ರೈತಾಪಿ ಜನತೆ ತಮ್ಮ ರಾಸುಗಳನ್ನು ಶುಚಿಗೊಳಿಸಿ ಎಣ್ಣೆ ಸವರಿ, ಹುಚ್ಚೆಳ್ಳು ಹೂವು, ಸೇವಂತಿಗೆ ಹೂವಿನ ಹಾರ ಹಾಕಿ, ತಿಲಕವಿಟ್ಟು ಪೂಜಿಸಿದರು. ಮಹಿಳೆಯರು, ಯುವತಿಯರು, ಪುಟಾಣಿ ಮಕ್ಕಳು ಹೊಸ ಬಟ್ಟೆ ಧರಿಸಿ ಮನೆ ಮನೆಗೆ ತೆರಳಿ ಎಳ್ಳು, ಬೆಲ್ಲ ಬೀರಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಕಿಕ್ಕೇರಿ:

ಪುಣ್ಯಕಾಲವಾದ ಸಂಕ್ರಾಂತಿಯನ್ನು ಹೋಬಳಿಯಾದ್ಯಂತ ಸಂಭ್ರಮದಿಂದ ಆಚರಿಸಿದರು.ರೈತಾಪಿ ಜನತೆ ತಮ್ಮ ರಾಸುಗಳನ್ನು ಶುಚಿಗೊಳಿಸಿ ಎಣ್ಣೆ ಸವರಿ, ಹುಚ್ಚೆಳ್ಳು ಹೂವು, ಸೇವಂತಿಗೆ ಹೂವಿನ ಹಾರ ಹಾಕಿ, ತಿಲಕವಿಟ್ಟು ಪೂಜಿಸಿದರು. ಮಹಿಳೆಯರು, ಯುವತಿಯರು, ಪುಟಾಣಿ ಮಕ್ಕಳು ಹೊಸ ಬಟ್ಟೆ ಧರಿಸಿ ಮನೆ ಮನೆಗೆ ತೆರಳಿ ಎಳ್ಳು, ಬೆಲ್ಲ ಬೀರಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಹಲವರು ಮಂದಗೆರೆ ಗ್ರಾಮಕ್ಕೆ ಸಾಗಿ ಹೇಮಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಮತ್ತೆ ಕೆಲವರು ಸಾಸಲು ಗ್ರಾಮದ ಸೋಮೇಶ್ವರ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಸೋಮೇಶ್ವರ, ಶಂಭುಲಿಂಗೇಶ್ವರ ದೇವರದರ್ಶನ ಪಡೆದರು. ಬೆಳಗ್ಗಿನ ಚುಮು ಚುಮು ಚಳಿ ಲೆಕ್ಕಿಸದೆ ಭಕ್ತರು ಮುಂಜಾನೆಶಿವ ದೇಗುಲಕ್ಕೆ ತೆರಳಿ ಶಿವನ ಪೂಜಿಸಿದರು.

ಕಿಕ್ಕೇರಿಯ ಬ್ರಹ್ಮೇಶ್ವರ, ಗದ್ದೆಹೊಸೂರುವಿನ ಜೋಡಿ ಬಸವೇಶ್ವರ, ಚಿಕ್ಕಮಂದಗೆರೆಯ ಅಂಕನಾಥೇಶ್ವರ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ಅಂಕನಹಳ್ಳಿಯ ಮಲ್ಲೇಶ್ವರ, ಊಗಿನಹಳ್ಳಿಯ ಈಶ್ವರದೇಗುಲ, ಮಾದಾಪುರ ದತ್ರಯಂಭಕೇಶ್ವರ, ಹಳೆಮಾದಾಪುರದ ರಾಮೇಶ್ವರ ದೇಗುಲ ಸೇರಿ ಮತ್ತಿತರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.

ಗ್ರಾಮದ ಅರುಂಧತಿ ಸಮಾಜದ ಪೌರಕಾರ್ಮಿಕರು ವಿಶೇಷವಾಗಿ ಹೊಸ ಮಡಿಕೆಯಲ್ಲಿ ಪೊಂಗಲ್ ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಿ ಪಿರಿಯಪಟ್ಟಣದಮ್ಮ ದೇವಿಯನ್ನು ಪೂಜಿಸಿದರು.

ಎಚ್ಡಿಕೆ, ರವೀಂದ್ರ ಶ್ರೀಕಂಠಯ್ಯ ಭಾವಚಿತ್ರದೊಂದಿಗೆ ರಾಸುಗಳನ್ನು ಕಿಚ್ಚು ಹಾಯಿಸಿದ ರೈತ

ಶ್ರೀರಂಗಪಟ್ಟಣ:

ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರೈತ ತಮ್ಮ ರಾಸುಗಳ ಕೊಂಬಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಭಾವಚಿತ್ರ ಕಟ್ಟಿ ರಾಸುಗಳನ್ನು ಕಿಚ್ಚು ಹಾಯಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ‌. ತಾಲೂಕಿನಲ್ಲಿ ಕೆ.ಶೆಟ್ಟಹಳ್ಳಿ ಹೋಬಳಿಯ ರಾಂಪುರ ಗ್ರಾಮದ ರೈತ ತಮ್ಮ ರಾಸುಗಳನ್ನು ಸಿಂಗಾರ ಮಾಡಿ ನಂತರ ಎರಡು ಎತ್ತುಗಳ ಕೊಂಬಿಗೆ ಎಚ್.ಡಿ ಕುಮಾರಸ್ವಾಮಿ ಹಾಗೂ ರವೀಂದ್ರ ಶ್ರೀಕಂಠಯ್ಯ ಭಾವ ಚಿತ್ರ ಕಟ್ಟಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದಾರೆ. ನಂತರ ಕಿಚ್ಚು ಹಾಯಿಸಿದ್ದಾನೆ.

ಹಾಗೇ, ಕೆ.ಎಂ.ದೊಡ್ಡಿಯಲ್ಲಿ ಆಸರೆ ಸೇವಾ ಟ್ರಸ್ಟ್‌ ವತಿಯಿಂದ ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಕಿಚ್ಚು ಹಾಯಿಸಲು ಟಗರನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು. ಅಧ್ಯಕ್ಷ ರಘುವೆಂಕಟೇಗೌಡ,ವಿಕಾಸ್ ಬೋರೇಗೌಡ, ನವೀನ್, ವಿನಯ್, ಪ್ರಜ್ವಲ್ ಅಪ್ಪಾಜಿಗೌಡ ಸೇರಿದಂತೆ ಮತ್ತಿತರಿದ್ದರು.