ಸಾರಾಂಶ
ಗೌರಿ ಹಬ್ಬವನ್ನು ಶುಕ್ರವಾರ ಚಾಮರಾಜನಗರ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಮಹಿಳೆಯರು ದೇವಸ್ಥಾನಕ್ಕೆ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದ್ದ ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆಸಿದರು.
ವಿದ್ಯಾಗಣಪತಿ ಮಂಡಳಿಯಿಂದ ಆಯೋಧ್ಯೆ ಗಣಪತಿ ಪ್ರತಿಷ್ಠಾಪನೆ । ಮಹಿಳೆಯರಿಂದ ದೇವಿಯ ಪೂಜೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಗೌರಿ ಹಬ್ಬವನ್ನು ಶುಕ್ರವಾರ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಮಹಿಳೆಯರು ದೇವಸ್ಥಾನಕ್ಕೆ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದ್ದ ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆಸಿ ತಮ್ಮ ಆಶೋತ್ತರಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.
ಹೊಸದಾಗಿ ಮದುವೆಯಾದವರು, ಮಕ್ಕಗಳಾಗದೇ ಇರುವವರು, ಮುತ್ತೈದೆಯರು ಗೌರಿಗೆ ಬಾಗಿನ ಅರ್ಪಿಸಿದರು, ಕೆಲವರು ಮುತ್ತೈದೆಯರಿಗೆ ಬಾಗಿನ ನೀಡಿ ಆಶೀರ್ವಾದ ಪಡೆದರು. ಮತ್ತೆ ಕೆಲವರು ಪರಸ್ಪರ ಅರಿಶಿನ ಕುಂಕುಮ ನೀಡಿ, ಮಾಂಗಲ್ಯ ಪೂಜೆ ಮಾಡಿ ಮುತ್ತೈದೆತನಕ್ಕೆ ಪ್ರಾರ್ಥಿಸಿದರು.ಜಿಲ್ಲಾ ಕೆಂದ್ರದ ಚಾಮರಾಜೇಶ್ವರ ದೇವಸ್ಥಾನ, ವೀರಭದ್ರಸ್ವಾಮಿ ದೇವಸ್ಥಾನ, ರಾಮಮಂದಿರಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಗೌರಿಯ ವಿಶೇಷ ಪೂಜೆಗೆ ಅನುವು ಮಾಡಿಕೊಡಲಾಗಿತ್ತು. ಕೆಲವರು ಮನೆ ಮನೆಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿಕೊಂಡು ಪೂಜೆ ಮಾಡಿ, ಮುತ್ತೈದೆಯರಿಗೆ ಮನೆಗೆ ಅರಿಶಿನ, ಕುಂಕುಮ ನೀಡಿದರು.
ಮನೆ ಮನೆಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಗಣೇಶನ ವಿಗ್ರಹವನ್ನು ಖರೀದಿ ಮಾಡಿ ಕೊಂಡೊಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಆಯೋಧ್ಯೆ ಗಣಪತಿ ಪ್ರತಿಷ್ಠಾಪನೆ:
ಜಿಲ್ಲಾ ಕೇಂದ್ರ ನಗರದಲ್ಲಿ ವಿದ್ಯಾಗಣಪತಿ ಮಂಡಳಿ ವತಿಯಿಂದ ಶನಿವಾರ ಈ ಬಾರಿ ಅಯೋಧ್ಯೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಸಕಲ ಸಿದ್ದತೆಯನ್ನು ಕೈಗೊಳ್ಳಲಾಗಿದೆ. ರಾಮಸಮುದ್ರದಲ್ಲಿ ತಯಾರಾದ ಸುದರ್ಶನಚಕ್ರ ಗಣಪತಿ ಮೂರ್ತಿಯನ್ನು ನಗರದ ರಥಬೀದಿಯಲ್ಲಿ ಸಿದ್ದಪಡಿಸಲಾಗಿದ್ದ ವೇದಿಕೆಗೆ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಲಾಗುವುದು.