ಸಾರಾಂಶ
ಧಾರವಾಡ: ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ `ಮಕರ ಸಂಕ್ರಾಂತಿ''''. ಎಳ್ಳು ಮಿಶ್ರಿತ ಸ್ನಾನ ಮಾಡಿ ಎಳ್ಳು ಬೆಲ್ಲ ತಿಂದು ಕುಟುಂಬ ಸಮೇತ ಸಿಹಿ ಭೋಜನ ಮಾಡುವುದು ಹಬ್ಬದ ವಿಶೇಷ. ಅಂತಹ ಸಂಕ್ರಮಣ ಹಬ್ಬ ಧಾರವಾಡದಲ್ಲಿ ಭಾನುವಾರ ಸಂಭ್ರಮದಿಂದ ನಡೆಯಿತು.
ಇಲ್ಲಿಯ ಜಾನಪದ ಸಂಶೋಧನಾ ಸಂಸ್ಥೆಯು ಭಾನುವಾರ ರಂಗಾಯಣದ ಆವರಣದಲ್ಲಿ ವಿಶೇಷವಾಗಿ ಸಂಕ್ರಮಣವನ್ನು ಬರಮಾಡಿಕೊಂಡಿತು. ಖ್ಯಾತ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಅವರು ಶುರು ಮಾಡಿರುವ ಹಬ್ಬದ ಸಂಭ್ರಮವನ್ನು ಅವರ ಪತ್ನಿ ವಿಶ್ವೇಶ್ವರಿ ಹಾಗೂ ಪುತ್ರ ಭೂಷಣ್ ಮುಂದುವರಿಸಿಕೊಂಡು ಹೋಗುತ್ತಿದ್ದು, ಸಂಕ್ರಮಣ ಹಬ್ಬವನ್ನು ಸಂಸ್ಥೆಯ ಮಹಿಳೆಯರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.ಮಹಿಳೆಯರು ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ಸಂಕ್ರಮಣದ ವಿಶೇಷ ಅಡುಗೆಗಳನ್ನು ಸಿದ್ಧಪಡಿಸಿಕೊಂಡು ಸಂಕ್ರಾಂತಿ ಹಾಡುಗಳನ್ನು ಹಾಡುತ್ತಾ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದರು.
ಹಬ್ಬದ ಊಟದ ಪಟ್ಟಿ ದೊಡ್ಡದಾಗಿತ್ತು. ಎಳ್ಳು -ಬೆಲ್ಲ ಸೇರಿದಂತೆ ಸಜ್ಜೆ, ಜೋಳದ ರೊಟ್ಟಿ, ಬದನೆಕಾಯಿ ಬರ್ತಾ, ಹೆಸರುಕಾಳು, ಪುಂಡಿಪಲ್ಲೆ, ಅವರೆಕಾಳು, ಬದನೆಕಾಯಿ ಎಣ್ಣಿಗಾಯಿ, ಕರಿಹಿಂಡಿ, ಶೇಂಗಾ ಚೆಟ್ನಿ, ಗುರೆಳ್ಳ ಚೆಟ್ನಿ, ಹಿಟ್ಟಿನ ಪಲ್ಲೆ, ಮಾದಲಿ, ಶೇಂಗಾ ಹೋಳಿಗೆ, ಚಿತ್ರನ್ನ, ಮೊಸರನ್ನ, ತರಕಾರಿ ಅಂತಹ ತರಹೇವಾರಿ ಅಡುಗೆ ಹಬ್ಬಕ್ಕೆ ಮತ್ತಷ್ಟು ಕಳೆ ತಂತು.ಕಳೆದ ಹತ್ತು ವರ್ಷಗಳಿಂದ ಜಾನಪದ ಸಂಶೋಧನಾ ಸಂಸ್ಥೆಯು ಹಬ್ಬಗಳ ಮಹತ್ವ ತಿಳಿಸುವ ಕಾರ್ಯಕ್ರಮ ಮಾಡುತ್ತಿದೆ. ಸಂಕ್ರಮಣದಲ್ಲಿ ಗಂಗೆ ಪೂಜೆ ಮಾಡಿ ಹಬ್ಬದ ನಿಮಿತ್ತ ಸುಗ್ಗಿ ಹಾಡು, ಮಾದಲಿ ಹಬ್ಬ ಬಂದೈತಿ, ಸಂಕ್ರಾಂತಿ ತಂದೈತಿ ಅಂತಹ ಹಾಡುಗಳನ್ನು ಹಾಡಿ ಮಕ್ಕಳಿಗೆ ಕರೆ ಎರೆದು ಎಲ್ಲರೂ ಕೂಡಿ ಭೋಗಿ ನಿಮಿತ್ತ ಸಾರ್ವಜನಿಕರವಾಗಿ ಊಟ ಮಾಡಿದರು.
