ಜಿಲ್ಲಾಧ್ಯಕ್ಷ ಸ್ಥಾನ: ಬಿಜೆಪಿ ಕಿಶೋರ್‌ ಬೊಟ್ಯಾಡಿ, ಕಾಂಗ್ರೆಸ್‌ ಮಮತಾ ಗಟ್ಟಿ?

| Published : Jan 15 2024, 01:48 AM IST

ಜಿಲ್ಲಾಧ್ಯಕ್ಷ ಸ್ಥಾನ: ಬಿಜೆಪಿ ಕಿಶೋರ್‌ ಬೊಟ್ಯಾಡಿ, ಕಾಂಗ್ರೆಸ್‌ ಮಮತಾ ಗಟ್ಟಿ?
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಗೆ ಸಂಬಂಧಿಸಿ ಎರಡೂ ಪಕ್ಷಗಳಲ್ಲಿ ಹೊಸಬರಿಗೆ ಅದರಲ್ಲೂ ಉತ್ಸಾಹಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷ ಸಂಘಟನೆಯಲ್ಲೂ ತುರುಸಿನ ಸ್ಪರ್ಧೆ ಎದುರಿಸಲು ಸಜ್ಜಾಗತೊಡಗಿವೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಬಿರುಸುಗೊಳ್ಳತೊಡಗಿದೆ. ಎರಡೂ ಪಕ್ಷಗಳಲ್ಲಿ ಯಾವುದೇ ಕ್ಷಣದಲ್ಲೂ ಹೊಸ ಅಧ್ಯಕ್ಷರ ಘೋಷಣೆ ಆಗಲಿದೆ.

ದ.ಕ. ಜಿಲ್ಲೆಗೆ ಸಂಬಂಧಿಸಿ ಎರಡೂ ಪಕ್ಷಗಳಲ್ಲಿ ಹೊಸಬರಿಗೆ ಅದರಲ್ಲೂ ಉತ್ಸಾಹಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷ ಸಂಘಟನೆಯಲ್ಲೂ ತುರುಸಿನ ಸ್ಪರ್ಧೆ ಎದುರಿಸಲು ಸಜ್ಜಾಗತೊಡಗಿವೆ.ಎರಡೂ ಪಕ್ಷದ ಮೂಲಗಳ ಪ್ರಕಾರ ಬಿಜೆಪಿಯಲ್ಲಿ ಯುವ ಮುಖಂಡರೊಬ್ಬರ ಹಾಗೂ ಕಾಂಗ್ರೆಸ್‌ನಲ್ಲಿ ಮಹಿಳೆಯೊಬ್ಬರ ಹೆಸರು ಮುಂಚೂಣಿಯಲ್ಲಿದೆ. ಬಿಜೆಪಿಯಲ್ಲಿ ಯುವ ಮುಖಂಡ?: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಘಟನಾತ್ಮಕವಾಗಿ ಪಕ್ಷವನ್ನು ಇನ್ನಷ್ಟು ಭದ್ರಗೊಳಿಸಲು ಯುವ ಮುಖಂಡರೊಬ್ಬರಿಗೆ ಮಣೆ ಹಾಕಲು ಬಿಜೆಪಿಯಲ್ಲಿ ಚಿಂತನೆ ನಡೆದಿದೆ. ಪ್ರಸಕ್ತ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ಕಿಶೋರ್ ಕುಮಾರ್‌ ಬೊಟ್ಯಾಡಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇವರನ್ನು ಹೊರತುಪಡಿಸಿದರೆ ಜಿಲ್ಲಾ ಕಾರ್ಯದರ್ಶಿ ಸತೀಶ್‌ ಕುಂಪಲ ಹೆಸರೂ ಪೈಪೋಟಿಯಲ್ಲಿದೆ. ಇದಲ್ಲದೆ ಜಿಲ್ಲಾ ಉಪಾಧ್ಯಕ್ಷರಾಗಿರುವ ಕಸ್ತೂರಿ ಪಂಜ ಹೆಸರೂ ಕೇಳಿಬರುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಾಸಕರ ನೇಮಕಗೊಳಿಸಿದರೆ ಸಂಘಟನಾತ್ಮಕವಾಗಿ ಉತ್ತಮ ಎಂಬ ಮಾತು ರಾಜ್ಯ ನಾಯಕರದ್ದು. ಹೀಗಾಗಿ ಆರಂಭದಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಹೆಸರು ಚಾಲ್ತಿಗೆ ಬಂದಿತ್ತು. ಆದರೆ ವಯೋಮಾನ ಕಾರಣಕ್ಕೆ ಅವರ ಹೆಸರು ರೇಸ್‌ನಿಂದ ಹಿಂದೆ ಸರಿದಿದೆ ಎನ್ನಲಾಗಿದೆ. ಕಿಶೋರ್ ಬೊಟ್ಯಾಡಿ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದರು. ಎರಡು ಬಾರಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷ ಸಂಘಟನೆಗೊಳಿಸುವಲ್ಲಿ ತಳಮಟ್ಟದ ಓಡಾಟಕ್ಕೆ ಸುಲಭವಾಗಬಹುದು ಎಂಬ ನೆಲೆಯಲ್ಲಿ ಕಿಶೋರ್‌ ಬೊಟ್ಯಾಡಿ ಹೆಸರು ಪರಿಗಣನೆಯಲ್ಲಿದೆ ಎಂದು ಪಕ್ಷ ಮೂಲಗಳು ಹೇಳುತ್ತಿವೆ. ಸತೀಶ್ ಕುಂಪಲ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾಗಿ ಆಡಳಿತ ಅನುಭವಿ. ಮೂರು ಬಾರಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಆಗಿದ್ದರು. ಎರಡು ಬಾರಿ ಗ್ರಾಮ ಪಂಚಾಯ್ತಿ ಸದಸ್ಯರಾಗಿ, ಉಳ್ಳಾಲ ಮಂಡಲದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಅಸೆಂಬ್ಲಿ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯು.ಟಿ.ಖಾದರ್‌ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಹಾಲಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಬಿಲ್ಲವ ಸಮುದಾಯಕ್ಕೆ ಸೇರಿದವರು. ಅದೇ ಸಮುದಾಯಕ್ಕೆ ಮಣೆಹಾಕಲು ಮುಂದಾದರೆ ಸತೀಶ್ ಕುಂಪಲ ಅಧ್ಯಕ್ಷರಾಗಿ ನೇಮಕಗೊಳ್ಳಬಹುದು. ಜಿ.ಪಂ. ಮಾಜಿ ಸದಸ್ಯೆ ಕಸ್ತೂರಿ ಪಂಜ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್‌ ಕೆಂಜಿಪಿಲಿ ಹೆಸರೂ ಅಪೇಕ್ಷಿತರ ಸಾಲಿನಲ್ಲಿ ಇದೆ. ಕಾಂಗ್ರೆಸ್‌ನಿಂದ ಮಹಿಳೆಗೆ ಆದ್ಯತೆ?: ಬಿಜೆಪಿಯ ಭದ್ರಕೋಟೆ ಎನಿಸಿದ ದ.ಕ.ದಲ್ಲಿ ಮರಳಿ ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದು ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಗೆಲ್ಲಿಸುವ ದೊಡ್ಡ ಸವಾಲು ಇದೆ. ಅದಕ್ಕಾಗಿ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡುವ ಚಿಂತನೆ ಪಕ್ಷ ನಾಯಕರಲ್ಲಿ ಬಂದಿದೆ. ಹೀಗಾಗಿ ಇದೇ ಮೊದಲ ಬಾರಿಗೆ ದ.ಕ.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯೊಬ್ಬರ ಹೆಸರು ಬಲವಾಗಿ ಕೇಳಿಬರುತ್ತಿದೆ. