ಕಾರಟಗಿ: ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಪಟ್ಟಣದ ಐತಿಹಾಸಿಕ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ 92ನೇ ವರ್ಷದ ರಥೋತ್ಸವ ಮಂಗಳವಾರ ಸಂಜೆ ಅಪಾರ ಭಕ್ತಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಅಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ರಥವನ್ನು ಬೆಳಗ್ಗೆಯೇ ಭಕ್ತರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ತಳಿರು ತೋರಣಗಳಿಂದ ಅಲಂಕರಿಸಿದ್ದರು. ನಿಗದಿತ ಮುಹೂರ್ತದಲ್ಲಿ ಅರ್ಚಕ ಭೋಗೇಶಾಚಾರ ಇನಾಮದಾರ ಅವರು ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಳಿಕ ದೇವಸ್ಥಾನದ ಸೇವಾಕರ್ತರು ರಥೋತ್ಸವಕ್ಕೆ ಚಾಲನೆ ನೀಡಿದರು.ವಾದ್ಯವೃಂದ, ಡೊಳ್ಳು ಹಾಗೂ ಭಜನಾ ತಂಡಗಳೊಂದಿಗೆ ಸಾಗಿದ ರಥೋತ್ಸವದಲ್ಲಿ ನೆರೆದಿದ್ದ ಭಕ್ತರು ''ಗೋವಿಂದಾ, ಗೋವಿಂದಾ'' ಎಂದು ಜಯಘೋಷ ಮೊಳಗಿಸುತ್ತ ರಥವನ್ನು ಎಳೆದರು. ಪಟ್ಟಣದ ಹಳೆ ಬಜಾರ್ ಮೂಲಕ ಸಾಗಿದ ರಥವು ಹಳೆ ನಾಡಕಚೇರಿ ಬಳಿಯ ಪಾದಗಟ್ಟೆ ತಲುಪಿ, ಬಳಿಕ ಮರಳಿ ದೇವಸ್ಥಾನಕ್ಕೆ ಆಗಮಿಸಿತು. ರಥ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಭಕ್ತರು ಹಣ್ಣು-ಕಾಯಿ ಅರ್ಪಿಸಿ ದೇವರ ದರ್ಶನ ಪಡೆದು ಭಕ್ತಿಭಾವ ಮೆರೆದರು.
11 ದಿನಗಳ ಧಾರ್ಮಿಕ ಕಾರ್ಯಕ್ರಮ: ಶರನ್ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿದಿನ ಸಂಜೆ ಶ್ರೀ ವೆಂಕಟೇಶ್ವರ ಮಹಾತ್ಮೆ ಕುರಿತು ಪುರಾಣ ಪ್ರವಚನ ನಡೆಯಿತು. ಮಂಗಳವಾರ ನವಮಿ ನಿಮಿತ್ತ ಬೆಳಗ್ಗೆ ದೇವರಿಗೆ ವಿಶೇಷ ಅಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ವಾದ್ಯವೃಂದದೊಂದಿಗೆ ಮೆರವಣಿಗೆ ನಡೆಸಿ ರಥಕ್ಕೆ ಕಳಸಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.ಸಂಜೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವದೊಂದಿಗೆ ಪುರಾಣ ಪ್ರವಚನ ಸಂಪನ್ನಗೊಂಡಿತು. ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ ಅವರ ನೇತೃತ್ವದಲ್ಲಿ ಸರ್ಕಾರದ ಮಾರ್ಗದರ್ಶನದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸೇವಾಕರ್ತರು, ವರ್ತಕರು ಭಾಗಿ: ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಸೇವಾಕರ್ತರಾದ ನಾರಾಯಣಪ್ಪ ಈಡಿಗೇರ, ಶಿವಕುಮಾರ ಸುಂಕದ, ಸಂಜೀವಪ್ಪ ಸಾಲೋಣಿ, ರಾಘವೇಂದ್ರ ರೇವಣಕರ್, ಸತ್ಯನಾರಾಯಣ ಶ್ರೇಷ್ಠಿ, ಪ್ರಹ್ಲಾದ ಜೋಷಿ, ವಿಠ್ಠಲರಾವ್ ಕೊಳ್ಳಿ, ಚೆನ್ನಪ್ಪ ಕಂಚಿ, ಕಾಶೀನಾಥ ಕಂಪ್ಲಿ, ಅಯ್ಯಪ್ಪ ಬಂಡಿ, ಮರಿಯಪ್ಪ ಸಾಲೋಣಿ, ರಾಘವೇಂದ್ರ ಗುಂಡೂರ, ಬಸವರಾಜ ಅರಳಿ, ಭೀಮೇಶ ದರೋಜಿ, ಚನ್ನಪ್ಪ ಅಂಗಡಿ, ರಾಜಗೋಪಾಲ್ ನಾಡಂಗ್, ಸೋಮನಾಥ ಉಡಮಕಲ್, ನಾಗರಾಜ ಶ್ರೇಷ್ಠಿ ಪಾಲ್ಗೊಂಡಿದ್ದರು.