ಪ್ರಸ್ತುತ ಯುವ ಜನಾಂಗಕ್ಕೆ ಹಬ್ಬಗಳ ಮಹತ್ವ ಗೊತ್ತಿಲ್ಲ. ಕಾಟಾಚಾರಕ್ಕೆ ಹಬ್ಬದೂಟ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪಂಚಮಿ, ಹೋಳಿ ಹಬ್ಬ, ಸಂಕ್ರಮಣ ಅಂತಹ ಹಬ್ಬಗಳ ಮುನ್ನಾ ದಿನ ಹಬ್ಬಗಳ ಮಹತ್ವ, ಆಚರಣೆಯನ್ನು ಸಂಸ್ಥೆಯು ಹತ್ತು ವರ್ಷಗಳಿಂದ ಮಾಡುತ್ತಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಹಬ್ಬದ ಆಚರಣೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹಾಡು, ಹಬ್ಬದ ಊಟ ವಿಶೇಷವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ವಿಶ್ವೇಶ್ವರಿ ಹಿರೇಮಠ ಮಾಹಿತಿ ನೀಡಿದರು. ಈ ಸಮಯದಲ್ಲಿ ವಿಜಯಾ ದಢೂತಿ, ಖೈರುನ್ನಿಸಾ, ವಿದ್ಯಾ ದೇಸಾಯಿ, ರತ್ನಾ ದೇಸಾಯಿ, ಆಶಾ ಸೈಯದ, ಪ್ರಭಾವತಿ ನೀರಲಗಿ, ವಿಜಯಲಕ್ಷ್ಮೀ ಜಾತಿಕರ್ತ, ನಂದಾ ಗುಳೇದಗುಡ್ಡ ಸೇರಿದಂತೆ 20ಕ್ಕೂ ಹೆಚ್ಚು ಮಹಿಳೆಯರು ಇದ್ದರು.ಸಂಕ್ರಮಣದ ಹಿನ್ನೆಲೆಯಲ್ಲಿ ಕೆಲವರು ಪುಣ್ಯಕ್ಷೇತ್ರಗಳಿಗೆ ಹೋಗಿ ಹಬ್ಬದಾಚರಣೆ ನಡೆಸಿದರೆ, ಇನ್ನು ಕೆಲವರು ನದಿ, ಹಳ್ಳ-ಕೊಳ್ಳಗಳಿರುವ ಸ್ಥಳಗಳಿಗೆ ಹೋಗಿ ಸ್ನಾನ ಮಾಡಿ ಹಬ್ಬದೂಟ ಸವಿದರು. ಮತ್ತೆ ಕೆಲವರು ನಗರದ ಉದ್ಯಾನಗಳಲ್ಲಿ ಹಬ್ಬವನ್ನು ಆಚರಿಸಿದರು. ಗ್ರಾಮೀಣ ಜನರು ಹೊಲಗಳಿಗೆ ಹೋಗಿ ತಾವು ಬೆಳೆದ ಪೈರಿನೊಂದಿಗೆ ಹಬ್ಬದ ಸಂಭ್ರಮ ಅನುಭವಿಸಿದರು. ಹಬ್ಬದ ನಿಮಿತ್ತ ಇಲ್ಲಿಯ ಕೆ.ಸಿ. ಪಾರ್ಕ್, ಸಾಧನಕೇರಿ ಉದ್ಯಾನಗಳು ಜನರಿಂದ ತುಂಬಿದ್ದವು.