ಸಾಮಾಜಿಕ ನ್ಯಾಯ ವಿರೋಧಿ ಕೇಂದ್ರದ ಮಧ್ಯಂತರ ಬಜೆಟ್: ಪ್ರತಿಭಟನೆ

| Published : Feb 09 2024, 01:50 AM IST

ಸಾರಾಂಶ

ಕೇಂದ್ರ ಯೋಜನಾ ಆಯೋಗದ ನಿರ್ದೇಶನದಂತೆ ರಾಷ್ಟ್ರೀಯ ಎಸ್ಸಿ, ಎಸ್ಟಿ ಉಪ ಯೋಜನಾ ಕಾಯ್ದೆ ರೂಪಿಸಿ ಬಜೆಟ್‌ನಲ್ಲಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಶೇಕಡ ೩೦ರಷ್ಟು ಅನುದಾನ ಮೀಸಲಿರಿಸುವ ಕಾಯ್ದೆ ಜಾರಿಗೊಳಿಸಬೇಕು, ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀತಿ ಜಾರಿಗೊಳಿಸುವುದು, ಕೃಷಿ ವಲಯವನ್ನು ಉದ್ಯಮವಾಗಿ ಘೋಷಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಸೂಕ್ತ ಮಾರುಕಟ್ಟೆ ಕಲ್ಪಿಸಿ ರೈತರ ಹಿತ ಕಾಪಾಡುವ ಬದ್ಧತೆಯನ್ನು ಬಜೆಟ್‌ನಲ್ಲಿ ಪ್ರದರ್ಶಿಸಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯ ವಿರೋಧಿಯಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ದಲಿತ, ಶೋಷಿತ ತಳ ಸಮುದಾಯಗಳ ಅಭ್ಯುದಯ, ಸಾಮಾಜಿಕ, ಆರ್ಥಿಕ ನ್ಯಾಯಕ್ಕೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಸ್ಪಂದಿಸಬೇಕಿತ್ತು. ಆದರೆ ಮಾನವೀಯ, ಸಂವಿಧಾನದ ಆಶಯಕ್ಕೆ ಆದ್ಯತೆ ನೀಡದ ಬಜೆಟ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಖಂಡಿಸಿದರು.

ಕೇಂದ್ರ ಯೋಜನಾ ಆಯೋಗದ ನಿರ್ದೇಶನದಂತೆ ರಾಷ್ಟ್ರೀಯ ಎಸ್ಸಿ, ಎಸ್ಟಿ ಉಪ ಯೋಜನಾ ಕಾಯ್ದೆ ರೂಪಿಸಿ ಬಜೆಟ್‌ನಲ್ಲಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಶೇಕಡ ೩೦ರಷ್ಟು ಅನುದಾನ ಮೀಸಲಿರಿಸುವ ಕಾಯ್ದೆ ಜಾರಿಗೊಳಿಸಬೇಕು, ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀತಿ ಜಾರಿಗೊಳಿಸುವುದು, ಕೃಷಿ ವಲಯವನ್ನು ಉದ್ಯಮವಾಗಿ ಘೋಷಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಸೂಕ್ತ ಮಾರುಕಟ್ಟೆ ಕಲ್ಪಿಸಿ ರೈತರ ಹಿತ ಕಾಪಾಡುವ ಬದ್ಧತೆಯನ್ನು ಬಜೆಟ್‌ನಲ್ಲಿ ಪ್ರದರ್ಶಿಸಿಲ್ಲ ಎಂದರು.

ಮೀಸಲಾತಿ ನೀತಿಯನ್ನು ಸುಪ್ರೀಂ ಕೋರ್ಟ್ ಶೇ. ೫೦ಕ್ಕೆ ಮೀರದಂತೆ ಮಿತಿ ಏರಿಸಿದ್ದನ್ನು ಪ್ರಶ್ನಿಸದಿರುವ ಆಳುವ ಸರ್ಕಾರ ಸಾಮಾಜಿಕ ಅನ್ಯಾಯ ಮಾಡಿದೆ. ಪರಿಶಿಷ್ಟ ಜಾತಿಗೆ ಶೇ.೧೭, ಪಂಗಡಕ್ಕೆ ಶೇ. ೭ರಷ್ಟು ಏರಿಕೆ ಮಾಡಿರುವ ಮೀಸಲಾತಿ ನೀತಿಯನ್ನು ಸಂವಿಧಾನದ ೯ನೇ ಶೆಡ್ಯೂಲ್‌ಗೆ ಸೇರ್ಪಡೆ ಮಾಡಬೇಕು, ರಾಷ್ಟ್ರ ವ್ಯಾಪ್ತಿ ಜಾತಿ ಜನಗಣತಿ ನಡೆಸಲು ಅನುದಾನ ಘೋಷಿಸುವಂತೆ ಎಂದು ಆಗ್ರಹಿಸಿದರು.

ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಎಸ್.ಕುಮಾರ್, ಸಿದ್ದಯ್ಯ ಮಳವಳ್ಳಿ, ಸೋಮಶೇಖರ್, ವೈ.ಸುರೇಶ್‌ಕುಮಾರ್, ಬಿ.ಆನಂದ, ಬಸವರಾಜ್, ಬಿ.ಎಂ.ಸೋಮಶೇಖರ್, ಗೀತಾ ಮೇಲುಕೋಟೆ, ಸುರೇಶ್ ಮರಳಗಾಲ ನೇತೃತ್ವ ವಹಿಸಿದ್ದರು.