ಸಿದ್ಧಾರೂಢ ಮಠದಲ್ಲಿ ಸಂಭ್ರಮದ ಲಕ್ಷ ದೀಪೋತ್ಸವ

| Published : Dec 02 2024, 01:15 AM IST

ಸಾರಾಂಶ

ಉತ್ತರ ಕರ್ನಾಟಕ ಭಕ್ತರ ಆರಾಧ್ಯದೈವ ಇಲ್ಲಿನ ಸಿದ್ಧಾರೂಢಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಭಾನುವಾರ ಲಕ್ಷ ದೀಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಕ್ತರ ಆರಾಧ್ಯದೈವ ಇಲ್ಲಿನ ಸಿದ್ಧಾರೂಢಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಭಾನುವಾರ ಲಕ್ಷ ದೀಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ಶ್ರೀಮಠದ ಪ್ರಾಂಗಣದಲ್ಲಿ ಹಚ್ಚಲಾಗಿದ್ದ ದೀಪಗಳ ಬೆಳಕಿನಿಂದ ಆವರಣವೆಲ್ಲ ಜಗಮಗಿಸುತ್ತಿತ್ತು. ಭಕ್ತರಿಂದ ಶ್ರೀ ಸಿದ್ಧಾರೂಢ ಮಹಾರಾಜ ಕೀ ಜೈ ಎಂಬ ಘೋಷವಾಕ್ಯಗಳು ಮುಗಿಲು ಮುಟ್ಟಿದ್ದವು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶ್ರೀಮಠದ ಪ್ರಾಂಗಣದಲ್ಲಿ ದೀಪ ಹಚ್ಚುವ ಮೂಲಕ ಮೆರುಗು ತಂದರು.

ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದ ಆವರಣದಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಲಾಗಿತ್ತು. ಈ ರಂಗೋಲಿಯ ಮೇಲೆ ಭಕ್ತರು ಪಣತೆಯನ್ನಿಟ್ಟು ದೀಪ ಬೆಳಗಿಸಿದರು.

ಅನ್ಯರಾಜ್ಯದ ಭಕ್ತರು

ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ನಮ್ಮ ರಾಜ್ಯದ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಸಾಲು ಸಾಲು ದೀಪಗಳ ಬೆಳಕಿನಲ್ಲಿ ಸಿದ್ಧಾರೂಢರ ಮಠದ ಆವರಣ ಕಂಗೊಳಿಸಿತು. ಅದರಲ್ಲೂ ಶ್ರೀ ಸಿದ್ಧಾರೂಢರ, ಶ್ರೀ ಗುರುನಾಥರೂಢ ಗದ್ದುಗೆಯಿಂದ ಹಿಡಿದು ಇಡೀ ಮಠವನ್ನು ಹೂವು, ತಳಿರು ತೋರಣ ಹಾಗೂ ವಿದ್ಯುತ ದೀಪಾಲಂಕರದಿಂದ ಸಿಂಗರಿಸಿದ್ದು ವಿಶೇಷವಾಗಿತ್ತು.

ದೀಪೋತ್ಸವ ಹಿನ್ನೆಲೆಯಲ್ಲಿ ಮಠದ ಆವರಣದ ತುಂಬ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರಗಳ ಮೇಲೆ ಲಕ್ಷಾಂತರ ದೀಪಗಳನ್ನು ಜೋಡಿಸಿ ಇಡಲಾಗಿತ್ತು. ಕುಟುಂಬ ಸಮೇತ ತಂಡೋಪತಂಡವಾಗಿ ಆಗಮಿಸಿದ ಸದ್ಭಕ್ತರು, ಮಠದ ಆವರಣದಲ್ಲಿ ಹಣತೆಗಳನ್ನು ಹೊತ್ತಿಸಿ ಪೂಜೆ ಸಲ್ಲಿಸಿದರು. ಹೀಗಾಗಿ ಮಠದ ಆವರಣದಲ್ಲಿ ಎಲ್ಲಿ ನೋಡಿದರೂ ದೀಪಗಳ ಬೆಳಗು ಕಾಣಿಸಿತು.

ಶ್ರೀ ಸಿದ್ಧಾರೂಢರಿಗೆ ದೀಪ ಬೆಳಗಿ ಭಕ್ತಿಯಿಂದ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು. ವಿಶೇಷವಾಗಿ ಸಂಪ್ರದಾಯಿಕ ಉಡುಗೆ ತೊಡಗೆಯಲ್ಲಿ ಆಗಮಿಸಿದ ಮಹಿಳೆಯರು, ಮಕ್ಕಳು ಉತ್ಸಾಹದಿಂದ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡರು. ನಂತರ ಸಾಲು ಸಾಲು ದೀಪಗಳನ್ನು ಬೆಳಗಿಸಿದರು.

ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಸಿದ್ಧಾರೂಢರ ಸ್ವಾಮೀಜಿಗೆ ವಿಶೇಷ ಪೂಜೆ-ಪುನಸ್ಕಾರ ನಡೆದವು. ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ತಂಡೋಪ ತಂಡವಾಗಿ ಬಂದು ದೀಪ ಬೆಳಗಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಿದ್ಧಾರೂಢ ಸ್ವಾಮಿ ಮಠದ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿಗಳು, ಜೈಂಟ್ಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ, ಸಿದ್ಧಾರೂಢ ಪ್ರೌಢ ಶಾಲೆ ವಿದ್ಯಾರ್ಥಿಗಳು ವಿವಿಧ ಸೇವೆ ಸಲ್ಲಿಸಿದರು.

ಸಂಜೆ ನಡೆದ ಲಕ್ಷ ದೀಪೋತ್ಸವಕ್ಕೆ ಕಾಡನಕೊಪ್ಪದ ಪೂರ್ಣಾನಂದ ನ್ಯಾಯವೇದಾಂತಾಚಾರ್ಯ ದಯಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ತುಳಸಿಗೇರಿ ರಾಮಾನಂದ ಸ್ವಾಮೀಜಿ, ಬೆನಕನಕೊಪ್ಪದ ಶಿವಾನಂದ ಸ್ವಾಮೀಜಿ, ಬೆನಕೊಪ್ಪ, ಶ್ರೀಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿ ಚಂದ್ರವೀರ ಮುಂಗವಾಡಿ, ಶ್ಯಾಮನಂದ ಪೂಜೇರಿ, ಗೀತಾ ಕಲಬುರ್ಗಿ, ಬಾಳು ಮಗಜಿಕೊಂಡಿ, ಸಿದ್ಧನಗೌಡ ಪಾಟೀಲ, ಉದಯಕುಮಾರ ನಾಯ್ಕ, ವಿನಾಯಕ ಘೋಡಕೆ, ರಮೇಶ ಬೆಳಗಾವಿ, ಗೋವಿಂದ ಮಣ್ಣೂರು ಸೇರಿದಂತೆ ಇತರರು ಇದ್ದರು.