ರಾಜ್ಯದಲ್ಲಿ ಹೂಡಿಕೆ ಇಳಿಕೆಗೆ ಕೇಂದ್ರ, ಬಿಜೆಪಿ ಕಾರಣ: ಎಂ.ಬಿ ಪಾಟೀಲ್‌

| Published : Jun 03 2024, 12:31 AM IST / Updated: Jun 03 2024, 09:12 AM IST

MB Patil
ರಾಜ್ಯದಲ್ಲಿ ಹೂಡಿಕೆ ಇಳಿಕೆಗೆ ಕೇಂದ್ರ, ಬಿಜೆಪಿ ಕಾರಣ: ಎಂ.ಬಿ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶಿ ನೇರ ಬಂಡವಾಳ ಆಕರ್ಷಿಸುವಲ್ಲಿ ಮೊದಲ ಸ್ಥಾನದಲ್ಲಿದ್ದ ಕರ್ನಾಟಕ ಈಗ ಮೂರನೇ ಸ್ಥಾನಕ್ಕೆ ಇಳಿಯಲು ಕೇಂದ್ರ ಸರ್ಕಾರದ ಧೋರಣೆ ಹಾಗೂ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಉದಾಸೀನ ನಿಲುವು ಮುಖ್ಯ ಕಾರಣ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.

 ಬೆಂಗಳೂರು :  ವಿದೇಶಿ ನೇರ ಬಂಡವಾಳ ಆಕರ್ಷಿಸುವಲ್ಲಿ ಮೊದಲ ಸ್ಥಾನದಲ್ಲಿದ್ದ ಕರ್ನಾಟಕ ಈಗ ಮೂರನೇ ಸ್ಥಾನಕ್ಕೆ ಇಳಿಯಲು ಕೇಂದ್ರ ಸರ್ಕಾರದ ಧೋರಣೆ ಹಾಗೂ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಉದಾಸೀನ ನಿಲುವು ಮುಖ್ಯ ಕಾರಣ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೂಡಿಕೆಗೆ ಒಲವು ತೋರಿಸಿದ್ದ ವಿದೇಶಿ ಹೂಡಿಕೆದಾರರು ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಒತ್ತಾಸೆಯ ಮೇರೆಗೆ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳತ್ತ ಮುಖ ಮಾಡಿರುವುದು ಹಾಗೂ ಆ ರಾಜ್ಯಗಳತ್ತ ಹರಿಯುತ್ತಿದ್ದ ಎಫ್‌ಡಿಐ ಯನ್ನು ರಾಜ್ಯದತ್ತ ತಿರುಗುವಂತೆ ಮಾಡುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಪ್ರಯತ್ನ ಮಾಡದಿರುವುದೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ ಎಂದಿದ್ದಾರೆ.

ದೇಶದಲ್ಲಿ ಎಫ್‌ಡಿಐ ಇಳಿಕೆ ಆಗಲು ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ, ದೋಷಪೂರಿತ ನೀತಿಗಳೇ ಕಾರಣ. ಜತೆಗೆ ಜಾಗತಿಕ ವಿದ್ಯಮಾನಗಳು ಕೂಡ ಸೇರಿರಬಹುದು. ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಎಫ್‌ಡಿಐ ಈಕ್ವಿಟಿ ಹೂಡಿಕೆ ಕಳವಳಕಾರಿ ಮಟ್ಟದಲ್ಲಿ ಇಳಿಕೆಯಾಗಿದೆ. 2022-23ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಹೂಡಿಕೆಯಲ್ಲಿನ ಇಳಿಕೆ ಶೇ.3ರಷ್ಟು ಮಾತ್ರ ದಾಖಲಾಗಿದೆ. ಆದರೆ, ಅದಕ್ಕೂ ಮುಂಚಿನ 4 ಹಣಕಾಸು ವರ್ಷಗಳಲ್ಲಿನ ಇಳಿಕೆ ಪ್ರಮಾಣ ಶೇ. 25ಕ್ಕಿಂತಲೂ ಹೆಚ್ಚಿಗೆ ಇದೆ ಎಂದು ವಿವರಿಸಿದ್ದಾರೆ.

ಹೂಡಿಕೆದಾರರ ಸೆಳೆಯಲು ಯತ್ನ ದೇಶದ ಪರಿಸ್ಥಿತಿಯ ಪರಿಣಾಮ ರಾಜ್ಯದ ಮೇಲೂ ಆಗಿದೆ. ಆದರೆ, ಅದು ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎಫ್‌ಡಿಐ ಪಾತಾಳಕ್ಕೆ ಇಳಿದಷ್ಟು ಆಗಿಲ್ಲ. 2023-24ರಲ್ಲಿ ಇಳಿಕೆ ಪ್ರಮಾಣ ಕಡಿಮೆ ಆಗಿದ್ದು, ಪರಿಸ್ಥಿತಿಯನ್ನು ಗಣನೀಯವಾಗಿ ಸುಧಾರಿಸಲು ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ರಚನಾತ್ಮಕವಾಗಿ ಕಾರ್ಯೋನ್ಮುಖವಾಗಿದೆ. ಕರ್ನಾಟಕ 2023-24ರ ಹಣಕಾಸು ವರ್ಷದಲ್ಲಿ ದೇಶಿ ಹಾಗೂ ವಿದೇಶಿ ಕಂಪನಿಗಳಿಂದ 1.13 ಲಕ್ಷ ಕೋಟಿ ಮೌಲ್ಯದ ಬಂಡವಾಳ ಹೂಡಿಕೆ ಆಕರ್ಷಿಸಿದೆ ಎಂದು ಸಚಿವರು ತಿಳಿಸಿದ್ದಾರೆ.