ಜೋಯಿಡಾ ತಾಲೂಕಿನಲ್ಲಿ ಸುಗ್ಗಿ ಹಬ್ಬದ ಸಂಭ್ರಮ

| Published : Mar 24 2024, 01:43 AM IST

ಸಾರಾಂಶ

ಕುಣಬಿ ಸಮಾಜದವರಲ್ಲದೇ, ಇನ್ನಿತರ ಸಮಾಜದವರು ಸಹ ತಮ್ಮ- ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಸುಗ್ಗಿ ಕುಣಿತ ಆಡಲು ಬೇರೆ ಬೇರೆ ಊರುಗಳಿಗೆ ಹೋಗುತ್ತಾರೆ.

ಜೋಯಿಡಾ: ಗುಂದ ಸೇರಿದಂತೆ ತಾಲೂಕಿನದ್ಯಾಂತ ಹೋಳಿ ಸುಗ್ಗಿ(ಸಿಗಮೋ) ಸಂಭ್ರಮ. ಜೋಯಿಡಾ, ಗುಂದ ಸೇರಿದಂತೆ ತಾಲೂಕಿನದ್ಯಾಂತ ಬುಡಕಟ್ಟು ಜನಾಂಗದ ಕುಣಬಿ ಸಮಾಜದ ಸಂಸ್ಕೃತಿಯ ಸುಗ್ಗಿ(ಸಿಗಮೋ) ಹೋಳಿ ಕೋಲಾಟ ಆರಂಭವಾಗಿದ್ದು, ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ತಾಲೂಕಿನ ಗುಂದ, ಕಾಟೇಲ್, ತೆರಾಳಿ, ಭಾರಾಡಿ, ಮಾತಕರ್ಣಿ, ಮೈನೊಳ, ಪಾಟ್ನೆ, ಕಾಳಸಾಯಿ, ಅಣಶಿ, ಕುಮಗಾಳ, ಕೆಲೋಲಿ, ಕುಂಡಲ, ಕುಸಾವಳಿ, ಕಡ ಗರ್ಣಿ ಪಾತಾಗುಡಿ, ಶಿವಪುರ ಸೇರಿದಂತೆ ರಾಮನಗರ ಭಾಗದ ಹಲವು ಕಡೆ ಸುಗ್ಗಿ ಕುಣಿತ ತಮ್ಮ- ತಮ್ಮ ಸಿಗಮೋ ಪ್ರಾರಂಭದ ಸ್ಥಳ(ಮಾಂಡ)ದಲ್ಲಿ ದೇವರಿಗೆ ತೆಂಗಿನ ಕಾಯಿ ಇಟ್ಟು ಆರಂಭಿಸಿ ಗ್ರಾಮಗಳಲ್ಲಿ ಆಡಿ, ತಮ್ಮ ಸೀಮೆಯನ್ನು ದಾಟಿ ಬೇರೆ- ಬೇರೆ ಗ್ರಾಮಗಳಿಗೆ ಸುಗ್ಗಿ ಆಡಲು ಹೋಗುತ್ತಾರೆ.

ಕೊನೆಯ ದಿನ ಸುಗ್ಗಿ ಆರಂಭಿಸಿದ ಸ್ಥಳ(ಮಾಂಡ)ದಲ್ಲಿ ಸುಗ್ಗಿ ಕುಣಿತ ಆಡಿ, ಸ್ನಾನ ಮಾಡಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಾರನೆಯ ದಿನ ಎಲ್ಲರ ಮನೆಗಳಲ್ಲಿ ಹಬ್ಬದ ನಿಮಿತ್ತ ಸಿಹಿಯಾದ ಭೋಜನವನ್ನು ಮಾಡುತ್ತಾರೆ.

ಸುಗ್ಗಿ ಕುಣಿತದ ಕೋಲಾಟ ಆಡುವಾಗ ಬಣ್ಣ- ಬಣ್ಣದ ವಿವಿಧ ಬಗೆಯ ಹೂವು, ಬಟ್ಟೆಗಳ ಅಲಂಕಾರ ಮಾಡಿ ಪರಿಸರ, ಕಾಡಿಗೆ, ದೇವರು, ದೇವತೆಗಳ ಸಂಬಂಧಿಸಿದ ಹಾಡುಗಳನ್ನು ಹಾಡಿ ಆಯಾ ಗ್ರಾಮದ ಮನೆಯವರು ಭಕ್ತಿಯಿಂದ ವಸ್ತು ರೂಪದಲ್ಲಾಗಲಿ, ಇನ್ನಾವುದೇ ರೂಪದಲ್ಲಿ ನೀಡಿದ ದೇವರ ಕಾಣಿಕೆಗಳನ್ನು ಸ್ವೀಕರಿಸಿ ದೇವರಿಗೆ ಅರ್ಪಿ ಸಲಾಗುತ್ತದೆ.

ತಾಲೂಕಿನಲ್ಲಿ ಕುಣಬಿ ಸಮಾಜದವರಲ್ಲದೇ, ಇನ್ನಿತರ ಸಮಾಜದವರು ಸಹ ತಮ್ಮ- ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಸುಗ್ಗಿ ಕುಣಿತ ಆಡಲು ಬೇರೆ ಬೇರೆ ಊರುಗಳಿಗೆ ಹೋಗುತ್ತಾರೆ. ಹಳ್ಳಿಗಳಲ್ಲಿ ಬಂದ ಸುಗ್ಗಿ ಕುಣಿತದ ತಂಡಗಳನ್ನು ವಿಶೇಷ ರೀತಿಯಲ್ಲಿ ಸತ್ಕರಿಸಿ, ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಉಪಾಹಾರ, ಭೋಜನದ ವ್ಯವಸ್ಥೆಯನ್ನು ಸ್ವ ಖುಷಿಯಿಂದ ಮಾಡಲಾಗುತ್ತದೆ.

ಸುಗ್ಗಿ ಕುಣಿತದ ಕೋಲಾಟ ಆಡುವಾಗ ಕೊಂಕಣಿ, ಮರಾಠಿ ಭಾಷೆಯಲ್ಲಿ ತಮ್ಮ- ತಮ್ಮ ಕುಲದೇವರು, ಗಿಡ- ಮರಗಳು, ದೇವ- ದೇವತೆಗಳ ಹಾಡುಗಳು, ಈ ಬಾರಿ ವಿಶೇಷ ಅಯೋಧ್ಯಾ ಶ್ರೀರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜೈ ಶ್ರೀರಾಮ, ಜೈ ಶ್ರೀರಾಮ ಹಾಡುಗಳು ವಿಶೇಷ ಮೆರುಗನ್ನು ನೀಡುತ್ತಿವೆ.