ಅಡಕೆ ಬೆಳೆಗಾರರ ಸಂಕಷ್ಟಕ್ಕೆ ನೇರ ಹೊಣೆ ಕೇಂದ್ರ ಸರ್ಕಾರ : ಜಯಪ್ರಕಾಶ್‌ ಹೆಗಡೆ

| Published : Apr 13 2024, 01:02 AM IST

ಅಡಕೆ ಬೆಳೆಗಾರರ ಸಂಕಷ್ಟಕ್ಕೆ ನೇರ ಹೊಣೆ ಕೇಂದ್ರ ಸರ್ಕಾರ : ಜಯಪ್ರಕಾಶ್‌ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶಗಳಿಂದ ಅನಧಿಕೃತವಾಗಿ ಅಡಕೆ ಆಮದಿನಿಂದ ದೇಶೀಯ ಅಡಕೆ ಬೆಳೆಗಾರರ ಬದುಕು ತೀವ್ರ ಸಂಕಷ್ಟಕ್ಕೆ ದೂಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆ ವಾಗ್ದಾಳಿ ನಡೆಸಿದರು.

ಭೂತಾನ್‌, ಶ್ರೀಲಂಕಾದಿಂದ ಅಡಕೆ ಆಮದು । ಗೋರಕ್‌ಸಿಂಗ್‌ ವರದಿ ಸಲ್ಲಿಕೆ । ಕಳಸಾಪುರ- ಸಿಂದಿಗೆರೆಯಲ್ಲಿ ಚುನಾವಣಾ ಪ್ರಚಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದೇಶಗಳಿಂದ ಅನಧಿಕೃತವಾಗಿ ಅಡಕೆ ಆಮದಿನಿಂದ ದೇಶೀಯ ಅಡಕೆ ಬೆಳೆಗಾರರ ಬದುಕು ತೀವ್ರ ಸಂಕಷ್ಟಕ್ಕೆ ದೂಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆ ವಾಗ್ದಾಳಿ ನಡೆಸಿದರು.ತಾಲೂಕಿನ ಕಳಸಾಪುರ ಹಾಗೂ ಸಿಂದಿಗೆರೆ ಗ್ರಾಮಗಳಲ್ಲಿ ಶುಕ್ರವಾರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಅಧಿಕೃತವಾಗಿ ಭೂತಾನ್ ಹಾಗೂ ಶ್ರೀಲಂಕಾದಿಂದ ಲಕ್ಷ ಟನ್ ಅಡಕೆ ಆಮದಾಗುತ್ತಿದೆ. ಜೊತೆಗೆ ಅನಧಿಕೃತವಾಗಿ ಇನ್ನಷ್ಟು ದೇಶಗಳಿಂದ ಅಡಕೆ ಆಮದು ಆಗುತ್ತಿದೆ ಎಂದು ದೂರಿದರು.ಸಂಸದರಾಗಿ ತಾವು ಕಾರ್ಯನಿರ್ವಹಿಸಿದ ಸಮಯದಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸಲು ಹಾಗೂ ಬೆಂಬಲ ಬೆಲೆ ದೊರಕಿಸುವ ನಿಟ್ಟಿನಲ್ಲಿ ಅಡಕೆ ಬೆಳೆ ಅಧ್ಯಯನ ನಡೆಸಿ ಗೋರಕ್‌ಸಿಂಗ್ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸ ಲಾಗಿತ್ತು. ಆದರೆ ಹಾಲಿ ಸಂಸದರು 10 ವರ್ಷದಲ್ಲಿ ಅಧಿಕಾರ ನಡೆಸಿದರೂ ಅನುಷ್ಟಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದರು.ಲೋಕಸಭಾ ಸದಸ್ಯರು ಬೆಳೆಗಾರರ ಸಮಸ್ಯೆ ಬಗೆಹರಿಸುವುದು ಮೂಲ ಕರ್ತವ್ಯ. ಕಳೆದ ತಮ್ಮ ಇಪ್ಪತ್ತು ತಿಂಗಳ ಅವಧಿ ಯಲ್ಲಿ ಚಿಕ್ಕಮಗಳೂರಿನಲ್ಲಿ ರೈಲ್ವೆ ನಿಲ್ದಾಣ ಉದ್ಘಾಟಿಸಲಾಗಿತ್ತು. ಅಂದು ಒಂದೇ ರೈಲು ಸಂಚರಿಸಿತ್ತು. 13 ವರ್ಷಗಳ ಬಳಿಕ ಇಂದಿಗೂ ಒಂದೇ ರೈಲು ಸಂಚರಿಸುತ್ತಿದೆ ಎಂದು ಹೇಳಿದರು.ಹಾಲಿ ಸಂಸದರು ಅಂದಿನಿಂದ ಕೇವಲ ಹೇಳಿಕೆ ಕೊಡುವುದು ಬಿಟ್ಟರೇ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಲೀಟರ್‌ಗೆ 35 ರು.ನಂತೆ ಪೆಟ್ರೋಲ್ ಕೊಡುತ್ತೇವೆಂದು ಹೇಳಿದ್ದರು. ಆದರೆ, ಇದೀಗ 104 ರು. ಆಗಿದೆ. ಯುಪಿಎ ಸರ್ಕಾರದಲ್ಲಿ 54 ರು. ಪೆಟ್ರೋಲ್ ಬೆಲೆಯಿದ್ದು ಕಚ್ಚಾತೈಲ ಬೆಲೆ ಹೆಚ್ಚಿತ್ತು. ಆದರೆ ಎನ್‌ಡಿಎ ಅಧಿಕಾರದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಿದ್ದರೂ ಪೆಟ್ರೋಲ್ ಏರಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.