ಸಾರಾಂಶ
ಹುಬ್ಬಳ್ಳಿ: ಸಿದ್ಧಾರೂಢರ ಕಥಾಮೃತದ ಗ್ರಂಥವನ್ನು 10 ಸಾವಿರಕ್ಕೂ ಹೆಚ್ಚು ಭಕ್ತಗಣ, ಕುಂಭ ಹೊತ್ತ ಸಾವಿರಾರು ಜನ ಸುಮಂಗಲೆಯರು, ಆರತಿ ಹಿಡಿದ ಮಹಿಳೆಯರು..ನಿರಂತರವಾಗಿ ಮೊಳಗುತ್ತಿದ್ದ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ..!
ಇದು ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀಸಿದ್ಧಾರೂಢ ಸ್ವಾಮೀಜಿ ಕಥಾಮೃತ ಗ್ರಂಥದ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.ಗಣೇಶಪೇಟೆಯ ಶ್ರೀಜಡಿಸಿದ್ಧಾಶ್ರಮದಿಂದ ಆರಂಭವಾದ ಮೆರವಣಿಗೆಗೆ ಐರಣಿಯ ಮುಪ್ಪಿನಾರ್ಯ ಹೊಳೆಮಠದ ಡಾ. ಬಸವರಾಜ ದೇಶಿಕೇಂದ್ರ ಶ್ರೀಗಳು ಚಾಲನೆ ನೀಡಿದರು. ಆನೆಯ ಅಂಬಾರಿಯೊಳಗೆ ವಿರಾಜಮಾನವಾಗಿದ್ದ ಶ್ರೀಸಿದ್ಧಾರೂಢ ಸ್ವಾಮಿ ಹಾಗೂ ಗುರುನಾಥಾರೂಢರ ಮೂರ್ತಿಗಳಿಗೆ ಮತ್ತು ಪಲ್ಲಕ್ಕಿಯಲ್ಲಿದ್ದ ಮೂರ್ತಿಗಳಿಗೆ ಮಹಿಳೆಯರು ಪುಷ್ಪಾಂಜಲಿ ಸಲ್ಲಿಸಿ, ಆರತಿ ಬೆಳಗಿದರು.
ಮೆರವಣಿಗೆಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಆರೂಢರ ಕಥಾಮೃತದ ಗ್ರಂಥವನ್ನು ತಲೆ ಮೇಲೆ ಹೊತ್ತು ಸಾಗಿದರೆ, ಅವರಿಗೆ ಸಾಥ್ ನೀಡಲು 5 ಸಾವಿರಕ್ಕೂ ಅಧಿಕ ಸುಮಂಗಲೆಯರು ಕುಂಭ ಹೊತ್ತು ಹೆಜ್ಜೆ ಹಾಕಿದರು. ಮತ್ತೆ ಸಾವಿರಾರು ಮಹಿಳೆಯರು ಆರತಿ ಹಿಡಿದು ಸಾಗಿದ್ದು ವಿಶೇಷ. ಡೋಲು, ಪುರುಷರು ಮತ್ತು ಮಹಿಳೆಯರ ಡೊಳ್ಳು, ವೀರಗಾಸೆ, ಪುರವಂತರ ತಂಡ, ಚೆಟ್ಟಿ ಮೇಳ, ಬೃಹತ್ ಗೊಂಬೆಗಳಲ್ಲದೇ, ಬ್ಯಾಂಡ್, ಜಾಂಜ್ ಮೆರವಣಿಗೆ, ಪುಟ್ಟ ಬಾಲಕರ ಭಜನಾ ತಂಡವು ನೋಡುಗರ ಗಮನ ಸೆಳೆದವು. ಮೆರವಣಿಗೆ ಸಾಗಿದ ಎಲ್ಲ ಮಾರ್ಗಗಳ ಇಕ್ಕೆಲಗಳಲ್ಲಿ ನೆರೆದ ಭಕ್ತಸಮೂಹವು ಮೆರವಣಿಗೆಯ ಮೇಲೆ ಪುಷ್ಪವೃಷ್ಟಿಗೈದರು. ಸುಡುಬಿಸಿಲನ್ನು ಲೆಕ್ಕಿಸದೇ ಕುಂಭ ಹೊತ್ತ, ಗ್ರಂಥ ತಲೆಯಲ್ಲಿ ಇಟ್ಟುಕೊಂಡಿದ್ದ ಭಕ್ತ ಹೆಜ್ಜೆ ಹಾಕುತ್ತಿದ್ದರೆ, ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಅವರಲ್ಲಿ ಅಂತಃಶಕ್ತಿಯನ್ನು ಹೊರಹೊಮ್ಮಿಸುತ್ತಿತ್ತು. ಅಜ್ಜನ ಭಜನೆಗಳು ಆಯಾಸವನ್ನು ಮರೆಸುತ್ತಿದ್ದವು. ಬರೋಬ್ಬರಿ 4 ಗಂಟೆಗೂ ಅಧಿಕ ಕಾಲ ಮೆರವಣಿಗೆ ಸಾಗಿತು.