ಸಾರಾಂಶ
ಮುಂಡರಗಿ: 1924 ರಲ್ಲಿ ಪ್ರಾರಂಭವಾದ ಮುಂಡರಗಿ ಶ್ರೀ ಜ.ಅ. ವಿದ್ಯಾ ಸಮಿತಿಗೆ 2024 ಕ್ಕೆ100 ವರ್ಷ ತುಂಬಿದ್ದು, ಅದರ ಶತಮಾನೋತ್ಸವವನ್ನು ಪ್ರಸ್ತುತ ವರ್ಷ ಜೂನ್ ನಲ್ಲಿ ಅದ್ಧೂರಿ ಆಚರಣೆ ಮಾಡಲಾಗುವುದು ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ 155ನೇ ಯಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಜರುಗಿದ ಭಕ್ತ ಹಿತ ಚಿಂತನ ಗೋಷ್ಠಿ ಹಾಗೂ ಶಿವಾಜಿ ಬೀಸೆ ಅವರ ಮಾತೃ ಹೃದಯಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸುಮಾರು 100 ವರ್ಷಗಳ ಹಿಂದೆ ಈ ಸಂಸ್ಥೆ ಪ್ರಾರಂಭವಾಗಿದ್ದು, ತಾವು 1962ರಲ್ಲಿ ಮುಂಡರಗಿ ಮಠಕ್ಕೆ ಬಂದಿದ್ದು, ಕಳೆದ 63 ವರ್ಷದಿಂದ ಶ್ರೀಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಾರಂಭದಲ್ಲಿ ಕೆಲವೇ ಇದ್ದ ಶಾಲಾ-ಕಾಲೇಜುಗಳು ಇಂದು 33ಕ್ಕೂ ಹೆಚ್ಚು ಅಂಗ ಸಂಸ್ಥೆಗಳಾಗಿ ಬೆಳೆದು ನಿಂತಿವೆ. ಇದುವರೆಗೂ ಇಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ಹೋಗಿದ್ದು, ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಹೀಗಾಗಿ ಎಲ್ಲರೂ ಸೇರಿ ಸಂಸ್ಥೆಯ ಶತಮಾನೋತ್ಸವ ಅದ್ಧೂರಿಯಾಗಿ ಆಚರಿಸೋಣ ಎಂದರು.
ಯಾತ್ರಾ ಮಹೋತ್ಸವದ ಅಂಗವಾಗಿ ಜಂಗಮೋತ್ಸವ ಮಾಡುತ್ತಿದ್ದು, ಇದನ್ನು ಕೆಲವು ಮಠದ ಸ್ವಾಮೀಜಿ ವಿರೋಧಿಸುತ್ತಿದ್ದು, ಜಂಗಮೋತ್ಸವ ಎಂದರೆ ಜಂಗಮರನ್ನು ಮೆರೆಸುವುದು ಎಂದರ್ಥ. ಇದು ಹಿಂದಿನ ಕಾಲದಿಂದ ನಡೆದುಕೊಂಡು ಬಂದಿದ್ದು, ನಮ್ಮ ಮಠದಲ್ಲಿ ಈಗಲೂ ಮುಂದುವರೆದಿದೆ. ಹೀಗಾಗಿ ಇಂದು ನರಗುಂದದ ಶಿವಕುಮಾರ ಸ್ವಾಮೀಜಿಯವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರೆಸಲಾಯಿತು ಎಂದ ಪೂಜ್ಯರು ಶಿವಾಜಿ ಬೀಸೆಯವರು ವಿವಿಧ ಪತ್ರಿಕೆಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಅವರು ತಮ್ಮ ತಾಯಿ ನೆನಪಿಗೋಸ್ಕರ ಮಾತೃ ಹೃದಯಿ ಕೃತಿಯನ್ನು ಅತ್ಯಂತ ಅರ್ಥಗರ್ಭಿತವಾಗಿ ರಚಿಸಿದ್ದಾರೆ ಎಂದರು.ಉತ್ತಂಗಿಯ ಸೋಮೇಶ್ವರ ಸ್ವಾಮೀಜಿ ಮಾತನಾಡಿ,ಎಲ್ಲರನ್ನೂ ಒಗ್ಗೂಡಿಸುವುದು ಗುರುವಿನ ಕಾರ್ಯವಾಗಿದ್ದು, ಯಾತ್ರಾ ಮಹೋತ್ಸವದ ನೆಪದಲ್ಲಿ ನಮ್ಮಂತಹ ಎಲ್ಲ ಸ್ವಾಮೀಜಿಯವರನ್ನು ಮುಂಡರಗಿ ಶ್ರೀಗಳು ಕರೆದು ಆನಂದಿಸುತ್ತಿದ್ದಾರೆ. ಮುಂಡರಗಿ ಶ್ರೀಗಳು ಈ ನಾಡಿನ ಹಿರಿಯ ತ್ರಿಕಾಲ ಲಿಂಗಪೂಜಾ ನಿಷ್ಠ ಪೂಜ್ಯರಲ್ಲಿ ಒಬ್ಬರಾಗಿದ್ದು, ಅವರು 160ಕ್ಕೂ ಹೆಚ್ಚು ಕೃತಿ ರಚಿಸಿ ಸಾಹಿತ್ಯದ ಮೇರು ಪರ್ವತ ಏರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಿವಾಜಿ ಬೀಸೆಯವರ ಮಾತೃ ಹೃದಯಿ ಕೃತಿಯನ್ನು ಅನ್ನದಾನೀಶ್ವರ ಮಹಾಸ್ವಾಮಿಜಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ವಾದಿರಾಜ ವ್ಯಾಸಮುದ್ರ, ವಿಜಯವಾಣಿ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್, ವಿಜಯ ಕರ್ನಾಟಕ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಡಾ.ಬಂಡೂ ಕುಲಕರ್ಣಿ, ಶಿವಾಜಿ ಬೀಸೆ ಕುರಿತು ಮಾತನಾಡಿ, ಶಿವಾಜಿ ಬೀಸೆ ಓರ್ವ ಶ್ರಮಜೀವಿಯಾಗಿದ್ದು, ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವರು ಎಷ್ಟೇ ಉನ್ನತ ಹುದ್ದೆಗೆ ಏರಿದರೂ ತಮ್ಮ ತಾಯಿಯನ್ನು ಎಂದಿಗೂ ಮರೆಯಲಿಲ್ಲ. ಹೀಗಾಗಿ ತಾಯಿಯ ಸವಿನೆನಪಿಗಾಗಿ ಈ ಮಾತೃ ಹೃದಯಿ ಎನ್ನುವ ವಿಶೇಷ ಕೃತಿ ರಚಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶ್ರೀಮಠದ ಉತ್ತರಾಧಿಕಾರಿ ಜ.ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ನರಗುಂದ ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ನಟ ಯಶವಂತ್ ಸರದೇಶಪಾಂಡೆ, ಯಾತ್ರಾ ಮಹೋತ್ಸವದ ಅಧ್ಯಕ್ಷ ವಿ.ಜೆ. ಹಿರೇಮಠ, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ಡಾ.ಬಿ.ಜಿ.ಜವಳಿ, ಡಾ.ಡಿ.ಸಿ. ಮಠ, ಎಸ್.ಎಂ. ಹೊಸಮಠ, ಕುಮಾರ ಬನ್ನಿಕೊಪ್ಪ, ದೇವು ಹಡಪದ, ನಾಗರಾಜ ಮುರುಡಿ, ದೇವಪ್ಪ ಇಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.