ಸಾರಾಂಶ
ಆನವಟ್ಟಿ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳಗೊಂಡ ಆಯೋಗವು ಸೋಮವಾರದಿಂದ ಮೇ 25 ರವರೆಗೆ ನಡೆಸುವ ಜನಗಣತಿ ಹಾಗೂ ಒಳಮೀಸಲಾತಿ ಜಾತಿ ಗಣತಿಯಲ್ಲಿ ಭೋವಿ ಜಾತಿಗೆ ಸೇರಿರುವ ಎಲ್ಲಾ ಪಂಗಡದವರು “ಜಾತಿ ಭೋವಿ, ಉಪಜಾತಿ ವಡ್ಡರʼ ಎಂದು ಬರೆಯಿಸುವಂತೆ ಸೊರಬ ತಾಲೂಕು ಭೋವಿ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಜಯಪ್ಪ ಕರೆ ನೀಡಿದರು.
ಭಾನುವಾರ ಪಟ್ಟಣದಲ್ಲಿ ತಾಲೂಕು ಭೋವಿ ಜನಾಂಗದ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ ಜಯಂತಿ ಹಾಗೂ ಪ್ರತಿಭಾಪುರಸ್ಕಾರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಾತಿ ಗಣತಿಯಿಂದ ಒಳ ಮೀಸಲಾತಿ ಪ್ರಮಾಣ ನಿರ್ಧಾರವಾಗುವುದರಿಂದ, ಊರ ವಡ್ಡರು, ಮಣ್ಣೂಡ್ಡರು, ಬಂಡಿ ವಡ್ಡರು, ಕಲ್ಲು ವಡ್ಡರು, ಸುಡಗಾಡು ವಡ್ಡರು ಎಂದು ಪ್ರಾದೇಶಿಕ ಭಾಷೆಯಲ್ಲಿ ವಿವಿಧ ರೀತಿಯ ಹೆಸರಿನಿಂದ ಕರೆಸಿಕೊಳ್ಳುವ ಭೋವಿ ಸಮುದಾಯಕ್ಕೆ ಸೇರಿರುವ ಎಲ್ಲಾ ಪಂಗಡದವರು ಒಂದೇ ರೀತಿಯಲ್ಲಿ ಜಾತಿ ಭೋವಿ, ಉಪ ಜಾತಿ ವಡ್ಡರ ಎಂದು ಬರೆಯಿಸಿ ಎಂದರು.
ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಒಳ ಮೀಸಲು ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ತಿಳಿಸಿದೆ. ಅದರಂತೆ ಆಯೋಗ ಸಮೀಕ್ಷೆ ನಡೆಸಿ ಮಧ್ಯಂತರ ವರದಿ ಸಲ್ಲಿಸಲಿದ್ದಾರೆ. ಹಾಗಾಗಿ ಸಮೀಕ್ಷೆಗೆ ಬರುವ ಅಧಿಕಾರಿಗಳಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಸರಿಯಾಗಿ ನೀಡಿ, ಗಣತಿಯಿಂದ ಯಾರು ತಪ್ಪಿಸಿಕೊಳ್ಳಬಾರದು. ಸ್ವ-ಇಚ್ಛೆಯಿಂದ ಸರ್ಕಾರ ನಡೆಸುವ ಜನಗಣತಿಯಲ್ಲಿ ಭಾಗವಹಿಸಿ ಎಂದು ಕೋರಿದರು.ಸ್ಥಳೀಯ ಜನಪ್ರತಿನಿಧಿಗಳು, ಸಂಘದ ಸದಸ್ಯರು ಹಾಗೂ ಮುಖಂಡರು ಸಮಾಜದಲ್ಲಿರುವ ಅನಕ್ಷರಸ್ಥರಿಗೆ, ಗಣತಿ ಬಗ್ಗೆ ತಿಳುವಳಿಕೆ ನೀಡಿ ಎಲ್ಲರೂ ಒಂದೇ ರೀತಿಯಲ್ಲಿ ಜಾತಿ, ಉಪಜಾತಿ ನಮೂದಿಸುವಂತೆ ಮಾಹಿತಿ ನೀಡಿ ಎಂದು ಭೋವಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್ ಬಸವರಾಜಪ್ಪ, ತಾಲೂಕು ಸಂಘದ ಕಾರ್ಯಾಧ್ಯಕ್ಷ ಸುರೇಶ್ ಹಾವಣ್ಣನವರ್ ಸಲಹೆ ನೀಡಿದರು.
ಸಿದ್ದರಾಮೇಶ್ವರ ಜಯಂತಿ:ಮೇ 8ರ ಗುರುವಾರ ಮಧ್ಯಾಹ್ನ ಹಿರೇಮಾಗಡಿ ಮಣ್ಣೂಡ್ಡಿಗೆರಿಯಲ್ಲಿ (ಗಂಗೊಳ್ಳಿ) ಸಿದ್ದರಾಮೇಶ್ವರ ಜಯಂತಿ ಹಾಗೂ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.85 ಫಲಿತಾಂಶ ಪಡೆದಿರುವ ಮತ್ತು ಪದವಿ, ಸ್ನಾತಕೋತ್ತರ ಪದವಿಯಲ್ಲಿ ಶೇ.75 ಫಲಿತಾಂಶ ಪಡೆದಿರುವ ತಾಲೂಕು ಭೋವಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮೊ. 9731863272, ಖಜಾಂಚಿ ಮೊ. 7022558191 ಗೆ ಸಂಪರ್ಕಿಸಬಹುದಾಗಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕೆಂದು ತಾಲೂಕು ಭೋವಿ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಜಯಪ್ಪ ಕೋರಿದರು.