ಹಳಿಯಾಳ ತಾಲೂಕಿನಲ್ಲಿ ಜಾತ್ರೆಗಳ ಸಂಭ್ರಮ

| Published : Jan 13 2025, 12:46 AM IST

ಸಾರಾಂಶ

12 ವರ್ಷಗಳ ನಂತರ ನಡೆಯುವ ಸಾಂಬ್ರಾಣಿಯ ಜಾತ್ರೆಯು ಜ. 28ರಿಂದ ಆರಂಭಗೊಳ್ಳುತ್ತಿದ್ದು, ಫೆಬ್ರವರಿ 10ರ ವರೆಗೆ ನಡೆಯಲಿದೆ. ಮಂಗಳವಾಡ ಗ್ರಾಮದ ಜಾತ್ರೆ 12 ವರ್ಷಗಳ ನಂತರ ನಡೆಯುತ್ತಿದ್ದು, ಫೆ. 2ರಿಂದ 21ರ ವರೆಗೆ ನಡೆಯಲಿದೆ.

ಓರ್ವಿಲ್‌ ಫರ್ನಾಂಡೀಸ್

ಹಳಿಯಾಳ: ತಾಲೂಕಿನೆಲ್ಲೆಡೆ ಇದೀಗ ಗ್ರಾಮದೇವಿಯ ಜಾತ್ರೆಯ ಸಂಭ್ರಮ. ದಶಕಗಳ ನಂತರ ಕೆಲವೆಡೆ, ಎರಡೂವರೆ ದಶಕಗಳ ನಂತರ ಗ್ರಾಮದೇವಿ ಜಾತ್ರೆ ನಡೆಯಲಿದೆ.

ಜನವರಿ 28ರಿಂದ ಆರಂಭಗೊಳ್ಳುವ ಜಾತ್ರಾ ಸಂಭ್ರಮವು ಮೇ ಮೊದಲ ವಾರದವರೆಗೆ ನಡೆಯುಲಿರುವುದರಿಂದ ಎಲ್ಲೆಡೆ ಉತ್ಸಾಹ, ಸಂಭ್ರಮ ಮನೆ ಮಾಡಿದ್ದು, ಗ್ರಾಮದೇವಿಯರಿಗೆ ಉಘೇ ಉಘೇ ಎಂಬ ಜೈಕಾರ ಹರ್ಷೋದ್ಗಾರಗಳು ಮೊಳಗಲಾರಂಭಿಸಿದೆ.

ಹಳಿಯಾಳ ತಾಲೂಕಿನ ಸಾಂಬ್ರಾಣಿ ಮಂಗಳವಾಡ, ಕಾಳಗಿನಕೊಪ್ಪ, ಬೆಳವಟಗಿ ಮತ್ತು ಸಾತ್ನಳ್ಳಿ ಗ್ರಾಮಗಳಲ್ಲಿ ಗ್ರಾಮದೇವಿ ಜಾತ್ರೆಗಳು ನಡೆಯಲಿವೆ. ಗ್ರಾಮದ ಶಕ್ತಿದೇವಿಯಾಗಿರುವ ಗ್ರಾಮದೇವಿಯ ಬಗ್ಗೆ ಎಲ್ಲಿಲ್ಲದ ಗೌರವ, ಅಭಿಮಾನ, ಭಕ್ತಿ ಶ್ರದ್ಧೆ ಬೆಳೆದು ಬಂದಿದೆ.

ದೇವಸ್ಥಾನದಲ್ಲಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡುವ ಶ್ರೀ ಗ್ರಾಮದೇವಿಯು ಜಾತ್ರೆಯ ಸಂದರ್ಭದಲ್ಲಿ ಭಕ್ತರ ಮನೆಗೆ ತೆರಳಿ ದರ್ಶನ ನೀಡಿ ಪೂಜೆ-ಪುನಸ್ಕಾರಗಳನ್ನು ಸ್ವೀಕರಿಸುವುದರಿಂದ ಜಾತ್ರೆಗಳಿಗೆ ಭಾರಿ ಮಹತ್ವ. ಗ್ರಾಮದೇವಿಯನ್ನು ಭಕ್ತಿಯಿಂದ ಬರಮಾಡಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗಳು ಓಣಿಗಳು ಸಜ್ಜಾಗಲಾರಂಭಿಸಿವೆ.ಜಾತ್ರೆಗಳು ಯಾವಾಗ ಆರಂಭ?: 12 ವರ್ಷಗಳ ನಂತರ ನಡೆಯುವ ಸಾಂಬ್ರಾಣಿಯ ಜಾತ್ರೆಯು ಜ. 28ರಿಂದ ಆರಂಭಗೊಳ್ಳುತ್ತಿದ್ದು, ಫೆಬ್ರವರಿ 10ರ ವರೆಗೆ ನಡೆಯಲಿದೆ. ಮಂಗಳವಾಡ ಗ್ರಾಮದ ಜಾತ್ರೆ 12 ವರ್ಷಗಳ ನಂತರ ನಡೆಯುತ್ತಿದ್ದು, ಫೆ. 2ರಿಂದ 21ರ ವರೆಗೆ ನಡೆಯಲಿದೆ. ಕಾಳಗಿನಕೊಪ್ಪ ಗ್ರಾಮದ ಜಾತ್ರೆ 12 ವರ್ಷಗಳ ನಂತರ ನಡೆಯುತ್ತಿದ್ದು, ಫೆ. 11ರಿಂದ 25ರ ವರೆಗೆ ನೆರವೇರಲಿದೆ. ಬೆಳವಟಗಿ ಗ್ರಾಮದ ಜಾತ್ರೆಯು 29 ವರ್ಷಗಳ ನಂತರ ನಡೆಯುತ್ತಿದ್ದು, ಏ. 4ರಿಂದ 22ರ ವರೆಗೆ ಜರುಗಲಿದೆ. ಸಾತ್ನಳ್ಳಿ ಗ್ರಾಮದ ಜಾತ್ರೆಯು 13 ವರ್ಷಗಳ ನಂತರ ನಡೆಯುತ್ತಿದ್ದು, ಏ. 22ರಿಂದ ಮೇ 2ರ ವರೆಗೆ ನಡೆಯಲಿವೆ. ಗ್ರಾಮದರ್ಶನದ ಹೊನ್ನಾಟ: ಸಾಂಬ್ರಾಣಿ ಗ್ರಾಮದಲ್ಲಿ ಎರಡು ದಿನ ಹೊನ್ನಾಟ ನಡೆಯಲಿದೆ. ಫೆ. 1ರಂದು ಗುದಮುರಗಿ ಮತ್ತು ಸಾಂಬ್ರಾಣಿಯಲ್ಲಿ ಹೊನ್ನಾಟ ನಡೆಯಲಿದೆ. ಫೆ. 2ರಂದು ಶೇಕನಕಟ್ಟಾ ಮತ್ತು ಬುಕ್ಕಿನಕೊಪ್ಪ ಗ್ರಾಮದಲ್ಲಿ ಹಾಗೂ ಸಾಂಬ್ರಾಣಿ, ಮಂಗಳವಾಡದಲ್ಲಿ ಫೆ. 8ರಿಂದ 11ರ ವರೆಗೆ ನಾಲ್ಕು ದಿನಗಳವರೆಗೆ ಹೊನ್ನಾಟ ನಡೆಯಲಿದೆ.

ಕಾಳಗಿನಕೊಪ್ಪದಲ್ಲಿ ಫೆ. 21ರಿಂದ 23ರ ವರೆಗೆ ಮೂರು ದಿನಗಳವರೆಗೆ ನಡೆಯಲಿದೆ. ಬೆಳವಟಗಿಯಲ್ಲಿ ಏ. 14ರಿಂದ 16ರ ವರೆಗೆ ಮೂರು ದಿನಗಳ ವರೆಗೆ ನಡೆಯಲಿದೆ. ಸಾತ್ನಳ್ಳಿ ಗ್ರಾಮದಲ್ಲಿ ಹೊನ್ನಾಟಕ್ಕಾಗಿ ಮುಹೂರ್ತ ನಿಗದಿಯಾಗಬೇಕಿದೆ.ರಥೋತ್ಸವಕ್ಕೆ ಸಿದ್ಧತೆ: ಈ ಐದು ಗ್ರಾಮಗಳಲ್ಲಿ ನಡೆಯುವ ಜಾತ್ರೆಯಲ್ಲಿ ಸಾಂಬ್ರಾಣಿ ಮತ್ತು ಮಂಗಳವಾಡ ಗ್ರಾಮದಲ್ಲಿ ಮಾತ್ರ ರಥೋತ್ಸವ ನಡೆಯಲಿದೆ. ಅದಕ್ಕಾಗಿ ಸಾಂಬ್ರಾಣಿ ಮತ್ತು ಮಂಗಳವಾಡ ಗ್ರಾಮದಲ್ಲಿ ರಥ ಸಿದ್ಧಪಡಿಸುವ ಕಾರ್ಯಗಳು ನಡೆದಿವೆ.

ಮಂಗಳವಾಡ ಗ್ರಾಮದಲ್ಲಿ 7 ಅಂತಸ್ತಿನ ಬೃಹತ್ ರಥ ಸಜ್ಜಾಗುತ್ತಿದ್ದರೆ, ಸಾಂಬ್ರಾಣಿಯಲ್ಲೂ ರಥ ಕಟ್ಟುವ ಕಾರ್ಯ ನಡೆದಿದೆ.

ಮುಂಜಾಗ್ರತಾ ಕ್ರಮ: ಬಹುವರ್ಷಗಳ ನಂತರ ಗ್ರಾಮದೇವಿ ಜಾತ್ರೆಗಳ ನಡೆಯುತ್ತಿರುವುದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಹಾಗೂ ನೀರಿನ ಕೊರತೆ ಎದುರಾಗದಂತೆ ಹಾಗೂ ನೈರ್ಮಲ್ಯ ಕಾಪಾಡಲು ಮತ್ತು ರೋಗ- ರುಜಿನ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹಳಿಯಾಳ ತಹಸೀಲ್ದಾರ್‌ ಪ್ರವೀಣ ಹುಚ್ಚಣ್ಣನವರ ತಿಳಿಸಿದರು.