ಡಿಸೆಂಬರ್ ನಲ್ಲಿ ಶತಮಾನೋತ್ಸವ ಕಾರ್ಯಕ್ರಮ

| Published : Oct 01 2024, 01:21 AM IST

ಸಾರಾಂಶ

ತುಮಕೂರು: ತಾಲೂಕು ಬ್ರಹ್ಮಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಮಾರಂಭ ಆಚರಿಸಲು ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ತುಮಕೂರು: ತಾಲೂಕು ಬ್ರಹ್ಮಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಮಾರಂಭ ಆಚರಿಸಲು ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.ಈ ಸಂಬಂಧ ಶಾಲೆಯಲ್ಲಿ ನಡೆದ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಹಿತೈಷಿಗಳ ಸಭೆಯಲ್ಲಿ ಶಾಲೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಚನಾತ್ಮ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಯಿತು.. ಶತಮಾನೋತ್ಸವ ಸಮಾರಂಭವನ್ನು ಡಿಸೆಂಬರ್ ತಿಂಗಳಿನಲ್ಲಿ ಮಾಡಲು ನಿರ್ಧರಿಸಲಾಯಿತು.ಕಾರ್ಯಕ್ರಮಕ್ಕೆ ಸಂಸದರು, ಶಾಸಕರು, ಸಚಿವರು ಸೇರಿದಂತೆ ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಕರೆಸಲು ತೀರ್ಮಾನಿಸಲಾಯಿತು. ಹಾಗೆಯೇ ಅಧಿಕಾರಿ ವರ್ಗವನ್ನು ಕೂಡ ಸಮಾರಂಭಕ್ಕೆ ಆಹ್ವಾನಿಸಲು ನಿರ್ಧರಿಸಲಾಯಿತು.ಶಾಲೆ 1924 ಆಗಸ್ಟ್ 1 ಕ್ಕೆ ಆರಂಭವಾಯಿತು. ಆಗಸ್ಟ್ 2024 ಕ್ಕೆ 100 ವರ್ಷ ಪೂರೈಸಿದೆ. ಕಾರ್ಯಕ್ರಮಕ್ಕೆ ಹಳೆ ವಿದ್ಯಾರ್ಥಿಗಳ ನೆರವು ಪಡೆದು ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಗುವುದು. ಹಣ ಉಳಿದರೆ ಆ ಹಣದಲ್ಲಿ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡಲು ನಿರ್ಧರಿಸಲಾಯಿತು.ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದ ಹಳೆ ವಿದ್ಯಾರ್ಥಿ, ಐ.ಎಫ್. ಡಬ್ಲ್ಯೂಜೆ ಅಧ್ಯಕ್ಷ ಹಾಗೂ ಕನ್ನಡಪ್ರಭ ಪ್ರಕಾಶಕ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ ಈಗಾಗಲೇ ಕಾರ್ಯಕ್ರಮ ನಡೆಯಬೇಕಾಗಿತ್ತು. ಗ್ರಾಮಸ್ಥರೆಲ್ಲರೂ ಒಟ್ಟಾಗಿ ಕಾರ್ಯಕ್ರಮ ರೂಪಿಸುತ್ತಿರುವುದು ಸಂತೋಷದ ವಿಚಾರ. ಈ ಶತಮಾನೋತ್ಸವ ಸಮಾರಂಭಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆಯುವುದು, ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸುವುದು, ಅಚ್ಚು ಕಟ್ಟಾಗಿ ಸಮಾರಂಭ ಏರ್ಪಡಿಸುವ ಬಗ್ಗೆ ಸಲಹೆಗಳನ್ನು ನೀಡಿದರು.ಇದೊಂದು ಪಕ್ಷಾತೀತ ಕಾರ್ಯಕ್ರಮ ಆಗಬೇಕು. ಇದೊಂದು ನಮ್ಮ ಗ್ರಾಮದ, ನಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ ಯಶಸ್ವಿಗೊಳಿಸಲು ತಿಳಿಸಿದರು.ಶತಮಾನೋತ್ಸವ ಸಮಾರಂಭ ಹಿನ್ನೆಲೆಯಲ್ಲಿ ಹಣಕಾಸು ಸಮಿತಿ, ಸ್ವಾಗತ ಸಮಿತಿ ರಚಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಜಗದೀಶ್ ಕುಮಾರ, ಗಂಗಾಧರ್, ಮಹಲಿಂಗಯ್ಯ,ಬಿ.ಎಸ್. ವೀರಭದ್ರಯ್ಯ, ರಾಜು, ಬಿ.ಡಿ. ನಟರಾಜ್, ಎಲ್ಐಸಿ ಲಿಂಗರಾಜು, ಶಿವಕುಮಾರ್. ಕುಮಾರಸ್ವಾಮಿ, ಗಂಗರಾಜು, ಪುಟ್ಟರಾಜು, ಸೋಮಸುಂದರ್, ಅರ್ಚನಾ ಮಂಜುನಾಥ್, ಮಹಾಲಿಂಗಪ್ಪ, ಸಿದ್ದರಾಮಣ್ಣ, ವಿ.ಎಲ್. ಸ್ವಾಮಿ ಇತರರಿದ್ದರು.