ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಕೇಂದ್ರ ಸರ್ಕಾರದ ವಿರುದ್ಧ ಅಂಕಿ ಅಂಶ ಬಿಡುಗಡೆ ಮಾಡಿ ಬರ ಪರಿಹಾರ ಬಿಡುಗಡೆಯಾಗದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕೇಂದ್ರ ಸರ್ಕಾರ ಸತತವಾಗಿ ಕರ್ನಾಟಕದ ಕುರಿತು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ಹೆಚ್ಚು ತೆರಿಗೆ ಸಂಗ್ರಹವಾಗಿ ಕೇಂದ್ರಕ್ಕೆ ಹೋಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ರಾಜ್ಯವು 2ನೇ ಸ್ಥಾನದಲ್ಲಿದೆ. ಆದರೆ, ರಾಜ್ಯಕ್ಕೆ ಕೇಂದ್ರ ಕೊಡುತ್ತಿರುವ ಪಾಲು ತೀರಾ ಕಡಿಮೆ ಇದೆ ಎಂದ ಲಕ್ಷ್ಮಣ್, ಸಂಬಂಧಿಸಿದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರು.ಅಂದಾಜಿನಂತೆ ರಾಜ್ಯದಿಂದ 4.81 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿ ಕೇಂದ್ರಕ್ಕೆ ಸಲ್ಲಿಕೆಯಾದರೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಕೇವಲ 50,207 ಕೋಟಿಯನ್ನು ಮಾತ್ರ ವಾಪಸ್ ನೀಡಿದೆ. ನಾವು 100 ನೀಡಿದರೆ ನಮಗೆ ವಾಪಸ್ ಸಿಕ್ಕಿರುವುದು ಕೇವಲ 12ರಿಂದ 13 ಪೈಸೆ ಮಾತ್ರ. ಇದಕ್ಕಿಂತ ಅನ್ಯಾಯ ಬೇರೆ ಯಾವುದಾದರೂ ಇದೆಯೇ ಎಂದು ಅವರು ಪ್ರಶ್ನಿಸಿದರು.ಬಜೆಟ್ ಬಗ್ಗೆ ಹೇಳುವುದಾದರೆ 2018-19ನೇ ಸಾಲಿಗೆ ಹೋಲಿಸಿದರೆ 2023-24ರಲ್ಲಿ ಕೇಂದ್ರದ ಬಜೆಟ್ ಗಾತ್ರ ದುಪ್ಪಟ್ಟಾಗಿದೆ. ಅದರಂತೆ ಕನಿಷ್ಠ 1 ಲಕ್ಷ ಕೋಟಿಯಷ್ಟು ತೆರಿಗೆ ಪಾಲನ್ನು ಕೇಂದ್ರ ನೀಡಬೇಕಿತ್ತು. ಆದರೆ, ಅದನ್ನೂ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ದೂರಿದ ಅವರು ಕೇಂದ್ರ ಸರ್ಕಾರ ಮಾಡಿರುವ ಸಾಲದ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿದೆ. 2014ರಲ್ಲಿ 53.11 ಲಕ್ಷ ಕೋಟಿ ಇದ್ದ ಸಾಲದ ಮೊತ್ತ ಈಗ 173 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇಷ್ಟು ಸಾಲ ಮಾಡಿದರೂ ಕೇಂದ್ರ ಸರ್ಕಾರ ದೇಶದಲ್ಲಿ ಜಲಾಶಯ ನಿರ್ಮಿಸುವಂತಹ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತರಲಿಲ್ಲ. ರಾಜ್ಯಕ್ಕೆ ಕೊಡಬೇಕಾದ ಹಣವನ್ನೂ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ದೇಶದಲ್ಲಿ ವಸೂಲಾತಿಯಿಂದ ಕೈಬಿಟ್ಟ ಸಾಲದ ಪ್ರಮಾಣವೇ 20.50 ಲಕ್ಷ ಕೋಟಿಯಷ್ಟಿದೆ. ಇವೆಲ್ಲವೂ ಬಂಡವಾಳಶಾಹಿಗಳು ಪಡೆದ ಸಾಲವೇ ಆಗಿದೆ. ಆದರೆ, ರೈತರು ಹಾಗೂ ಕಾರ್ಮಿಕರ ಕಡೆಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಬರ ಬಂದು ಅನೇಕ ತಿಂಗಳುಗಳೇ ಕಳೆಯಿತು. ಕೇಂದ್ರ ಸರ್ಕಾರದ ತಜ್ಞರೇ ಬಂದು ರಾಜ್ಯದಲ್ಲಿ ಬರದಿಂದ 35 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜು ಮಾಡಿದರು. ಆದರೆ, ಇದುವರೆಗೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ರಾಜ್ಯ ಸರ್ಕಾರವೇ ತನ್ನ ವ್ಯಾಪ್ತಿಯಲ್ಲಿ 2 ಸಾವಿರ ಕೋಟಿ ಬಿಡುಗಡೆ ಮಾಡಿದೆ ಎಂದರು.ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್, ಪಕ್ಷದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಸುರಯ್ಯ ಅಬ್ರಾರ್, ಮಾಧ್ಯಮ ಸಂಯೋಜಕ ಮಹೇಶ್ ಮೈಸೂರು ಸುದ್ದಿಗೋಷ್ಠಿಯಲ್ಲಿದ್ದರು.