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಹೆಸರಿಗೆ ನಾಯಕರೂ ಅನುಮೋದನೆಯ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಮಮತಾ ಗಟ್ಟಿ ಸರಳ ಹಾಗೂ ಸಂಘಟನಾತ್ಮಕವಾಗಿ ಚತುರತೆ ಹೊಂದಿದ್ದಾರೆ. ಪಕ್ಷದ ಗೆರೆ ದಾಟುವವರಲ್ಲ, ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿ ನಾಲ್ಕು ಬಾರಿ ಆಯ್ಕೆಯಾದವರು. ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ, ರಾಜ್ಯ ಮಹಿಳಾ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಅನುಭವಿ.ಮಮತಾ ಗಟ್ಟಿ ಅವರನ್ನು ನೇಮಕ ಮಾಡಿದರೆ ಕಾಂಗ್ರೆಸ್‌ನಲ್ಲಿ ಪೈಪೋಟಿ, ಭಿನ್ನಮತಕ್ಕೂ ಅವಕಾಶ ಇರುವುದಿಲ್ಲ. ಯಾಕೆಂದರೆ, ಮಾಜಿ ಸಚಿವ ರಮಾನಾಥ ರೈ ಸುಮಾರು ಒಂಭತ್ತು ವರ್ಷಕಾಲ ಸುದೀರ್ಘ ಅವಧಿಗೆ ಜಿಲ್ಲಾಧ್ಯಕ್ಷರಾಗಿದ್ದರು. ಬಳಿಕ ಆರೂವರೆ ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರೂ ಆಗಿರುವ ಹರೀಶ್‌ ಕುಮಾರ್‌ ಅಧ್ಯಕ್ಷರಾಗಿದ್ದಾರೆ. ಮಮತಾ ಗಟ್ಟಿ ಬಗ್ಗೆ ಇವರಿಬ್ಬರಿಗೆ ಭಿನ್ನ ಅಭಿಪ್ರಾಯ ಇಲ್ಲ. ಅಲ್ಲದೆ ಮಂಗಳೂರು ಶಾಸಕ ಯು.ಟಿ.ಖಾದರ್‌ ಅವರು ಸ್ಪೀಕರ್ ಆಗಿರುವುದರಿಂದ ಅವರ ವಿರೋಧದ ಪ್ರಶ್ನೆ ಬಾರದು. ಎಲ್ಲದಕ್ಕಿಂತ ಮಿಗಿಲಾಗಿ ರಾಜ್ಯದಲ್ಲಿ ಯಾವುದಾದರೂ ಒಂದು ಕಡೆ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಪಕ್ಷ ನಾಯಕರು ಇಂಗಿತ ಹೊಂದಿದ್ದು, ಅದನ್ನು ದ.ಕ.ದಲ್ಲೇ ನೀಡುವ ಬಗ್ಗೆ ಉತ್ಸುಕತೆ ಹೊಂದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಕಾಂಗ್ರೆಸ್‌ನಲ್ಲಿ ಹಿರಿಯರಾದ ಮಾಜಿ ಸಚಿವ ಅಭಯಚಂದ್ರ ಜೈನ್‌ ಹೆಸರು ಮೊದಲು ಮುಂಚೂಣಿಯಲ್ಲಿತ್ತು. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನಪರಿಷತ್‌ ಸದಸ್ಯರಾಗಿ, ಸಚಿವರಾಗಿ ಬಲಿಷ್ಠ ರಾಜಕಾರಣಿ ಎನಿಸಿದವರು. ಆದರೆ ಹೊಸ ಮುಖಕ್ಕೆ ಆದ್ಯತೆ ನೀಡುವ ಸಲುವಾಗಿ ಅದರಲ್ಲೂ ಮಹಿಳಾ ಪ್ರಾತಿನಿಧ್ಯ ಕಾರಣಕ್ಕೆ ಮಮತಾ ಗಟ್ಟಿ ಹೆಸರು ಮುನ್ನಲೆಗೆ ಬಂದಿದೆ ಎನ್ನಲಾಗಿದೆ. ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಮಿಥುನ್‌ ರೈ, ಭರತ್‌ ಮುಂಡೋಡಿ ಹೆಸರು ಕೂಡ ರೇಸ್‌ನಲ್ಲಿದೆ.