ಪಟ್ಟಣದ ಹಳೆಯ ಸರ್ಕಾರಿ ಬಾಲಕಿಯರ ಶಾಲೆ ಎಂಬ ಹಿರಿಮೆ ಹೊಂದಿರುವ ಹಳಿಯೂರು ತೇರುಬೀದಿಯಲ್ಲಿನ ಸರ್ಕಾರಿ ಕಿರಿಯ ಬಾಲಕಿಯರ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಜ.11ರ ಭಾನುವಾರ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶತಮಾನೋತ್ಸವ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಪುರಸಭಾ ಮಾಜಿ ಅಧ್ಯಕ್ಷ ಕೆ.ಜಿ.ವಸಂತಗೌಡ ತಿಳಿಸಿದರು.
ಶಿಕಾರಿಪುರ: ಪಟ್ಟಣದ ಹಳೆಯ ಸರ್ಕಾರಿ ಬಾಲಕಿಯರ ಶಾಲೆ ಎಂಬ ಹಿರಿಮೆ ಹೊಂದಿರುವ ಹಳಿಯೂರು ತೇರುಬೀದಿಯಲ್ಲಿನ ಸರ್ಕಾರಿ ಕಿರಿಯ ಬಾಲಕಿಯರ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಜ.11ರ ಭಾನುವಾರ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶತಮಾನೋತ್ಸವ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಪುರಸಭಾ ಮಾಜಿ ಅಧ್ಯಕ್ಷ ಕೆ.ಜಿ.ವಸಂತಗೌಡ ತಿಳಿಸಿದರು. ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಿಟೀಷ್ ಸರ್ಕಾರದ ಆಡಳಿತದಲ್ಲಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪಟ್ಟಣದ ಹಳಿಯೂರು ತೇರುಬೀದಿಯಲ್ಲಿ 1908ರಲ್ಲಿ ಆರಂಭವಾದ ಸರ್ಕಾರಿ ಕಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಅತ್ಯಂತ ಹಳೆಯ ಹೆಣ್ಣುಮಕ್ಕಳ ಶಾಲೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಲಕ್ಷಾಂತರ ಪ್ರತಿಭಾನ್ವಿತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಶಾಲೆಯ ಬಗ್ಗೆ ನಿಖರ ದಾಖಲೆಯನ್ನು ಸಂಗ್ರಹಿಸಿ ಇದೀಗ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಮೂಲಭೂತ ಸೌಲಭ್ಯದ ಕೊರತೆಯನ್ನು ಎದುರಿಸುತ್ತಿದ್ದ ಶಾಲೆಗೆ ಹಳೆ ವಿದ್ಯಾರ್ಥಿಗಳ ಸಹಿತ ಸ್ಥಳೀಯ ದಾನಿಗಳ ಸಹಕಾರದಿಂದ ಅಲ್ಪಾವಧಿಯಲ್ಲಿಯೇ ಖಾಸಗಿ ಶಾಲೆಗೆ ಸರಿಸಮಾನವಾದ ಮೇಜು ಕುರ್ಚಿ, ಟೇಬಲ್ ಪೀಠೋಪಕರಣ ಸುಸಜ್ಜಿತ ಆಟದ ಪರಿಕರ, ಮೈದಾನ, ಶೌಚಾಲಯ ಜತೆಗೆ ಉದ್ಯಮಿ ಎಂ.ಪಿ.ಕುಮಾರ್ ನೆರವಿನಿಂದ ಅಡುಗೆ ಕೋಣೆ ನಿರ್ಮಾಣಗೊಂಡು ಪೋಷಕರ ಅಪೇಕ್ಷೆಗನುಗುಣವಾಗಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರಿಯರ ಸಹಿತ ಎಂಜಿನಿಯರ್ ಮತ್ತಿತರ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಗಣ್ಯರು ಶಾಲೆಯ ಬಹು ದೊಡ್ಡ ಕೊಡುಗೆಯಾಗಿದ್ದು, ಸ್ವಯಂ ಪ್ರೇರಿತರಾಗಿ ಬಹುತೇಕ ಹಳೆ ವಿದ್ಯಾರ್ಥಿಗಳು ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ ಎಂದರು.
ಸಂಸದ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ವಿಜಯೇಂದ್ರ ಕಾರ್ಯಕ್ರಮದ ವಹಿಸಲಿದ್ದು, ಮಾಜಿ ಶಾಸಕ ಶಾಂತವೀರಪ್ಪಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಡಿಡಿಪಿಐ ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಬಿಇಒ ಲೋಕೇಶಪ್ಪ, ಶತಮಾನೋತ್ಸವ ಸಮಿತಿ ಅಧ್ಯಕ್ಷೆ ಬಿ.ವೈ.ಅರುಣಾದೇವಿ ಸಹಿತ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಸಲಹಾ ಸಮಿತಿ ಸಂಚಾಲಕ ಎಂ.ಬಿ.ಚನ್ನವೀರಪ್ಪ, ಸಹ ಶಿಕ್ಷಕಿ ಲಕ್ಷ್ಮೀ ಸುಣಗಾರ್ ಮಾತನಾಡಿದರು. ಪತ್ರಿಕಾಗೋಗೋಷ್ಠಿಯಲ್ಲಿ ಸಲಹಾ ಸಮಿತಿ ಸದಸ್ಯ ಮಂಜುನಾಥ್ (ರಾಜಲಕ್ಷ್ಮಿ), ಎಸ್.ಕೆ ಮಂಜುನಾಥ್ ಸಿಂಗ್,ಮಂಜಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಂಗೀತ ಕುಮಾರನಾಯ್ಕ, ಪ್ರದೀಪ್ ದೀಕ್ಷಿತ್, ಸುರೇಂದ್ರಗೌಡ, ಹರೀಶ್ಚಂದ್ರ ಇತರರಿದ್ದರು.