ಕೇಂದ್ರ ಸರ್ಕಾರ ಜನಪರ ಬಜೆಟ್ ನೀಡಿದೆ - ಕೆಜಿ ಬೋಪಯ್ಯ

| Published : Feb 05 2025, 12:35 AM IST

ಕೇಂದ್ರ ಸರ್ಕಾರ ಜನಪರ ಬಜೆಟ್ ನೀಡಿದೆ - ಕೆಜಿ ಬೋಪಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ತನ್ನ ಘೋಷಣೆಯಂತೆ ಜನಪ್ರಿಯ ಜನಪರ ಬಜೆಟ್‌ ಅನ್ನು ನೀಡಿದೆ ಎಂದು ಮಾಜಿ ಸ್ಪೀಕರ್‌ ಕೆ.ಜಿ. ಬೋಪಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇಂದ್ರ ಸರ್ಕಾರ ತನ್ನ ಘೋಷಣೆಯಂತೆ ‘ಜನಪ್ರಿಯ, ಜನಪರ ಬಜೆಟ್’ ಅನ್ನು ನೀಡಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬಂತೆ ದೇಶದ ಎಲ್ಲಾ ವರ್ಗದ ಜನರಿಗೂ ಸಹಕಾರಿಯಾಗಬಲ್ಲ ಬಜೆಟ್ ಇದಾಗಿದೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

ತೆರಿಗೆ ವಿನಾಯಿತಿ ಮೊತ್ತವನ್ನು 12 ಲಕ್ಷಕ್ಕೆ ಏರಿಕೆ ಮಾಡಿರುವುದರಿಂದ ಮಧ್ಯಮ ವರ್ಗಕ್ಕೆ ಹೆಚ್ಚು ಅನುಕೂಲವಾಗಿದೆ. ಗ್ರಾಮೀಣಾಭಿವೃದ್ಧಿಗಾಗಿ 2 ಲಕ್ಷ ಕೋಟಿ ರು. ಗಳನ್ನು ಮೀಸಲಿಡಲಾಗಿದೆ. ಇದರಿಂದ ಕುಡಿಯುವ ನೀರು ಮತ್ತು ರಸ್ತೆ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮಂಡಿಸಿದ 50.65 ಲಕ್ಷ ಕೋಟಿ ರು. ಮೊತ್ತದ ಬಜೆಟ್ ಅನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ವಿದೇಶಿಗರು ಕೂಡ ಬಜೆಟ್ ಕುರಿತು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಕಾಂಗ್ರೆಸ್ ಮಾತ್ರ ರಾಜಕೀಯ ಕಾರಣಕ್ಕಾಗಿ ಟೀಕಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರದ ಬಜೆಟ್ ಮಂಡನೆಯಾಗುವ ಮೊದಲೇ ಬಜೆಟ್‌ನಿಂದ ಏನನ್ನೂ ನಿರೀಕ್ಷೆ ಮಾಡುವುದಿಲ್ಲ ಎಂದು ಟೀಕಿಸಲು ಆರಂಭಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಬಜೆಟ್‌ನ್ನು ಟೀಕಿಸುತ್ತಾ ರಾಜಕೀಯ ಭಾಷಣ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳ ಕಡೆ ಗಮನ ನೀಡಲಿ ಎಂದು ಕೆ.ಜಿ.ಬೋಪಯ್ಯ ಹೇಳಿದರು. ಜಿಎಸ್‌ಟಿ ಪಾಲಿನ ಹಣವನ್ನು ಸಂವಿಧಾನದತ್ತವಾಗಿ ಜನಸಂಖ್ಯಾ ಆಧಾರದಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಜಿಎಸ್‌ಟಿ ಸಮಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಲಿದೆ. ಕೇಂದ್ರ ಅರ್ಥ ಸಚಿವರಾದ ನಿರ್ಮಲಾ ಸೀತಾರಾಮ್ ಅವರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಜಿಎಸ್‌ಟಿ ಪಾಲಿನ ಕುರಿತು ರಾಜಕೀಯ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೊಡಗಿಗೆ ಪ್ಯಾಕೇಜ್ ಇಲ್ಲ:

ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಕಾಫಿ ಫಸಲು ಕುಸಿತಗೊಂಡು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ವನ್ಯಜೀವಿಗಳ ಉಪಟಳ ಮಿತಿ ಮೀರಿದ್ದು, ಹುಲಿಗಳು ನಗರ ಪ್ರದೇಶಕ್ಕೆ ಬರುವ ಆತಂಕವಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಮತ್ತು ಪರಿಹಾರ ನೀಡುತ್ತಿಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ರಸ್ತೆಗಳ ಅಭಿವೃದ್ಧಿಗಾಗಿ ಕೊಡಗು ಜಿಲ್ಲೆಗೆ 100 ಕೋಟಿ ರು. ವಿಶೇಷ ಪ್ಯಾಕೇಜ್ ನೀಡಲಾಗಿತ್ತು. ಈಗಿನ ಮುಖ್ಯಮಂತ್ರಿಗಳು ಯಾಕೆ ಪ್ಯಾಕೇಜ್ ಘೋಷಣೆ ಮಾಡುತ್ತಿಲ್ಲ ಎಂದು ಕೆ.ಜಿ.ಬೋಪಯ್ಯ ಪ್ರಶ್ನಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ವಿನಾಕಾರಣ ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದನ್ನು ಬಿಟ್ಟು ಕೊಡಗು ಜಿಲ್ಲೆಗೆ ಸಚಿವ ಸ್ಥಾನ ದೊರಕಿಸಿಕೊಡಲಿ. ಚೆಂಬು ಪ್ರದರ್ಶಿಸಿ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಲಿ. ಮುಖ್ಯಮಂತ್ರಿಗಳಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಹಾಲು ಮತ್ತು ಆಲ್ಕೋಹಾಲ್‌ನ ಬೆಲೆ ಕಡಿಮೆ ಮಾಡಲಿ ಎಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಲಕ್ಷ್ಮಣ್ ಅವರಿಗೆ ಕೊಡಗು ಹಾಗೂ ಮೈಸೂರು ಜನತೆ ಈಗಾಗಲೇ ಚೆಂಬು ನೀಡಿದ್ದಾರೆ. ಇನ್ನು ಮುಂದೆಯೂ ನೀಡಲಿದ್ದಾರೆ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಾಳಿದ್ದಾರೆ. ಕಾಫಿಗೆ ಉತ್ತಮ ಬೆಲೆ ಇದ್ದರೂ ಅಕಾಲಿಕ ಮಳೆಯಿಂದ ಶೇ.50ರಷ್ಟು ಫಸಲು ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ರೀತಿಯ ಪರಿಹಾರವನ್ನು ನೀಡಿಲ್ಲ. ಸಿ ಮತ್ತು ಡಿ ಭೂಮಿಯ ಗೊಂದಲ ಹಾಗೇ ಮುಂದುವರೆದಿದೆ. ಸಾಕಷ್ಟು ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಿದ್ದರೂ ಭಾಗಮಂಡಲಕ್ಕೆ ಬಂದ ಮುಖ್ಯಮಂತ್ರಿಗಳು ಯಾವುದೇ ಸ್ಪಂದನೆಯನ್ನು ನೀಡಿಲ್ಲ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನೀಡಿದ ಅನುದಾನದಿಂದ ನಿರ್ಮಾಣಗೊಂಡ ಕಟ್ಟಡಗಳನ್ನು ಸುಣ್ಣಬಣ್ಣ ಬಳಿದು ಉದ್ಘಾಟನೆ ಮಾಡುವುದಷ್ಟೇ ಕಾಂಗ್ರೆಸ್ ಸರ್ಕಾರದ ಕಾರ್ಯವಾಗಿದೆ. ಯಾವುದೇ ಅಭಿವೃದ್ಧಿ ಯೋಜನೆಗಳ ಬಗ್ಗೆ ಸರ್ಕಾರ ಕಾಳಜಿ ತೋರುತ್ತಿಲ್ಲ. ಭಾಗಮಂಡಲ ಸೇತುವೆ ನಿರ್ಮಾಣಕ್ಕೆ ನಮ್ಮ ಸರ್ಕಾರ ಅನುದಾನ ನೀಡಿದೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್ ಕುಮಾರ್, ವಕ್ತಾರ ಬಿ.ಕೆ.ಅರುಣ್ ಕುಮಾರ್ ಹಾಗೂ ಮಾಧ್ಯಮ ವಕ್ತಾರ ಶಜಿಲ್ ಕೃಷ್ಣನ್ ಸುದ್ದಿಗೋಷ್ಠಿಯಲ್ಲಿದ್ದರು.