ಸಾರಾಂಶ
ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಪಟೇಲ್ ಲಿಂಗಪ್ಪ ನಿಧನ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಅತ್ಯಂತ ಹಿರಿಯರು, ಶತಾಯುಷಿಗಳು ಆಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಜನಾರ್ದನಪುರದ ಪಟೇಲ್ ಲಿಂಗಪ್ಪನವರು (104) ಬುಧವಾರ ಅವರ ಸ್ವಗೃಹದಲ್ಲಿ ನಿಧನರಾದರು. ಇವರು 1947ರ ಮೈಸೂರು ಚಲೋ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಇವರು ತಾಲೂಕಿನಲ್ಲಿದ್ದ ಕೊನೆಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರ ನಿಧನದಿಂದಾಗಿ ತಾಲೂಕಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕೊಂಡಿ ಕಳಚಿಕೊಂಡಂತಾಗಿದೆ. 104 ವರ್ಷಗಳ ಸುದೀರ್ಘ ಜೀವನ ಸಾಗಿಸಿರುವ ಪಟೇಲ್ ಲಿಂಗಪ್ಪನವರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಅಂತ್ಯಕ್ರಿಯೆ ಜನಾರ್ಧನಪುರದಲ್ಲಿ ಸರ್ಕಾರಿ ಗೌರವಗಳೊಂದಿಗೆ ಗುರುವಾರ ಬೆಳಗ್ಗೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಮಾಯಸಂದ್ರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪಿ.ಹನುಮಂತಯ್ಯ, ಕಾರ್ಯದರ್ಶಿ ಮುನಿರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚೌದ್ರಿ ಟಿ ರಂಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜವರೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಉತ್ತರಾಧಿಕಾರಿಗಳ ಸಂಘದ ಉಪಾಧ್ಯಕ್ಷ ಪ್ರೊ.ಪುಟ್ಟರಂಗಪ್ಪ ಸೇರಿದಂತೆ ಹಲವಾರು ಮಂದಿ ಮೃತರಾದ ಪಟೇಲ್ ಲಿಂಗಪ್ಪನವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.