ಪೆಟ್ರೋಲ್ ಸೇರಿದಂತೆ ದಿನೋಪಯೋಗಿ ವಸ್ತುಗಳ ಬೆಲೆ ಏರಿಸಿರುವ ಪರಿಣಾಮ ಜನಸಾಮಾನ್ಯರ ಬದುಕು ದುಸ್ತರ ಗೊಂಡಿದೆ. ರೈತರ ಬೆಳೆಗೆ ಪರಿಹಾರ ನೀಡದೇ, ಸಂಕಷ್ಟಕ್ಕೆ ಸ್ಪಂದಿಸದಿರುವ ಕೇಂದ್ರ ಸರ್ಕಾರದ ನಡೆಯಿಂದ ಹಲವಾರು ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಿದೆ. ರೈತಾಪಿ ವರ್ಗಕ್ಕೆ ಸ್ಪಂದಿಸುವ ಪಕ್ಷವನ್ನು ಆಯ್ಕೆ ಮಾಡುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಬಡವರು, ದೀನ ದಲಿತರು ಹಾಗೂ ಅಲ್ಪಸಂಖ್ಯಾತರ ಭಾವನೆಗಳು, ಮನಸ್ಸನ್ನು ಕೆರಳಿಸಿ ಮತ ಕೇಳುವ ಸಂಸ್ಕೃತಿ ಬಿಜೆಪಿಯದು. ಬಡವರ ಜೀವನಾಭಿವೃದ್ಧಿಯನ್ನು ಯೋಚಿಸಿ, ಆರ್ಥಿಕವಾಗಿ ಮೇಲೆತ್ತುವ ವಿಚಾರವನ್ನುಟ್ಟುಕೊಂಡು ಮತ ಕೇಳುವ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.ಕೇಂದ್ರ ಸರ್ಕಾರ ಕೇವಲ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಬಿಎಸ್‌ಎನ್‌ಎಲ್, ಬ್ಯಾಂಕ್‌ಗಳು ಸೇರಿದಂತೆ ಅನೇಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಳುಗಿಸಿ ಖಾಸಗೀಕರಣಗೊಳಿಸಿದೆ. ರಾಜ್ಯದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 160 ಭರವಸೆಗಳಲ್ಲಿ 157 ಭರವಸೆಗಳನ್ನು ಈಡೇರಿಸಿತ್ತು. ಇದೀಗ 5 ಗ್ಯಾರಂಟಿಗಳನ್ನು ಕೆಲವೇ ತಿಂಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿದೆ ವಿಶ್ವಾಸಗಳಿಸಿದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿರುವ ಮಾಜಿ ಶಾಸಕರು ಸ್ವ ಅಭಿವೃದ್ಧಿ ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ಜನಪ್ರತಿ ನಿಧಿಯಾಗಿ ಕಾರ್ಯನಿರ್ವಹಿಸದೇ ಗುತ್ತಿಗೆದಾರರಾಗಿ ಮಾಜಿ ಶಾಸಕರು ಕಾರ್ಯನಿರ್ವಹಿಸಿದ್ದಾರೆ ಎಂದು ದೂರಿದರು.ಕಳಸಾಪುರ, ಸಿಂದಿಗೆರೆ, ಲಕ್ಯಾ ಸೇರಿದಂತೆ ಹಲವಾರು ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಸ್‌ ನಿಲ್ದಾಣ, ರಸ್ತೆ, ಕುಡಿಯುವ ನೀರು, ಸಮುದಾಯ ಭವನ ಸೇರಿದಂತೆ ಮೂಲ ಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ರಾಜ್ಯ ಕೃಷಿ ಸಂಸ್ಕರಣಾ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ, ಮುಖಂಡರಾದ ಮಹಡಿಮನೆ ಸತೀಶ್, ಕೆ.ವಿ.ಮಂಜುನಾಥ್, ಕೆಂಗೇಗೌಡ, ಶಂಕರನಾಯ್ಕ್, ತಿಮ್ಮೇಗೌಡ, ಅಚ್ಯುತ್‌ರಾವ್, ಸಂತೋಷ್ ಲಕ್ಯಾ, ಹೊನ್ನಾಬೋವಿ ಹಾಗೂ ಕಾರ್ಯಕರ್ತರು ಇದ್ದರು. 12 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗಡೆ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ರೇಖಾ ಹುಲಿಯಪ್ಪಗೌಡ, ಬಿ.ಎಚ್‌. ಹರೀಶ್‌ ಇದ್ದರು.