ಸಾರಾಂಶ
ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಹಬ್ಬವೆಂದೇ ಕರೆಯುವ ಸೀಗೆ ಹುಣ್ಣಿಮೆಯನ್ನು ತಾಲೂಕಿನಾದ್ಯಂತ ರೈತರು ಆಚರಿಸುವ ಮೂಲಕ ಸಂಭ್ರಮಿಸಿದರು.
ಹುಬ್ಬಳ್ಳಿ:
ಅನ್ನ ನೀಡುವ ಭೂ ತಾಯಿಗೆ ಅನ್ನದಾತನು ಚರಗ ಚೆಲ್ಲುವ ಮೂಲಕ ಧನ್ಯತಾಭಾವ ಅರ್ಪಿಸುವ ಹಬ್ಬವೇ ಸೀಗೆ ಹುಣ್ಣಿಮೆ.ಮಂಗಳವಾರ ತಾಲೂಕಿನ ರೈತರು ಬಗೆಬಗೆಯ ಖಾದ್ಯ ತಯಾರಿಸಿಕೊಂಡು ಕುಟುಂಬ ಸಮೇತರಾಗಿ ಹೊಲಗಳಿಗೆ ತೆರಳಿ ಭೂ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ ಸಹಪಂಕ್ತಿ ಭೋಜನ ಸವಿದರು.
ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಹಬ್ಬವೆಂದೇ ಕರೆಯುವ ಸೀಗೆ ಹುಣ್ಣಿಮೆಯನ್ನು ತಾಲೂಕಿನಾದ್ಯಂತ ರೈತರು ಆಚರಿಸುವ ಮೂಲಕ ಸಂಭ್ರಮಿಸಿದರು. ಉಣಕಲ್ಲ, ಸುಳ್ಳ, ಹೆಬ್ಬಳ್ಳಿ, ಗೋಪನಕೊಪ್ಪ, ರಾಮಾಪುರ, ಅಂಚಟಗೇರಿ, ಶಿವಳ್ಳಿ, ಬೆಂಗೇರಿ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳ ರೈತರು ಹೊಲಗಳಿಗೆ ಕುಟುಂಬ ಸಮೇತರಾಗಿ ತೆರಳಿ ಹೊಲದಲ್ಲೇ ಪಾಂಡವರನ್ನು ಸ್ಥಾಪಿಸಿ, ಪೂಜೆ ಮಾಡಿ, ಬಗೆಬಗೆಯ ಖಾದ್ಯ ಮಾಡಿಕೊಂಡು ನೈವೇದ್ಯ ಮಾಡಿ ಹೊಲದ ತುಂಬೆಲ್ಲ ಚರಗ ಚೆಲ್ಲುತ್ತಾರೆ. ಬಳಿಕ ಕುಟುಂಬದ ಬಂಧು-ಬಳಗ, ಸ್ನೇಹಿತರು ಸೇರಿ ಎಲ್ಲರೂ ಒಟ್ಟಾಗಿ ಕುಳಿತು ಸಹಪಂಕ್ತಿ ಭೋಜನ ಮಾಡುವ ಮೂಲಕ ಸೀಗೆಹುಣ್ಣಿಮೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.ತರಹೇವಾರಿ ಖಾದ್ಯ:
ಸೀಗೆ ಹುಣ್ಣಿಮೆಯ ನಾಲ್ಕೈದು ದಿನ ಮೊದಲೇ ಮಹಿಳೆಯರು ಚಕ್ಕುಲಿ, ಕೋಡುಬಳೆ, ಹೋಳಿಗೆ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಕಡಬು, ಶೇಂಗಾ ಹೋಳಿಗೆ, ಹುರಕ್ಕಿ ಹೋಳಿಗೆ, ಎಳ್ಳು ಹೋಳಿಗೆ, ಕರ್ಚಿಕಾಯಿ, ಕಡಬು, ಮೊಸರನ್ನ, ಚಿತ್ರಾನ್ನ, ಸಜ್ಜಿ, ರಾಗಿ, ಬಿಳಿಜೋಳ ಸೇರಿದಂತೆ ಬಗೆಬಗೆಯ ರೊಟ್ಟಿ, ಪುರಿ, ಹಪ್ಪಳ, ಸಂಡಿಗೆ, ತೊಗರಿ, ಕಡಲೆಕಾಳು, ಅಲಸಂದಿ, ಹೆಸರುಕಾಳಿನ ಪಲ್ಲೆ, ಬದನೆಕಾಯಿ, ಆಲುಗಡ್ಡೆ ಪಲ್ಲೆ ಹೀಗೆ ತರಹೇವಾರಿ ಖಾದ್ಯ ತಯಾರಿಸಿ ಹೊಲಗಳಿಗೆ ಕುಟುಂಬ ಸಮೇತರಾಗಿ ಹೋಗಿ ಭೂತಾಯಿಗೆ ಪೂಜೆ ಸಲ್ಲಿಸಿದ ಬಳಿಕ ಹೊಲದಲ್ಲಿಯೇ ಊಟ ಮಾಡಿ ಮರಳಿ ತಮ್ಮ ಮನೆಗಳಿಗೆ ತೆರಳಿದರು.ಪಾಂಡವರಿಗೆ ವಿಶೇಷ ಪೂಜೆ:
ಪಾಂಡವರಿಗೂ ಸಹ ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷ. ಕೆಲವೆಡೆ ಹಸುವಿನ ಸಗಣಿಯಿಂದ ಪಾಂಡವರನ್ನು ತಯಾರಿಸಿದರೆ ಕೆಲವು ಭಾಗಗಗಳಲ್ಲಿ ತಮ್ಮ ಹೊಲದಲ್ಲೇ ಇರುವ ಚಿಕ್ಕ ಕಲ್ಲು ತೆಗೆದುಕೊಂಡು ಅದಕ್ಕೆ ಸುಣ್ಣ ಮತ್ತು ಕೆಂಪು ಮಣ್ಣಿನಿಂದ ಸಿಂಗರಿಸಿ ಪಾಂಡವರನ್ನಾಗಿಸಿ ಪೂಜೆ ಸಲ್ಲಿಸುತ್ತಾರೆ.ಚಿಣ್ಣರ ಕಲರವ:
ಹೊಲದಲ್ಲಿ ಸಹಪಂಕ್ತಿ ಭೋಜನ ಸವಿದ ಬಳಿಕ ಹಿರಿಯರು ಗಿಡಗಳ ಕೆಳಗಿನ ನೆರಳಿನಲ್ಲಿ ನಿದ್ರೆಗೆ ಜಾರಿದರೆ, ಚಿಣ್ಣರು ಹೊಲಗಳಲ್ಲಿಯೇ ಬಣ್ಣ ಬಣ್ಣದ ಗಾಳಿಪಟ ಹಾರಿಸಿದರು. ಇನ್ನು ಕೆಲ ಮಕ್ಕಳು ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು.