ನೂರು ವಸಂತಗಳನ್ನು ಪೂರೈಸಿ, ಹಲವು ತಲೆಮಾರುಗಳಿಗೆ ಪ್ರೀತಿ-ವಾತ್ಸಲ್ಯದ ನೆರಳಾಗಿರುವ ಜೀವಂತ ದೈವ ಸ್ವರೂಪಿ, ತಾಲೂಕಿನ ದ್ಯಾವಾಸಾ ಗ್ರಾಮದ ಕನ್ನಮ್ಮ ರಾಮಪ್ಪ (೧೦೦ ವರ್ಷ) ಅವರಿಗೆ ಗ್ರಾಮಸ್ಥರು ಹಾಗೂ ಬಂಧು ವರ್ಗದವರು ಅತ್ಯಂತ ವೈಭವದಿಂದ ಶತಮಾನೋತ್ಸವ ಅಭಿನಂದನಾ ಸನ್ಮಾನ ನೆರವೇರಿಸಿದರು.
ಸೊರಬ: ನೂರು ವಸಂತಗಳನ್ನು ಪೂರೈಸಿ, ಹಲವು ತಲೆಮಾರುಗಳಿಗೆ ಪ್ರೀತಿ-ವಾತ್ಸಲ್ಯದ ನೆರಳಾಗಿರುವ ಜೀವಂತ ದೈವ ಸ್ವರೂಪಿ, ತಾಲೂಕಿನ ದ್ಯಾವಾಸಾ ಗ್ರಾಮದ ಕನ್ನಮ್ಮ ರಾಮಪ್ಪ (೧೦೦ ವರ್ಷ) ಅವರಿಗೆ ಗ್ರಾಮಸ್ಥರು ಹಾಗೂ ಬಂಧು ವರ್ಗದವರು ಅತ್ಯಂತ ವೈಭವದಿಂದ ಶತಮಾನೋತ್ಸವ ಅಭಿನಂದನಾ ಸನ್ಮಾನ ನೆರವೇರಿಸಿದರು.
ತಂಡಿಗೇರು ಕುಟುಂಬದ ನೇತೃತ್ವ ಹಾಗೂ ಕಲ್ಲಿ ಕುಟುಂಬದ ಸಕ್ರಿಯ ಸಹಭಾಗಿತ್ವದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವು, ಇಡೀ ದ್ಯಾವಾಸ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ೫ ಜನ ಮಕ್ಕಳು, ೧೦ ಜನ ಮೊಮ್ಮಕ್ಕಳು ಹಾಗೂ ೧೫ ಮರಿ ಮೊಮ್ಮಕ್ಕಳನ್ನೊಳಗೊಂಡ ಸುಖ-ಸಂಸಾರವನ್ನು ಕಾಣುತ್ತ, ಬಾಳುತ್ತಿರುವ ಕನ್ನಮ್ಮಜ್ಜಿ ಅವರ ಸರಳ ಜೀವನ ಇಂದಿನ ಯುವ ಪೀಳಿಗೆಗೆ ಪ್ರೇರಣಾದಾಯಿಯಾಗಿದೆ.ಗ್ರಾಮದ ೯ ಕುಟುಂಬಗಳ ಹಿರಿಯರಿಗೂ ಗೌರವ: ಈ ಶತಮಾನೋತ್ಸವ ಸಂದರ್ಭದಲ್ಲಿ, ಗ್ರಾಮದ ಇತರ ಹಿರಿಯ ಜೀವಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸಿದ್ದು ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ಊರಿನ ಹಿರಿಯರಾದ ಕನ್ನಮ್ಮ ಕಡಿಕೇರಿ, ಕಾಳಮ್ಮ, ಕನ್ನಮ್ಮ ಹೊಸಕಪ್ಪ ಸೇರಿದಂತೆ ಒಟ್ಟು ೯ ಕುಟುಂಬಗಳ ಮುಖಂಡರು ಹಾಗೂ ಹಿರಿಯರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕೆರಿಯಪ್ಪ, ಸಾವಿತ್ರಿ, ರಾಮಚಂದ್ರಪ್ಪ, ಗಿರಿಜಮ್ಮ, ಕಲ್ಲಿ ಈಶ್ವರಪ್ಪ, ರೇಣುಕಾ, ಮಧುಕೇಶ್ವರ, ರಾಧಾ, ಮಂಜಮ್ಮ, ಶೇಖರಪ್ಪ ರತ್ನಮ್ಮ, ದೇವಮ್ಮ, ಗೌರಿ ಹಾಗೂ ಮಾಸ್ತಮ್ಮ ಅವರು ಹಿರಿಯರನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.ಇದು ಕೇವಲ ಒಬ್ಬ ವ್ಯಕ್ತಿಗೆ ಸಲ್ಲಿಸಿದ ಸನ್ಮಾನವಲ್ಲ. ಬದಲಿಗೆ ನಮ್ಮ ಊರಿನ ಒಂದು ಶತಮಾನದ ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆಗೆ ನೀಡಿದ ಶ್ರೇಷ್ಠ ಗೌರವ ಎಂದು ದ್ಯಾವಾಸ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಂಡಿಗೇರು ಮತ್ತು ಕಲ್ಲಿ ಮನೆತನದ ಸದಸ್ಯರು, ಗ್ರಾಮದ ಪ್ರಮುಖರು ಇದ್ದರು.