ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ: ಶಿವಗಂಗಾ

| Published : Aug 16 2025, 12:00 AM IST

ಸಾರಾಂಶ

ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಸಾಂವಿಧಾನಿಕ ತತ್ವಗಳನ್ನು ನಿರ್ಲಕ್ಷಿಸುತ್ತಿದೆ. ರಾಜ್ಯಗಳಿಗೆ ನೀಡಬೇಕಾದ ಹಣಕಾಸಿನ ಪಾಲನ್ನು ನೀಡದೇ ಜನರ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿರುವುದು ಎದ್ದು ಕಾಣುತ್ತಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಆರೋಪಿಸಿದ್ದಾರೆ.

- ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಸಾಂವಿಧಾನಿಕ ತತ್ವಗಳನ್ನು ನಿರ್ಲಕ್ಷಿಸುತ್ತಿದೆ. ರಾಜ್ಯಗಳಿಗೆ ನೀಡಬೇಕಾದ ಹಣಕಾಸಿನ ಪಾಲನ್ನು ನೀಡದೇ ಜನರ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿರುವುದು ಎದ್ದು ಕಾಣುತ್ತಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಆರೋಪಿಸಿದರು.

ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಸಕನಾದ ಮೇಲೆ ಕ್ಷೇತ್ರದ 41 ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆ ಮಂಜೂರು ಮಾಡಿಸಿ ₹365 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಮೊದಲ ಹಂತದಲ್ಲಿ ₹100 ಕೋಟಿ ಬಿಡುಗಡೆ ಮಾಡಿಸಲಾಗಿದೆ. ಕ್ಷೇತ್ರದ ನಲ್ಲೂರು ಮತ್ತು ಹೊನ್ನೇಬಾಗಿ ಗ್ರಾಮಗಳಲ್ಲಿ 2 ಮೌಲಾನಾ ಆಜಾದ್ ಶಾಲೆಗಳು, ವಿವೇಕ ಯೋಜನೆಯಡಿ ₹5.7 ಕೋಟಿ ವೆಚ್ಚದಲ್ಲಿ 41 ಹೊಸ ಶಾಲಾ ಕೊಠಡಿಗಳು, 37 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭಿಸಲು ಸರ್ಕಾರದ ಅನುಮತಿ ಕೊಡಿಸಲಾಗಿದೆ ಎಂದರು.

ತಹಸೀಲ್ದಾರ್ ಎನ್.ಜೆ.ನಾಗರಾಜ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಭಾರತದಲ್ಲಿ ವಾಸ ಮಾಡುತ್ತಿರುವ ನಾವುಗಳು ವಿವಿಧತೆಯಲ್ಲಿ ಏಕತೆ ಕಾಣುತ್ತಿದ್ದೇವೆ. ದೇಶದಲ್ಲಿ ವಾಸಿಸುತ್ತಿರುವ ನಾವುಗಳು ಪುಣ್ಯವಂತರು ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಂ.ಆರ್.ಪ್ರಕಾಶ್, ಪೊಲೀಸ್ ಉಪಾಧೀಕ್ಷಕ ಸ್ಯಾಮ್ ವರ್ಗಿಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ಉಪಾಧ್ಯಕ್ಷೆ ಸರ್ವಮಂಗಳ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗಾ, ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಎಸ್.ಶಂಕರಪ್ಪ, ಸಿಡಿಪಿಒ ನಿರ್ಮಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್, ಪುರಸಭೆ ಸದಸ್ಯರು, ತಾಲೂಕುಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

- - -

-15ಕೆಸಿಎನ್‌ಜಿ1: ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಮಳೆ ಹಿನ್ನೆಲೆ ಶಾಸಕ ಬಸವರಾಜು ಶಿವಗಂಗಾ ಅವರು ವೇದಿಕೆಯಿಂದ ಹೊರಬಂದು ಧ್ವಜ ಸ್ಥಂಭ ಪಕ್ಕದಲ್ಲಿ ನಿಂತು ಭಾಷಣ ಮಾಡಿದರು.

