ಶತಮಾನೋತ್ಸವದ ಸವಿನೆನಪಿಗಾಗಿ ಈ ಸಾಮೂಹಿಕ ಗೀತೆ ಹಾಡಿಸಲಾಗುತ್ತಿದೆ. ಮಕ್ಕಳಿಗೆ ನಾಡು, ನುಡಿ ಕುರಿತು ಅಭಿರುಚಿ ಮೂಡಿಸಲು ಗ್ರಾಮೀಣ ಪ್ರದೇಶದ ಮಕ್ಕಳಿಂದ ಸಾಮೂಹಿಕವಾಗಿ ನಾಡಗೀತೆ, ಸುಗಮ ಸಂಗೀತ ಗೀತೆ ಹಾಡಿಸಿ ತಾಯ್ನಾಡಿನ ಕುರಿತುಅಭಿರುಚಿ ಮೂಡಿಸಲಾಗುವುದು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸುಗಮ ಸಂಗೀತ ಹಾಗೂ ನಾಡಗೀತೆಗೆ ನೂರು ವರ್ಷ ತುಂಬಿದೆ. ಕನ್ನಡ ನಾಡು, ನುಡಿ ಮತ್ತಷ್ಟು ಶ್ರೀಮಂತಗೊಳಿಸಲು ಮಕ್ಕಳಿಂದ ಈ ಗೀತೆಗಳನ್ನು ಹಾಡಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ, ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘ ಆಶ್ರಯದಲ್ಲಿ ನಾಡಗೀತೆ, ಸುಗಮ ಸಂಗೀತಗೀತೆಗೆ ನೂರು ವರ್ಷತುಂಬಿದ ನೆನಪಿನಲ್ಲಿ ಮಕ್ಕಳಿಂದ ಸಾಮೂಹಿಕ ನಾಡಗೀತೆ, ಸುಗಮ ಸಂಗೀತ ಗೀತೆ ಹಾಡಿಸಲು ಪೂರ್ವಭಾವಿ ತರಬೇತಿ ನೀಡಿ ಮಾತನಾಡಿದರು.
ಶತಮಾನೋತ್ಸವದ ಸವಿನೆನಪಿಗಾಗಿ ಈ ಸಾಮೂಹಿಕ ಗೀತೆ ಹಾಡಿಸಲಾಗುತ್ತಿದೆ. ಮಕ್ಕಳಿಗೆ ನಾಡು, ನುಡಿ ಕುರಿತು ಅಭಿರುಚಿ ಮೂಡಿಸಲು ಗ್ರಾಮೀಣ ಪ್ರದೇಶದ ಮಕ್ಕಳಿಂದ ಸಾಮೂಹಿಕವಾಗಿ ನಾಡಗೀತೆ, ಸುಗಮ ಸಂಗೀತ ಗೀತೆ ಹಾಡಿಸಿ ತಾಯ್ನಾಡಿನ ಕುರಿತುಅಭಿರುಚಿ ಮೂಡಿಸಲಾಗುವುದು ಎಂದರು.ಒಂದೇ ವೇದಿಕೆಯಲ್ಲಿ 2 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಏಕಕಾಲದಲ್ಲಿ ಹಾಡಿಸುವುದು ತಮ್ಮ ಉದ್ದೇಶವಾಗಿದೆ. ಮಹಾತ್ಮ ಗಾಂಧೀಜಿಯವರು ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಆಗಮಿಸಿದ್ದಾಗ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆ ಮೊದಲ ಬಾರಿಗೆ ಹಾಡಲಾಯಿತು ಎಂದರು.
ಕನ್ನಡ ಗೀತೆಗಳು ಮಕ್ಕಳ ಮನದಲ್ಲಿ ಉಳಿದು, ಬೆಳೆಯುವಂತಾಗಲಿದೆ. ಹಳ್ಳಿಗಾಡಿನ ಮಕ್ಕಳಲ್ಲಿ ಪ್ರತಿಭೆಇದೆ. ಇದನ್ನು ಗುರುತಿಸುವ ಕೆಲಸವಾಗಬೇಕು. ನವೆಂಬರ್ ಮಾಹೆಯಲ್ಲಿ ಸರ್ಕಾರಿ ಶಾಲೆ, ಅನುದಾನರಹಿತ ಶಾಲೆ, ಕಾಲೇಜು ಮಕ್ಕಳನ್ನು ಒಂದೆಡೆ ಸೇರಿಸಿ ಈ ವಿನೂತನ ಯತ್ನ ಮಾಡಲಾಗುತ್ತಿದೆ ಎಂದರು.ಮಕ್ಕಳು ಸಾಮೂಹಿಕವಾಗಿ ಏಕಕಂಠದಲ್ಲಿ ನಾಡಗೀತೆ, ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿಯ ನಾವು ಭಾರತೀಯರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಲು ಗಾಯಕ ಕಿಕ್ಕೇರಿಯಿಂದ ತರಬೇತಿ ಪಡೆದರು.
ಈ ವೇಳೆ ಪ್ರಾಂಶುಪಾಲ ಸಹದೇವು, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ಭಾರತಿ, ಕೇಂಬ್ರಿಡ್ಜ್ ಶಾಲೆ ಮುಖ್ಯಶಿಕ್ಷಕಿ ದೀಪಾ, ರಾಯಲ್ ಶಾಲೆಯ ದೀಪಿಕಾ, ಚೈತನ್ಯ ಶಾಲೆ ಮಲ್ಲಿಕಾರ್ಜುನ, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕೆ.ವಿ. ಬಲರಾಮು ಇದ್ದರು.