ಶ್ರೀರಾಘವೇಂದ್ರತೀರ್ಥ ಶ್ರೀಗುರುಸಾರ್ವಭೌಮರ 355ನೇ ಆರಾಧಾನಾ ಮಹೋತ್ಸವದ ಪೂರ್ವಾರಾಧನೆ ಪ್ರಯುಕ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಲವಾರು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸಂಭ್ರಮ, ಸಡಗರದಿಂದ ಜರುಗಿದವು.
ಕನ್ನಡಪ್ರಡ ವಾರ್ತೆ ರಾಯಚೂರು
ಶ್ರೀರಾಘವೇಂದ್ರತೀರ್ಥ ಶ್ರೀಗುರುಸಾರ್ವಭೌಮರ 355ನೇ ಆರಾಧಾನಾ ಮಹೋತ್ಸವದ ಪೂರ್ವಾರಾಧನೆ ಪ್ರಯುಕ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಲವಾರು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸಂಭ್ರಮ, ಸಡಗರದಿಂದ ಜರುಗಿದವು.ಪೀಠಾಧಿಪತಿ ಡಾ। ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಗುರುರಾಯರ ಆರಾಧಾನಾ ಮಹೋತ್ಸವ ನಿಮಿತ್ತವಾಗಿ ಶ್ರೀಮಠದಲ್ಲಿ ನಡೆಯುತ್ತಿರುವ ಸಪ್ತರಾತ್ರೋತ್ಸವದ 3ನೇ ದಿನದ ಪೂರ್ವಾರಾಧನೆಯಲ್ಲಿ ಪ್ರಾತಃಕಾಲದಲ್ಲಿ ನೈರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕವನ್ನು ನಡೆಸಲಾಯಿತು. ಬೆಳಗ್ಗೆ ವೇದ-ಮಂತ್ರಗಳ ಪಾರಾಯಣ ಹಾಗೂ ವಿದ್ವಾನ್ ಅನಂತಾಚಾರ್ಯ ಅವರಿಂದ ಜ್ಞಾನಯಜ್ಞ ಪ್ರವಚನ ಸೇರಿ ಮೊದಲಾದ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶ್ರೀರಂಗಂನಿಂದ ಬಂದ ಶೇಷವಸ್ತ್ರ: ಪ್ರತಿವರ್ಷದಂತೆ ಗುರುರಾಯರ ಪೂರ್ವಾರಾಧನೆ ಅಂಗವಾಗಿ ತಮಿಳುನಾಡು ರಾಜ್ಯದ ತಿರಚಿಯ ಶ್ರೀರಂಗಂನ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಿಂದ ವಸ್ತ್ರರೂಪದಲ್ಲಿ ತರಲಾಗಿದ್ದ ಶೇಷವಸ್ತ್ರ ಪ್ರಸಾದವನ್ನು ಶ್ರೀಗಳು ಸ್ವಾಗತಿಸಿದರು. ಮೆರವಣಿಗೆ ನಡೆಸಿ ಮೂಲ ಬೃಂದಾವನದ ಮುಂದಿರಿಸಿ ಮಂಗಳಾರತಿ ಮಾಡಿ ರಾಯರಿಗೆ ಸಮರ್ಪಿಸಿದರು.ನಂತರ ಪ್ರಾಕಾರದ ವೇದಿಕೆಯಲ್ಲಿ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಸ್ವಾಮಿಗಳು, ಭಾರತ ದೇಶದ ಎಂಟು ಸ್ವಯಂ ವ್ಯಕ್ತ ಕ್ಷೇತ್ರಗಳಲ್ಲಿ ಮೊದಲನೇ ಕ್ಷೇತ್ರವಾದ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನದಿಂದ ಆಗಮಿಸಿರುವ ಶೇಷವಸ್ತ್ರವನ್ನು ಸ್ವಾಗತಿಸಿಕೊಂಡು ಶ್ರೀರಾಘವೇಂದ್ರ ಸ್ವಾಮಿಗಳಿಗೆ ಸಮರ್ಪಿಸಲಾಗಿದೆ. ರಾಯರ ಪೂರ್ವಾರಾಧನೆ ಪ್ರಯುಕ್ತ ಶ್ರೀರಂಗನಾಥ ಸ್ವಾಮಿಗಳು ವಸ್ತ್ರರೂಪದ ಪ್ರಸಾದದಲ್ಲಿ ಸುಕ್ಷೇತ್ರ ಮಂತ್ರಾಲಯಕ್ಕೆ ಆಗಮಿಸಿ ಭಕ್ತರನ್ನು ಅನುಗ್ರಹಿಸಿದ್ದಾರೆ ಎಂದರು.
ಇದೇ ವೇಳೆ ಶ್ರೀರಂಗಂ ಕ್ಷೇತ್ರದಿಂದ ಆಗಮಿಸಿದ್ದ ಪ್ರಧಾನ ಅರ್ಚಕ ಸುಂದರ ಭಟ್ಟಾಚಾರ್ಯ, ಪಂಡಿತರು, ಅಧಿಕಾರಿ ವರ್ಗದವರನ್ನು ಶ್ರೀಮಠದಿಂದ ಸನ್ಮಾನಿ ಗೌರವಿಸಲಾಯಿತು.ಶ್ರೀಗಳಿಂದ ಸಂಸ್ಥಾನ ಪೂಜೆ:
ನಂತರ ಪೀಠಾಧಿಪತಿ ಡಾ। ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮೂಲ ರಘುಪತಿ ವೇದವ್ಯಾಸ ದೇವರಿಗೆ ಸಂಸ್ಥಾನ ಪೂಜೆ, ಅಲಂಕಾರ ಸಮರ್ಪಣ ಹಾಗೂ ಹಸ್ತೋದಕ, ಮಹಾಮಂಗಳಾರತಿ ನೆರವೇರಿಸಿದರು. ಪೂರ್ವಾರಾಧನೆ ನಿಮಿತ್ತ ವಿಶೇಷವಾಗಿ ಅಲಂಕಾರಗೊಂಡಿದ್ದ ರಾಯರ ಮೂಲ ಬೃಂದಾವನಕ್ಕೆ ಮಹಾಮಂಗಳಾರತಿ ಸೇವೆಗೈದರು. ಸಂಜೆ ಹಗಲು ದೀವಟಗೆ, ಮಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಚನ, ಪರಿಮಳ ತೀರ್ಥ ಪುಷ್ಕರಣಿಯಲ್ಲಿ ತೆಪ್ಪೋತ್ಸವ, ವೇದಿಕೆ ಕಾರ್ಯಕ್ರಮದಲ್ಲಿ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಾಕಾರದಲ್ಲಿ ರಜತಸಿಂಹ ವಾಹನೋತ್ಸವು ಅದ್ಧೂರಿಯಾಗಿ ನಡೆಯಿತು.ವಾರದ ರಜೆ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಿಂದ ಅಸಂಖ್ಯಾತ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿ ಪೂರ್ವಾರಾಧನೆ ಉತ್ಸವಗಳನ್ನು ಕಣ್ತುಂಬಿಕೊಂಡರು.