-15ಕೆಸಿಎನ್ಜಿ2: ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ್ ಎನ್.ಜೆ.ನಾಗರಾಜ್ ನೆರವೇರಿಸಿದರು. ಶಾಸಕ ಬಸವರಾಜು ವಿ.ಶಿವಗಂಗಾ ಮತ್ತಿತರರು ಇದ್ದರು.

- - -

(ಬಾಕ್ಸ್) * ಕಾರ್ಯಕ್ರಮದಲ್ಲಿ ಅವ್ಯವಸ್ಥೆಗಳು

ಚನ್ನಗಿರಿ ತಾಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜ ಕಟ್ಟೆಯ ಕೆಳಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಭಾವಚಿತ್ರಗಳನ್ನು ಶುಭ್ರವಸ್ತ್ರ ಹೊದಿಸದೇ ಪ್ಲಾಸ್ಟಿಕ್ ಕುರ್ಚಿಗಳ ಮೇಲಿಟ್ಟು ಪೂಜಿಸಲಾಯಿತು. ಇದಕ್ಕೆ ಕಾರ್ಯಕ್ರಮದಲ್ಲಿದ್ದ ಕೆಲವರಿಂದ ಆಕ್ಷೇಪಗಳೂ ಕೇಳಿಬಂದವು. ಅತಿಥಿಗಳುದಾಅಸೀನರಾಗಲು ಐಷಾರಾಮಿ ಕುರ್ಚಿಗಳನ್ನು ಹಾಕಿದ್ದಾರೆ. ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಮಾತ್ರ ಪ್ಲಾಸ್ಟಿಕ್ ಖಾಲಿ ಕುರ್ಚಿ ಮೇಲೆ ಇಟ್ಟಿದ್ದಾರಲ್ಲ ಎಂದರು.

ಇನ್ನು ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಶಾಲಾ ಬಾಲಕ-ಬಾಲಕಿಯರು ಇಲಾಖೆಗಳ ಪುರುಷ ಮತ್ತು ಮಹಿಳಾ ಅಧಿಕಾರಿಗಳು, ಶಿಕ್ಷಕ-ಶಿಕ್ಷಕಿಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಶೌಚಾಲಯಕ್ಕಾಗಿ ಹುಡುಕಾಡುವ ದುಸ್ಥಿತಿ ನಿರ್ಮಾಣವಾಗಿತ್ತು. ವೇದಿಕೆಯ ಹಿಂಭಾಗದಲ್ಲಿ ಕುಳಿತಿದ್ದ ನೂರಾರು ಮಕ್ಕಳ ಗದ್ದಲದಿಂದ ಅತಿಥಿಗಳ ಭಾಷಣ ಕೇಳದಂತ ವಾತಾವರಣ ಉಂಟಾಗಿತ್ತು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 80 ವರ್ಷಕ್ಕೂ ಹೆಚ್ಚಿನ ವಯಸ್ಸಿನವರು 2 ಜನ ಪುರುಷ ಸನ್ಮಾನಿತರು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ 4 ಅಂಗನವಾಡಿ ಕಾರ್ಯಕರ್ತೆಯರನ್ನು ಸ್ವಾಗತ ಮಾಡುವ ಸಂದರ್ಭ ಅವರ ಹೆಸರುಗಳನ್ನೂ ಹೇಳಲಿಲ್ಲ. ಆಹ್ವಾನ ಪತ್ರದಲ್ಲಿ ಸನ್ಮಾನಿತರ ಹೆಸರುಗಳನ್ನು ಮುದ್ರಿಸಿರಲಿಲ್ಲ. ಶಾಸಕರು ಮತ್ತು ತಹಸೀಲ್ದಾರರ ಭಾಷಣದ ಸಂದೇಶದ ಮುದ್ರಿತ ಪ್ರತಿಗಳನ್ನು ಮಾಧ್ಯಮದವರಿಗೆ ನೀಡಿರಲಿಲ್ಲ.

- - -

-15ಕೆಸಿಎನ್‌ಜಿ3.ಜೆಪಿಜಿ: