ಸಾರಾಂಶ
ಸಂಸತ್‌ಗೆ ಭದ್ರತೆ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲ: ಡಾ. ಅಂಶುಮಂತ್‌ಸಂಸತ್‌ಯೊಳಗೆ ಅತಿಕ್ರಮ ಪ್ರವೇಶ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ । ಸಂಸತ್ ಭವನಕ್ಕೆ ರಕ್ಷಣೆ ನೀಡದಿರುವ ಪ್ರಧಾನಿಯವರಿಂದ ದೇಶದ ರಕ್ಷಣೆ ಹೇಗೆ ಸಾಧ್ಯ
- ಸಂಸತ್‌ಯೊಳಗೆ ಅತಿಕ್ರಮ ಪ್ರವೇಶ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ । ಸಂಸತ್ ಭವನಕ್ಕೆ ರಕ್ಷಣೆ ನೀಡದಿರುವ ಪ್ರಧಾನಿಯವರಿಂದ ದೇಶದ ರಕ್ಷಣೆ ಹೇಗೆ ಸಾಧ್ಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದ ಸಂಸತ್ ಮೇಲೆ ದಾಳಿ ಘಟನೆಯಿಂದಾಗಿ ದೇಶದ ಜನ ಆತಂಕ ಪಡುವಂತಾಗಿದೆ. ಸಂಸತ್‌ಗೆ ಭದ್ರತೆ ಕಲ್ಪಿಸು ವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ದೇಶದ ಜನರ ಹಿತ ಕಾಪಾಡುವ ಸಂಸದರಿಗೆ ರಕ್ಷಣೆ ಇಲ್ಲ ಎಂಬುದು ಈ ಘಟನೆಯಿಂದ ಸಾಭೀತಾಗಿದ್ದು, ಇದು ಸ್ವಘೋಷಿತ ವಿಶ್ವಗುರು, ಪ್ರಧಾನಿ ಮೋದಿ ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದ್ದಾರೆ.ದೇಶದ ಸಂಸತ್ ನೊಳಗೆ ಅತಿಕ್ರಮ ಪ್ರವೇಶ ಖಂಡಿಸಿ ಗುರುವಾರ ನಗರದ ಹನುಮಂತಪ್ಪ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಕೇವಲ ಭಾವ ನಾತ್ಮಕವಾಗಿ ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಆದರೆ, ಜನಪರ ಆಡಳಿತ ನೀಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದರು.
ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಸಂಪೂರ್ಣವಾಗಿ ಹಿಂದುಳಿದಿದೆ. ದೇಶದ ಸಂಸತ್ ಭವನ ಎಂದರೇ ಪ್ರಜಾಪ್ರಭುತ್ವದ ದೇಗುಲ ಇದ್ದಂತೆ. ಸಂಸತ್ ಭವನಕ್ಕೆ ರಕ್ಷಣೆ ನೀಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲ ವಾಗಿದೆ. ದೇಶದ ಸಂಸತ್‌ಗೆ ಭದ್ರತೆ ನೀಡಲು ಸಾಧ್ಯವಾಗದ ಪ್ರಧಾನಿ ಮೋದಿ ದೇಶದ ಜನರಿಗೆ ಹೇಗೆ ಭದ್ರತೆ, ರಕ್ಷಣೆ ನೀಡುತ್ತಾರೆ ಎಂದು ಟೀಕಿಸಿದರು. ದೇಶದ ಸಂಸದರು ಇರುವ ಸಂಸತ್ ಭವನಕ್ಕೆ ರಕ್ಷಣೆ ಇಲ್ಲವೆಂದರೇ, ದೇಶಕ್ಕೆ ಯಾವ ರೀತಿ ಭದ್ರತೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿದೆ ಎಂಬುದು ಗಂಭೀರ ಪ್ರಶ್ನೆಯಾಗಿದೆ. ಇದೊಂದು ಬೇಜವಾಬ್ದಾರಿ ಸರ್ಕಾರ. ಕಳೆದ ಆರು ತಿಂಗಳ ಹಿಂದೆ ಸಂಸತ್ ಭವನವನ್ನು ಪ್ರವೇಶ ಮಾಡಿ ನ್ಯೂನತೆಗಳನ್ನು ಗುರುತಿಸಿ ಇಂದು ಸಂಸತ್ ಭವನದಲ್ಲಿ ಭಯೋತ್ಪಾದನೆ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಕೃತ್ಯ ಎಸಗಲು ಕಾರಣವಾದರೂ ಯಾರೆಂದು ಇಡೀ ಜಗತ್ತಿಗೆ ತಿಳಿದಿದ್ದು, ಅಪ್ಪಟ ದೇಶ ಪ್ರೇಮಿ ಎಂದು ಬೊಗಳೆ ಬಿಡುತ್ತಿದ್ದ ಸಂಸದ ಪ್ರತಾಪಸಿಂಹ ಸದ್ಯ ಜಗತ್ತಿನ ಮುಂದೆ ಬೆತ್ತಾಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸತ್ ಮೇಲಿನ ದಾಳಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ಖಂಡನೀಯ ಎಂದ ಅವರು, 2001 ರಲ್ಲಿ ಭಯೋತ್ಪಾದಕರು ಸಂಸತ್ ಮೇಲೆ ದಾಳಿ ನಡೆಸಿದ್ದರು. ಆಗಲೂ ಬಿಜೆಪಿ ಅಧಿಕಾರದಲ್ಲಿತ್ತು. ಸದ್ಯ ಮತ್ತೆ ಸಂಸತ್ ಮೇಲೆ ದಾಳಿ ನಡೆದಿದೆ. ಸಂಸತ್‌ಗೆ ಸೂಕ್ತ ರಕ್ಷಣೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದ್ದು, ಈ ಘಟನೆಗೆ ನೈತಿಕ ಹೊಣೆ ಹೊತ್ತು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಹಿಂದೆ ಇದೇ ಮೋದಿ ಸರ್ಕಾರ 40 ಮಂದಿ ಸೈನಿಕರನ್ನು ಉಗ್ರಗಾಮಿಗಳಿಗೆ ಬಲಿ ನೀಡಿದೆ. ಮುಂದೆ ಇಡೀ ದೇಶ ಉಗ್ರ ಗಾಮಿಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಮುಂದಿನ ಚುನಾವಣೆಯಲ್ಲಿ ದೇಶದ ಜನರು ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದ ಅವರು, ಅಧಿಕಾರ ನಡೆಸಲು ಬಾರದ ಬಿಜೆಪಿಯವರು ಜನಪರ ಆಡಳಿತ ನೀಡಲಾಗದೇ ಕೇವಲ ಭಾವನಾತ್ಮಕ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ದೇಶದ ಜನರು ಅರ್ಥ ಮಾಡಿಕೊಳ್ಳಬೇಕು. ಭದ್ರತಾ ಲೋಪದ ಹೊಣೆಯನ್ನು ಕೇಂದ್ರ ಸರಕಾರ ಹೊರಬೇಕು. ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಮುಖಂಡರಾದ ಎಂ.ಎಲ್.ಮೂರ್ತಿ, ಎಂ.ಸಿ.ಶಿವಾನಂದಸ್ವಾಮಿ, ಹಿರೇಮಗಳೂರು ರಾಮಚಂದ್ರ, ಹನೀಫ್, ಜೇಮ್ಸ್ ಡಿಸೋಜಾ, ಗಂಗಾಧರ್, ಅನ್ಸರ್, ಪ್ರಕಾಶ್ ರೈ, ಕೆ. ಭರತ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. 14 ಕೆಸಿಕೆಎಂ 3ಸಂಸತ್ ಭವನದ ಭದ್ರತಾ ವೈಫಲ್ಯ ಖಂಡಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.