ವಲಸಿಗರ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ವಿಫಲ: ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

| Published : Feb 15 2025, 12:30 AM IST

ವಲಸಿಗರ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ವಿಫಲ: ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ವಲಸಿಗರ ಮೇಲೆ ಅಮೇರಿಕಾ ದೌರ್ಜನ್ಯ ನಡೆಸಿ ಗಡಿಪಾರು ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿರುವುದನ್ನು ತೀವ್ರವಾಗಿ ಖಂಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಅಮೆರಿಕ ಸರ್ಕಾರ ಭಾರತೀಯ ವಲಸಿಗರ ಮೇಲೆ ನಡೆಸುತ್ತಿರುವ ಕ್ರೂರ ಕೃತ್ಯ ಮತ್ತು ದೌರ್ಜನ್ಯವನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಭಾರತೀಯ ವಲಸಿಗರ ಮೇಲೆ ಅಮೇರಿಕಾ ದೌರ್ಜನ್ಯ ನಡೆಸಿ ಗಡಿಪಾರು ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿರುವುದನ್ನು ತೀವ್ರವಾಗಿ ಖಂಡಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಭಾರತೀಯ ವಲಸಿಗರನ್ನು ಅಮೆರಿಕ ಸರ್ಕಾರವು ಅನಾಗರಿಕವಾಗಿ ನಡೆಸಿಕೊಂಡಿದೆ. ಆದರೂ ಭಾರತದ ಕೇಂದ್ರ ಸರ್ಕಾರವು ಭಾರತೀಯರನ್ನು ರಕ್ಷಿಸುವಲ್ಲಿ ಮತ್ತು ಅವರ ಪರವಾಗಿ ನಿಲ್ಲುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಭಾರತೀಯ ವಲಸಿಗರನ್ನು ಕರೆತರಲು ಮೋದಿ ಸರ್ಕಾರ ಒಂದೇ ಒಂದು ವಿಮಾನದ ವ್ಯವಸ್ಥೆಯನ್ನು ಮಾಡಿಲ್ಲ. ಆದ್ದರಿಂದ ಭಾರತೀಯರು ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ನಿರಾಶ್ರಿತರಿಗೆ ರಕ್ಷಣೆ ನೀಡುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.ಅಮೆರಿಕಾ ದೇಶ ಭಾರತೀಯರನ್ನು ಹೀನಾಯವಾಗಿ ನಡೆಸಿಕೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟಿಸಿಲ್ಲ. ಇದನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಅಮೇರಿಕಾ ಈ ರೀತಿ ಭಾರತೀಯರನ್ನು ಅವಮಾನಿಸಬಾರದು. ನಮ್ಮ ದೇಶದಲ್ಲಿ ಯಾವತ್ತೂ ಕೂಡಾ ಅಮೆರಿಕಾ ಪ್ರಜೆಗಳನ್ನು ಅವಮಾನಿಸಿಲ್ಲ. ಬದಲಾಗಿ ಗೌರವದಿಂದ ನಡೆಸಿಕೊಂಡಿದ್ದೇವೆ ಎಂದು ಹೇಳಿದರು.

ಭಾರತೀಯರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಾಗದ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ರಾಷ್ಟ್ರತಿಗಳನ್ನು ಒತ್ತಾಯಿಸಿದರು.ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಭಾರತದಿಂದ ಅಮೆರಿಕಾಕ್ಕೆ ಅಕ್ರಮವಾಗಿ ಹೋಗಿದ್ದರು ಎಂದು ಹೇಳಲಾಗುತ್ತಿರುವವರನ್ನು ಗೌರವದಿಂದ ಕಳುಹಿಸಿ ಕೊಡುವ ಕೆಲಸವನ್ನು ಮಾಡಿಲ್ಲ. ಕನಿಷ್ಠ ಪಕ್ಷ ಪ್ರಯಾಣಿಕರ ವಿಮಾನದಲ್ಲಿ ಕರೆ ತರದೇ ಯುದ್ಧ ವಿಮಾನದಲ್ಲಿ ಅಸಹ್ಯವಾಗಿ ಕರೆತಂದಿದ್ದಾರೆ. ಆದರೂ ಈ ಬಗ್ಗೆ ಕೇಂದ್ರ ಸರ್ಕಾರ ಚಕಾರ ಎತ್ತದೇ ಇರುವುದು ದುರ್ದೈವ ಸಂಗತಿ ಎಂದರು.ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರನ್ನು ಅವಮಾನಿಸಿ, ದೌರ್ಜನೆ ಎಸಗಿರುವ ಅಮೆರಿಕಾ ದೇಶಕ್ಕೆ ಹೋಗಿದ್ದಾರೆ. ಆದರೆ ಭಾರತೀಯರ ಮೇಲೆ ದೌರ್ಜನ್ಯ ಎಸಗಿರುವ ಅಮೆರಿಕಾ ಧೋರಣೆ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ ಎಂದು ದೂರಿದರು.ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಪದೇ ಪದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಈ ಹಿಂದೆ ದೇಶದ ಪ್ರತಿಯೊಬ್ಬರ ಖಾತೆ 15 ಲಕ್ಷ ಹಾಕುವುದಾಗಿ ಹೇಳಿ ವಂಚಿಸಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಭಾರತೀಯರ ಮೇಲೆ ಅಮೆರಿಕಾ ನಡೆಸಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಮುಖಂಡ ಆರ್. ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಫಯಾಜ್, ಪಾಲಿಕೆ ಮಾಜಿ ಸದಸ್ಯರಾದ ನಯಾಜ್, ಆಟೋರಾಜು, ಮೆಹಬೂಬು ಪಾಷ, ಸೌಭಾಗ್ಯ, ಕವಿತ, ಸುಜಾತ, ಭಾಗ್ಯಮ್ಮ, ನಟರಾಜುಶೆಟ್ಟಿ, ರಂಗಸ್ವಾಮಣ್ಣ ಸಿದ್ದಾಪುರ, ಅರಕೆರೆ ಶಂಕರ್, ಕೆಂಪಣ್ಣ, ಹಿಂದುಳಿದ ವರ್ಗದ ಕೆಂಪರಾಜು, ಕೈದಾಳ ರಮೇಶ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.ಫೊಟೋ : ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.