ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಮಗ್ರ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದು ಜನ ಸಾಮಾನ್ಯರಿಗೆ ಕಿರು ಸಾಲ ದೊರಕಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.ಸಮೀಪದ ಕೊನ್ನಾಪುರ ಗ್ರಾಮದಲ್ಲಿ ಇತ್ತೀಚೆಗೆ ಸಾಲಭಾದೆ ತಾಳಲಾರದೇ ಮೃತಪಟ್ಟ ಪ್ರೇಮಾ ಮತ್ತು ರಂಜಿತ್ ಮನಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದರು.
ದೇಶದಲ್ಲಿ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ದುಡಿಯುವ ವರ್ಗವನ್ನು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅನರ್ಹ ಎಂಬಂತೆ ಬಿಂಬಿಸಲಾಗುತ್ತಿದೆ. ಬಂಡವಾಳ ಶಾಹಿಗಳಿಗೆ ಹೇರಳವಾದ ಸಾಲ ನೀಡುವ ಬ್ಯಾಂಕ್‌ಗಳು ರೈಟ್ ಅಪ್ ಹೆಸರಿನಲ್ಲಿ ಸಾಲ ಮನ್ನಾ ಮಾಡುತ್ತವೆ. ಆದರೆ, ಜನಸಾಮಾನ್ಯರಿಗೆ ಕಿರು ಸಾಲ ನೀಡಲು ಹಿಂದೇಟು ಹಾಕುತ್ತವೆ ಎಂದು ಆರೋಪಿಸಿದರು.ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಬ್ಯಾಂಕ್ ಸಿಬ್ಬಂದಿ ಕೇಳುವ ಹತ್ತಾರು ಬಗೆಯ ದಾಖಲೆ ಒದಗಿಸಿಕೊಡುವಲ್ಲಿ ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಕಡಿಮೆ ದಾಖಲೆ ಪಡೆದು ತ್ವರಿತಗತಿಯಲ್ಲಿ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಪ್ರತಿಪಾದಿಸಿದರು.
ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ‘ಸಾಲ ಮೇಳ’ ಆಯೋಜಿಸುವ ಮೂಲಕ ಅಗತ್ಯವಿರುವ ಕುಶಲ ಕರ್ಮಿಗಳಿಗೆ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು. ಸರ್ಕಾರದಿಂದ ಸಾಲ ದೊರೆತರೆ ಜನಸಾಮಾನ್ಯರು ತಾವಾಗಿಯೇ ಮೈಕ್ರೋ ಫೈನಾನ್ಸ್ ಕಂಪನಿಗಳು ಬಾಗಿಲು ಮುಚ್ಚಿಕೊಳ್ಳಲಿವೆ ಎಂದರು.ರಾಜ್ಯ ಸರ್ಕಾರ ಕಳುಹಿಸಿರುವ ಸುಗ್ರಿವಾಜ್ಞೆ ತಿರಸ್ಕಾರ ಮಾಡಿರುವುದು ಖಂಡನೀಯ. ಜನಸಾಮಾನ್ಯರ ಹಿತದೃಷ್ಟಿಯಿಂದ ಸುಗ್ರಿವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಬೇಕು. ಬ್ಯಾಂಕ್‌ಗಳ ನೀತಿಗಳು ಜನಸ್ನೇಹಿಯಾಗಲು ಯೋಜನೆ ರೂಪಿಸಬೇಕು. ಸರ್ಕಾರ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಪ್ಪಿಸಲು ಸೂಕ್ತ ಕ್ರಮವಹಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಬಿಎಸ್ಪಿ ಜಿಲ್ಲಾ ಸಂಯೋಜಕ ಎಚ್.ಎನ್.ವೀರಭದ್ರಯ್ಯ, ಗ್ರಾಪಂ ಸದಸ್ಯ ತಾಲೋಕು ಘಟಕದ ಅಧ್ಯಕ್ಷ ನಂಜುಡಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್, ಉಪಾಧ್ಯಕ್ಷ ದೌಲತ್ ಪಾಷಾ, ಸಂಯೋಜಕ ಸಬ್ಬೀರ್ ಪಾಷಾ, ಮುಖಂಡರಾದ ಮುನವರ್ ಪಾಷಾ, ಕೆ.ಜಿ.ಸಿದ್ದಲಿಂಗಮೂರ್ತಿ, ಅರಿಫ್ ಪಾಷಾ, ಬಿ.ಎಸ್.ತಮ್ಮಯ್ಯ, ಗೋವಿಂದರಾಜು ಸೇರಿದಂತೆ ಹಲವರು ಇದ್ದರು.