ಕನಕಗಿರಿ ತಾಲೂಕಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ

| Published : Jun 01 2024, 12:46 AM IST

ಸಾರಾಂಶ

ಕನಕಗಿರಿ ತಾಲೂಕಿನಾದ್ಯಂತ ಶಾಲಾ ಪ್ರಾರಂಭೋತ್ಸವ ಸಡಗರದಿಂದ ನಡೆಯಿತು. ಮಕ್ಕಳಿಗೆ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ವಿತರಿಸಲಾಯಿತು.

ಕನಕಗಿರಿ: ತಾಲೂಕಿನಾದ್ಯಂತ ವಿವಿಧ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ನೋಟ್ ಬುಕ್, ಪೆನ್ ಹಾಗೂ ಆರತಿ ಬೆಳಗುವ ಮೂಲಕ ಸ್ವಾಗತಿಸಿಕೊಳ್ಳಲಾಯಿತು.

ಶಾಲಾ ಶಿಕ್ಷಣ ಇಲಾಖೆ ಆದೇಶದನ್ವಯ ತಾಲೂಕಿನ ನಾನಾ ಗ್ರಾಮಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರುವ ಉದ್ದೇಶದಿಂದ ಜಾಗೃತಿ ಜಾಥಾ, ಶಾಲೆಗೆ ಬಂದ ಮಕ್ಕಳಿಗೆ ಹೂಗುಚ್ಛ, ಚಾಕಲೆಟ್, ಸಿಹಿ ವಿತರಿಸಲಾಯಿತು. ಅಲ್ಲದೇ ಶಾಲಾ ಆವರಣದಲ್ಲಿ ಶಿಕ್ಷಕರು ಬಿಡಿಸಿದ ರಂಗೋಲಿಗಳು ಮಕ್ಕಳನ್ನು ಆಕರ್ಷಿಸಿದವು.

ಶಾಲಾ ದಾಖಲಾತಿ ಜಾಗೃತಿ: ವಿಭಿನ್ನ ಆಯಾಮಗಳ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡಿರುವ ಮುಖ್ಯೋಪಾಧ್ಯಾಯರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಐದೂವರೆ ವರ್ಷದ ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲು ಮಾಡಿಸಬೇಕು. ಯಾವ ಮಕ್ಕಳೂ ದಾಖಲಾತಿಯಿಂದ ಹೊರ ಉಳಿಯಬಾರದೆಂಬ ಕಾರಣಕ್ಕೆ ಕರಪತ್ರ ಹಾಗೂ ಬ್ಯಾನರ್ ಅಳವಡಿಸಿ ವಿಭಿನ್ನ ಪ್ರಚಾರ ಕೈಗೊಂಡರು.ಮಕ್ಕಳಿಗೆ ಆರತಿ ಮಾಡಿ ಸ್ವಾಗತ: ತಾಲೂಕಿನ ಸಿರಿವಾರ ಗ್ರಾಮದ ಶಾಲೆಗೆ ಬಂದಿದ್ದ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿ ಆರತಿ ಮಾಡಿ ಸ್ವಾಗತಿಸಿಕೊಂಡಿದೆ. ಈ ವಿಭಿನ್ನ ಕಾರ್ಯಕ್ಕೆ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ. ಶಾಲೆಗೆ ಬರುವ ಮಕ್ಕಳಿಗೆ ಆರತಿ ಮಾಡಿ ಬರಮಾಡಿಕೊಳ್ಳುವುದು ಕಾರ್ಯ ತಾಲೂಕಿನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವ ಘೋಷಣೆಗಳನ್ನು ಕೂಗಿ ಅರಿವು ಮೂಡಿಸಲಾಯಿತು. ಮಕ್ಕಳಿಗಾಗಿ ಸಿಹಿ ಊಟದ ಅವ್ಯವಸ್ಥೆ ಮಾಡಲಾಗಿತ್ತು. ಮುಖ್ಯಶಿಕ್ಷಕ ಶೇಖರಯ್ಯ ಕಲ್ಮಠ, ಎಸ್‌ಡಿಎಂಸಿ ಅಧ್ಯಕ್ಷ ಮೌಲಾಸಾಬ ಬಳಿಗಾರ, ಶಿಕ್ಷಕಿ ಪ್ರಮೀಳಾಬಾಯಿ, ಪ್ರಮುಖರಾದ ಕನಕಪ್ಪ ಗರಿಕಾರ, ಸತ್ಯಪ್ಪ, ಅಡುಗೆ ಸಿಬ್ಬಂದಿಯವರು ಇದ್ದರು.