ಪ್ರತಿಯೊಂದು ಹಿಂಧೂ ಧಾರ್ಮಿಕ ಹಬ್ಬಗಳು ವಿವಿಧ ಸಂದೇಶಗಳನ್ನು ಸಾರುತ್ತಿದ್ದು, ಹಬ್ಬಗಳ ಆಚರಣೆಯಿಂದ ನಮ್ಮೊಳಗಿನ ಒಗ್ಗಟ್ಟಿಗೆ ಪ್ರೇರಣೆಯಾಗಲಿದೆ. ಕಲೆ ಮತ್ತು ಭಕ್ತಿಯ ಸಂಗಮವಾಗಿ ಹುಲಿವೇಷ ಆರಾಧನೆ ಪಡೆಯುತ್ತಿದೆ. ಹುಲಿವೇಷದಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಅರಿವು ಸಿಗುವುದರ ಜೊತೆಗೆ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗಿದೆ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಕನ್ನಡಪ್ರಭವಾರ್ತೆ ಪುತ್ತೂರು
ಪ್ರತಿಯೊಂದು ಹಿಂಧೂ ಧಾರ್ಮಿಕ ಹಬ್ಬಗಳು ವಿವಿಧ ಸಂದೇಶಗಳನ್ನು ಸಾರುತ್ತಿದ್ದು, ಹಬ್ಬಗಳ ಆಚರಣೆಯಿಂದ ನಮ್ಮೊಳಗಿನ ಒಗ್ಗಟ್ಟಿಗೆ ಪ್ರೇರಣೆಯಾಗಲಿದೆ. ಕಲೆ ಮತ್ತು ಭಕ್ತಿಯ ಸಂಗಮವಾಗಿ ಹುಲಿವೇಷ ಆರಾಧನೆ ಪಡೆಯುತ್ತಿದೆ. ಹುಲಿವೇಷದಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಅರಿವು ಸಿಗುವುದರ ಜೊತೆಗೆ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗಿದೆ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಅವರು ಶನಿವಾರ ಪುತ್ತೂರು ವಿಜಯ ಸಾಮ್ರಾಟ್ ಸಂಘಟನೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪುತ್ತೂರುದ ಪಿಲಿಗೊಬ್ಬು-೨೦೨೬ ಸೀಸನ್-೪ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಬಳಿಕ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಅಶೀರ್ವಚನ ನೀಡಿದರು. ಸನಾತನ ಹಿಂದೂ ಧರ್ಮವು ಪಶು, ಪಕ್ಷಿ, ವೃಕ್ಷ, ಪರಿಸರದಲ್ಲಿ ದೇವರನ್ನು ಕಾಣುತ್ತಾರೆ. ಯಕ್ಷಗಾನ, ಕಂಬಳ, ಹುಲಿವೇಷ ಮೊದಲಾದ ಆಚರಣೆಗಳು ಒಂದೊಂದು ಸಂದೇಶವನ್ನು ಸಾರುತ್ತಿವೆ. ಇಂತಹ ಧಾರ್ಮಿಕ ಸಂದೇಶಗಳು ಯುವ ಜನತೆಯನ್ನು ತಲುಪಬೇಕಾಗಿದೆ. ಪಿಲಿಗೊಬ್ಬು ನಿರ್ವಿಘ್ನವಾಗಿ, ನಿರಾತಂಕವಾಗಿ ನಡೆಯಲಿ ಎಂದು ಹಾರೈಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಪ್ರಾಣಿಗಳಲ್ಲಿಯೂ ದೇವರನ್ನು ಕಂಡ ಏಕೈಕ ಧರ್ಮ ಹಿಂದೂ ಧರ್ಮವಾಗಿದೆ. ತುಳುನಾಡಿನ ಕ್ರೀಡೆಗಳಿಗೆ ಹಿರಿಯರು ಆಶ್ರಯ ನೀಡಿದ್ದಾರೆ. ಕಂಬಳ, ಯಕ್ಷಗಾನ, ಪಿಲಿಗೊಬ್ಬುಗಳು ದೇವರ ನಂಬಿಕೆಯೊಂದಿಗೆ ನಡೆಯುವ ಆಚರಣೆಯಾಗಿದೆ. ಪಿಲಿಗೊಬ್ಬುಗಳಿಗೆ ಸ್ಪರ್ಧಾತ್ಮಕ ರೂಪ ಕೊಟ್ಟಿರುವ ಸಹಜ್ ರೈ ನೇತೃತ್ವದ ವಿಜಯ ಸಾಮ್ರಾಟ್ ತಂಡ ಅಭಿನಂದನೀಯ ಕಾರ್ಯ ಮಾಡುತ್ತಿದೆ ಎಂದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಹಿಂದೂ ಧರ್ಮದ ದೊಡ್ಡ ಹಬ್ಬವಾಗಿರುವ ನವರಾತ್ರಿಯಲ್ಲಿ ದೇವಿಯ ೯ ಸ್ವರೂಪಗಳನ್ನು ಪೂಜಿಸುವ ಈ ಎಲ್ಲಾ ದಿನಗಳು ವಿಶಿಷ್ಟವಾಗಿದೆ. ಶುಭದಿನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳದ ಸನ್ನಿಧಿಯಲ್ಲಿ ದೇವರ ಪ್ರಾರ್ಥನೆಯೊಂದಿಗೆ ಪಿಲಿಗೊಬ್ಬು ನಡೆಯುತ್ತಿದೆ. ಹುಲಿಕುಣಿತದಲ್ಲಿ ದುರ್ಗೆಯ ವಾಹನವಾದ ಹುಲಿಯ ಆರಾಧನೆಯನ್ನು ಮಾಡುತ್ತೇವೆ. ಆ ಕಾರ್ಯವನ್ನು ಸಹಜ್ ರೈ ಮತ್ತು ಅವರ ತಂಡ ಮಾಡುತ್ತಿರುವುದು ಪುಣ್ಯದ ಕೆಲಸ ಎಂದರು.
ಬಡಕುಟುಂಬಗಳಿಗೆ ಮನೆ ನಿರ್ಮಾಣ: ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ವಿಜಯ ಸಾಮ್ರಾಟ್ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಮಾತನಾಡಿ ಕೆಲ ವರ್ಷಗಳ ಹಿಂದೆ ಸಾಮಾಜಿಕ ಸೇವೆಯ ಉದ್ದೇಶದಿಂದ ಆರಂಭಗೊಂಡ ನಮ್ಮ ಸಂಘಟನೆ ಬಡಕುಟುಂಬಗಳಿಗೆ ವರ್ಷಕ್ಕೆ ಒಂದರಂತೆ ಈಗಾಗಲೇ ೪ ಮನೆ ನಿರ್ಮಿಸಿ ಕೊಡುವ ಕಾರ್ಯ ಮಾಡಲಾಗಿದೆ. ಪ್ರಸ್ತುತ ಕರಾವಳಿಯ ಹುಲಿವೇಷದ ಕಲೆಯನ್ನು ಉಳಿಸುವ ಉದ್ದೇಶದಿಂದ ಹುಲಿವೇಷದ ಸ್ಪರ್ಧೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪುತ್ತೂರು ಪ್ರಜ್ಞಾ ಆಶ್ರಮದ ಅಣ್ಣಪ್ಪ-ಜ್ಯೋತಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್, ಆರ್ಎಸ್ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಪುತ್ತೂರಿನ ಹಿರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಭಂಡಾರಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಸುಭಾಷ್ ರೈ ಬೆಳ್ಳಿಪಾಡಿ, ವಿನಯ ಸುವರ್ಣ, ಪುಣಚ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ, ಪುತ್ತೂರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ವಿಜಯ ಸಾಮ್ರಾಟ್ ಸಂಘಟನೆಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸುದೇಶ್ ಚಿಕ್ಕಪುತ್ತೂರು, ಮಹೇಶ್ ವಳಕುಂಜ, ರತನ್ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ, ನಾಗರಾಜ್ ಭಟ್ ನಡುವಡ್ಕ. ಶರತ್ ಆಳ್ವ ಕೂರೇಲು ಮತ್ತಿತರರು ಉಪಸ್ಥಿತರಿದ್ದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.