ನೂರಾರು ಮಠಾಧೀಶರು, ಸಾಧು, ಸಂತರು ಸಾರೋಟಗಳಲ್ಲಿ ಮೆರವಣಿಗೆಯ ಮೂಲಕ ಕರೆ ತರಲಾಯಿತು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ 60 ದಿನಗಳ ಕಾಲ ಸುಮಾರು 8 ಸಾವಿರ ಕಿಮೀ ಸಂಚರಿಸಿದ ಶ್ರೀಸಿದ್ಧಾರೂಢ ಸ್ವಾಮಿ ಜ್ಯೋತಿ ಯಾತ್ರೆ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಮತ್ತಷ್ಟು ಮೆರಗು ತಂದಿತು.
ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಶ್ರೀಗಳು, ಬೀದರ ಸಿದ್ಧಾರೂಢ ಮಠ, ಭಗೀರಥ ಪೀಠದ ಪುರುಷೋತ್ತಮಾನಂದ ಶ್ರೀಗಳು, ಚಿತ್ರದುರ್ಗದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಹುಕ್ಕೇರಿಯ ಗುರುಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯರು, ಶಾಂತಾಶ್ರಮದ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ, ಕಾಡರಕೊಪ್ಪ ದಯಾನಂದ ಸರಸ್ವತಿ ಮಹಾಸ್ವಾಮೀಜಿ, ಚಿಕ್ಕನಂದಿಯ ಸಹಜಾನಂದ ಸ್ವಾಮೀಜಿ ಸೇರಿದಂತೆ ನೂರಾರು ಮಠಾಧೀಶರು, ಸಾಧು, ಸಂತರು, ಮಾತೆಯರು ಪಾಲ್ಗೊಂಡಿದ್ದರು.ಮಾಜಿ ಶಾಸಕ ಹಾಗೂ ಕಾರ್ಯಕ್ರಮ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಆರ್.ಪಾಟೀಲ, ವಿಶ್ವವೇದಾಂತ ಪರಿಷತ್ ಅಧ್ಯಕ್ಷ ಹಾಗೂ ಕಥಾಮೃತ ಮೆರವಣಿಗೆ ಕಾರ್ಯಾಧ್ಯಕ್ಷ ಶ್ಯಾಮಾನಂದ ಪೂಜೇರಿ, ಕಥಾಮೃತ ಮೆರವಣಿಗೆ ಸಮಿತಿ ಅಧ್ಯಕ್ಷ ವಿ.ವಿ. ಮಲ್ಲಾಪುರ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಲ್. ಪಾಟೀಲ, ಟ್ರಸ್ಟ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ. ಧರ್ಮದರ್ಶಿಗಳಾದ, ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ಅಂದಾನೆಪ್ಪ ಚಾಕಲಬ್ಬಿ, ವಿನಾಯಕ ಘೋಡಕೆ, ಚನ್ನವೀರ ಮುಂಗುರವಾಡಿ, ವಿ.ಡಿ. ಕಾಮರೆಡ್ಡಿ, ರಮೇಶ ಬೆಳಗಾಗಿ, ಸಿದ್ದನಗೌಡ ಪಾಟೀಲ, ವಸಂತ ಸಾಲಗಟ್ಟಿ, ಬಿ.ಆರ್. ಬಾಗೇವಾಡಿ, ಗೀತಾ ಕಲಬುರ್ಗಿ, ಮ್ಯಾನೇಜರ್ ಈರಣ್ಣ ತುಪ್ಪದ ಸೇರಿದಂತೆ ಹಲವರಿದ್ದರು.