ಚಾಲನೆ ದೊರೆತಿರುವುದು ವಿಶೇಷ. ಹಿಂಗಾರಿ ಬಿತ್ತನೆ ಈ ವರೆಗೂ ಆಗಿಲ್ಲ. ರೈತರ ಕಷ್ಟಗಳನ್ನು ದೀಪಾವಳಿ ತನ್ನ ದೀಪಗಳ ಬೆಳಕಿನಲ್ಲಿ ಕರಗಿಸಿಕೊಂಡು ಹೋಗಲಿ. ಬಿತ್ತನೆಯಾಗಿ ಉತ್ತಮ ಫಸಲು ಸಿಗಲಿ ಎಂಬ ಆಶಯ ರೈತರದ್ದು. ದೀಪಾವಳಿ ಎಲ್ಲರ ಮೊಗದಲ್ಲಿ ಮಂದಹಾಸ, ಸಡಗರ ಸಂಭ್ರಮವನ್ನುಂಟು ಮಾಡಿದಂತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
;Resize=(128,128))
;Resize=(128,128))
;Resize=(128,128))
;Resize=(128,128))