ಸಡಗರದ ಗೂಡಾದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ

| Published : Jan 20 2025, 01:30 AM IST

ಸಾರಾಂಶ

ಮೇಳದಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳ 25ಕ್ಕೂ ಅಧಿಕ ಸ್ಟಾಲ್‌ಗಳಿದ್ದು, ಬೇಕಾದಷ್ಟು ಸಂಪೂರ್ಣ ಉಚಿತವಾಗಿ ಮಕ್ಕಳಿಗೆ ನೀಡಲಾಯಿತು. ಬೆಳಗ್ಗಿನಿಂದ ಸಂಜೆವರೆಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಇಡೀ ದಿನವನ್ನು ಸ್ಮರಣೀಯವನ್ನಾಗಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸೇವಾ ಭಾರತಿ ಮಂಗಳೂರು ಅಂಗಸಂಸ್ಥೆ ‘ಆಶಾಜ್ಯೋತಿ’ ನೇತೃತ್ವದಲ್ಲಿ ‘ವಿಶಿಷ್ಟರಿಗಾಗಿ ವಿಶಿಷ್ಟಮೇಳ’ ನಗರದ ಕೆನರಾ ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ ನಡೆಯಿತು. ವಿಕಲ ಚೇತನ ಮಕ್ಕಳು ತಮ್ಮ ಸಹಪಾಠಿಗಳ ಒಡಗೂಡಿ ವಿವಿಧ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಇಡೀ ಮೈದಾನ ಜಾತ್ರೆಯಂತಾಗಿತ್ತು.

ದಕ್ಷಿಣ ಕನ್ನಡ ಮತ್ತು ಆಸುಪಾಸಿನ ಜಿಲ್ಲೆಗಳ 1500ಕ್ಕೂ ಅಧಿಕ ಮಕ್ಕಳು, 2000ಕ್ಕೂ ಅಧಿಕ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳು ತಮ್ಮದೇ ರೀತಿಯಲ್ಲಿ ಸಂಭ್ರಮಿಸುತ್ತಿದ್ದರೆ ಪೋಷಕರು ಕಣ್ತುಂಬಿಕೊಂಡು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು.

ವೈವಿಧ್ಯಮಯ ಚಟುವಟಿಕೆ: ಚರುಮುರಿ, ನೆಲಕಡಲೆ, ಪಾನಿಪುರಿ, ಬೇಲ್‌ಪುರಿ, ಸ್ಯಾಂಡ್‌ವಿಚ್‌, ಕಲ್ಲಂಗಡಿ, ಚಾಕ್ಲೆಟ್‌ಗಳು, ಐಸ್‌ಕ್ಯಾಂಡಿ, ಗೋಳಿಸೋಡ, ಜ್ಯೂಸ್‌, ಬಾಳೆಹಣ್ಣು, ಪೋಡಿ, ಚಕ್ಕುಲಿ, ಉಂಡೆ ಹೀಗೆ ತರಹೇವಾರಿ ತಿಂಡಿಗಳನ್ನು ತಿನ್ನುತ್ತಾ ಜಾತ್ರೆಯ ಸಂತಸದಿಂದ ಮಕ್ಕಳು ನಲಿದಾಡಿದರು. ಜತೆಗೆ ಕುದುರೆ ಮೇಲೇರಿ ಮೋಜಿನ ಸವಾರಿಯ ಖುಷಿ, ತಿರುಗುವ ತೊಟ್ಟಿಲಿನಲ್ಲಿ ತಿರುಗುತ್ತ ಸಂಭ್ರಮಿಸಿದರು. ಮೆಹಂದಿ ಹಾಕುವುದು, ಕುದುರೆಗೆ ಬಾಲ ಬಿಡಿಸುವುದು, ತಿಲಕ, ಗೋಪುರ ನಿರ್ಮಾಣ, ರಿಂಗ್‌ ಎಸೆತದ ಆಟಗಳಲ್ಲಂತೂ ಸಂಪೂರ್ಣವಾಗಿ ತೊಡಗಿಸಿಕೊಂಡರು.

25ಕ್ಕೂ ಅಧಿಕ ಸ್ಟಾಲ್‌, ಉಚಿತ ತಿಂಡಿ: ಮೇಳದಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳ 25ಕ್ಕೂ ಅಧಿಕ ಸ್ಟಾಲ್‌ಗಳಿದ್ದು, ಬೇಕಾದಷ್ಟು ಸಂಪೂರ್ಣ ಉಚಿತವಾಗಿ ಮಕ್ಕಳಿಗೆ ನೀಡಲಾಯಿತು. ಬೆಳಗ್ಗಿನಿಂದ ಸಂಜೆವರೆಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಇಡೀ ದಿನವನ್ನು ಸ್ಮರಣೀಯವನ್ನಾಗಿಸಿದರು.

ಆಳ್ವಾಸ್‌ ಮೂಡುಬಿದಿರೆ, ಸಹ್ಯಾದ್ರಿ ಕಾಲೇಜು, ಕಾವೂರು ಸರ್ಕಾರಿ ಕಾಲೇಜು, ಮಂಗಳೂರು ರಥಬೀದಿ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಸಿಸಿ, ಸ್ಕೌಟ್ಸ್‌ ಗೈಡ್ಸ್‌ ಕೆಡೆಟ್‌ಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

ಬೆಳಗ್ಗೆ ಮೇಳವನ್ನು ಮೇಯರ್‌ ಮನೋಜ್‌ ಕುಮಾರ್‌ ಉದ್ಘಾಟಿಸಿದರು. ಉದ್ಯಮಿಗಳಾದ ರಾಮ ಕುಮಾರ್‌ ಬೇಕಲ್‌, ಲಂಚೂಲಾಲ್‌ ಕೆ.ಎಸ್‌. ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್‌, ಆಶಾಜ್ಯೋತಿ ಗೌರವಾಧ್ಯಕ್ಷ ಡಾ.ವಿ. ಮುರಳೀಧರ ನಾಯಕ್‌ ಮತ್ತಿತರರಿದ್ದರು.ಸೇವಾ ಭಾರತಿ ಸಂಸ್ಥೆಯು 1998ರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ಪೈಕಿ ವಿಶಿಷ್ಟರಿಗಾಗಿ ವಿಶೇಷ ಮೇಳ ಕೂಡ ಒಂದು. ವಿಶೇಷ ಚೇತನರನ್ನು ಒಟ್ಟು ಸೇರಿಸಿ ಅವರಿಗೆ ಮನರಂಜನೆ ಜತೆಗೆ ಅವರಲ್ಲಿ ಚೈತನ್ಯ, ಆತ್ಮವಿಶ್ವಾಸ ತುಂಬುವುದು ಈ ಮೇಳದ ಉದ್ದೇಶ ಎನ್ನುತ್ತಾರೆ ಆಶಾಜ್ಯೋತಿ ಸಂಸ್ಥೆ ಅಧ್ಯಕ್ಷೆ ಗೀತಾ ಲಕ್ಷ್ಮೀಶ್‌.