ಸಂಭ್ರಮದ ದೇವರ ಬನ್ನಿ ಆಚರಣೆ

| Published : Oct 25 2023, 01:15 AM IST

ಸಾರಾಂಶ

ಐತಿಹಾಸಿಕ ಧರ್ಮದ ಗುಡ್ಡದಲ್ಲಿ ವಿಜಯನಗರ ಅರಸರ ಕಾಲದಿಂದಲೂ ಆಚರಣೆಯಲ್ಲಿರುವ ದೇವರ ಬನ್ನಿ ಉತ್ಸವವನ್ನು ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನವರಾತ್ರಿ ಪ್ರಯುಕ್ತ ತಾಲೂಕಿನ ನಾಗೇನಹಳ್ಳಿ ಗ್ರಾಮದ ಬಸವನ ದುರ್ಗದ ಸಮೀಪದ ಧರ್ಮದ ಗುಡ್ಡದಲ್ಲಿ ಸೋಮವಾರ ದೇವರ ಬನ್ನಿ ಕಾರ್ಯಕ್ರಮಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಐತಿಹಾಸಿಕ ಧರ್ಮದ ಗುಡ್ಡದಲ್ಲಿ ವಿಜಯನಗರ ಅರಸರ ಕಾಲದಿಂದಲೂ ಆಚರಣೆಯಲ್ಲಿರುವ ದೇವರ ಬನ್ನಿ ಉತ್ಸವವನ್ನು ಸ್ಥಳೀಯರು ಸೇರಿ ನಾಡಿನ ವಿವಿಧ ಕಡೆಯಿಂದ ಅಪಾರ ಪ್ರಮಾಣದಲ್ಲಿ ಆಗಮಿಸಿದ್ದ ಭಕ್ತರು ಶಕ್ತಿ ದೇವತೆಗಳ ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗಿ ಕಣ್ತುಂಬಿಕೊಂಡರು.

ವಿಜಯದಶಮಿಗೂ ಮುನ್ನಾ ದಿನ ನವಮಿಯಂದು ಧರ್ಮದಗುಡ್ಡದಲ್ಲಿನ ಚನ್ನಬಸವೇಶ್ವರಸ್ವಾಮಿ ಮತ್ತು ನಿಜಲಿಂಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಬಸವನದುರ್ಗ ಗ್ರಾಮದಿಂದ ಆಗಮಿಸಿದ ಚನ್ನಬಸವೇಶ್ವರ ಸ್ವಾಮಿ ಉತ್ಸವಮೂರ್ತಿಯ ಪಲ್ಲಕ್ಕಿ ಜತೆಗೆ ತಾಲೂಕಿನ ನಾನಾ ಕಡೆಯಿಂದ ೨೦ಕ್ಕೂ ಅಧಿಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಯನ್ನು ಬೃಹತ್ ಮೆರವಣಿಗೆ ಮೂಲಕ ಪಲ್ಲಕ್ಕಿಯಲ್ಲಿ ಹೊತ್ತು ತರಲಾಯಿತು. ಬಳಿಕ ಗುಡ್ಡದ ಕೆಳಭಾಗದ ಶಮಿವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ಪ್ರದಕ್ಷಣೆ ಹಾಕಿ ಭಕ್ತಿ ಮೆರೆದರು. ಅಲ್ಲಿಂದ ಮೂಲ ಸ್ಥಳಕ್ಕೆ ಆಗಮಿಸಿದ ಶಕ್ತಿದೇವತೆಗಳ ಉತ್ಸವ ಮೂರ್ತಿಗೆ ಭಕ್ತರು ನಮಿಸಿ ಭಕ್ತಿ ಸಮರ್ಪಿಸಿದರು.ಯುವ ಮುಖಂಡರಾದ ಸಿದ್ದಾರ್ಥ್ ಸಿಂಗ್, ಎಚ್.ಆರ್. ಗುರುದತ್, ಪಿ. ವೆಂಕಟೇಶ್, ಗುಂಡಿ ರಾಘವೇಂದ್ರ, ಗುಜ್ಜಲ ನಿಂಗಪ್ಪ, ಕಟಗಿ ಜಂಬಯ್ಯ, ಕೆ. ಮಹೇಶ, ಬಿ. ಮಹೇಶ್, ಎಸ್.ಎಸ್. ಚಂದ್ರಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಡಿವೈಎಸ್‌ಪಿ ಮಂಜುನಾಥ್, ಪಿಐಗಳಾದ ಶ್ರೀನಿವಾಸ ಮೇಟಿ, ವಿಶ್ವನಾಥ ಹಿರೇಗೌಡರು, ಶಿವರಾಜ್ ಸೇರಿದಂತೆ ಇತರರಿದ್ದರು.ಸಂಭ್ರಮ:

ದೇವರ ಬನ್ನಿ ಆಚರಣೆಯ ದಿನವಾದ ಸೋಮವಾರ ರಾತ್ರಿ ಏಳುಕೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಕೇರಿಯ ದೇವಾಲಯ ಸೇರಿದಂತೆ ರಸ್ತೆಗಳಲ್ಲಿ ಹಸಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿತ್ತು. ಇಡೀ ರಾತ್ರಿ ಯುವಕರು ಕೋಲಾಟ, ಭಜನೆ ಮಾಡಿದರೆ, ಮಹಿಳೆಯರು ಸೋಬಾನೆ ಪದಗಳು ಹಾಡಿ ದೇವಿಯನ್ನು ಆರಾಧಿಸಿದರು.

ಊರಬನ್ನಿ:

ಧರ್ಮದಗುಡ್ಡದಲ್ಲಿ ದೇವರ ಬನ್ನಿ ಆಚರಣೆ ನಡೆಸಿದ ನಾಗರಿಕರು, ಮಂಗಳವಾರ ಊರಬನ್ನಿ ಆಚರಿಸಿ ಸಂಭ್ರಮಿಸಿದರು. ನಸುಕಿನಲ್ಲಿ ಎದ್ದು, ಶಕ್ತಿ ದೇವತೆಗಳ ದರ್ಶನ ಪಡೆದ ಅವರು, ಸಂಜೆ ಹೊತ್ತು ಬಂಧು- ಮಿತ್ರರಿಗೆ ಪರಸ್ಪರ ಬನ್ನಿ ವಿನಿಯಮ ಮಾಡಿಕೊಂಡು ಸಹೋದರತ್ವ ಭಾವ ಮೆರೆದರು.