ಅಭೂತ ಪೂರ್ವ ಯಶಸ್ಸು ಕಂಡ ಶಕ್ತಿಯೋಜನೆ: ಸಂಭ್ರಮಾಚರಣೆ

| Published : Jul 15 2025, 01:05 AM IST

ಸಾರಾಂಶ

ಕಾಂಗ್ರೆಸ್ ಪಕ್ಷ ಅಧಿಕಾರವಿರುವಾಗ ಜನತೆಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ರಾಜ್ಯವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವುದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ರಾಜ್ಯ ದಿವಾಳಿ ಆಗಿದೆ ಎಂದು ರಾಜ್ಯದ ಜನತೆಗೆ ಸುಳ್ಳು ಹೇಳುತ್ತಾ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದರು,

ಕನ್ನಡಪ್ರಭ ವಾರ್ತೆ ಕನಕಪುರ

ರಾಜ್ಯ ಸರ್ಕಾರಕ್ಕೆ ಇದು ಅತ್ಯಂತ ಮಹತ್ವಪೂರ್ಣ ದಿನವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ತಿಳಿಸಿದರು.

ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆ ಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಉಚಿತ ಪ್ರಯಾಣದ ಬಸ್ ಗೆ ಪೂಜೆ ಸಲ್ಲಿಸಿದರು. ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ. ಶಿವಕುಮಾರ್ ನೇತೃತ್ವದಲ್ಲಿ ಎರಡು ವರ್ಷಗಳ ಹಿಂದೆ ನಮ್ಮ ಸರ್ಕಾರ ರಾಜ್ಯದ ಮಹಿಳೆಯರಿಗೆ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಅಭೂತಪೂರ್ವ ಬೆಂಬಲ ಹಾಗೂ ಯಶಸ್ಸು ಕಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ಯೋಜನೆಯ ಪ್ರಯೋಜನ ಪಡೆದುಕೊಂಡಿರುವ ಮಹಿಳೆಯರು, ಹೆಣ್ಣು ಮಕ್ಕಳು ಉದ್ಯೋಗ, ಶಿಕ್ಷಣ, ಆರೋಗ್ಯ ಮುಂತಾದ ಕಾರಣಗಳಿಗಾಗಿ ನಾಡಿನಾದ್ಯಂತ 500 ಕೋಟಿ ರು.ಮೌಲ್ಯದ ಉಚಿತ ಟಿಕೆಟ್ ಖರೀದಿಸಿ ಬಿಎಂಟಿಸಿ, ಕೆಎಸ್​​ಆರ್​ಟಿಸಿ ಮತ್ತು ಎನ್​ಡಬ್ಲ್ಯೂ ಕೆಆರ್​ಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡುವ ಮೂಲಕ ಹೊಸದಾದ ಇತಿಹಾಸ ನಿರ್ಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರವಿರುವಾಗ ಜನತೆಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ರಾಜ್ಯವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವುದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ರಾಜ್ಯ ದಿವಾಳಿ ಆಗಿದೆ ಎಂದು ರಾಜ್ಯದ ಜನತೆಗೆ ಸುಳ್ಳು ಹೇಳುತ್ತಾ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದರು, ಆದರೂ ರಾಜ್ಯದ ಜನತೆ ನಮ್ಮ ಸರ್ಕಾರದ ಯೋಜನೆ ಬೆಂಬಲಿಸಿ ಆತ್ಮಸ್ಥೈರ್ಯ ತುಂಬಿರುವುದಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಡಿ. ವಿಜಯ್ ದೇವ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಎನ್.ದಿಲೀಪ್, ನಗರಸಭೆ ಅಧ್ಯಕ್ಷೆ ಹೇಮಾ ರಾಜು, ಕನಕಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧು, ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷೆ, ಮಹಿಳಾ ಮುಖಂಡರಾದ ರೋಹಿಣಿ, ಪ್ರಿಯಾ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಕನ್ಯಾ ರಂಗಸ್ವಾಮಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮಹಿಳಾ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.